ಬುಧವಾರ, ಮೇ 25, 2022
29 °C
ಸಲಿಂಗಿಗಳು, ಲಿವ್–ಇನ್ ಸಂಬಂಧದಲ್ಲಿರುವರಿಗೆ ಅನ್ವಯ

ಐವಿಎಫ್‌ನಿಂದ ಮಗು ಪಡೆಯುವವರಿಗೆ ನಿಯಮ; ಸಂಸದೀಯ ಸಮಿತಿ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿನ ಸಂಕೀರ್ಣತೆಯ ಕಾರಣಗಳಿಂದಾಗಿ, ಸಲಿಂಗ ಮತ್ತು ಲಿವ್–ಇನ್  (ಮದುವೆಯಾಗದೇ ಒಟ್ಟಿಗೆ ವಾಸಿಸುವುದು) ಸಂಬಂಧದಲ್ಲಿರುವ ದಂಪತಿಗಳಿಗೆ ಐವಿಎಫ್‌ ತಂತ್ರಜ್ಞಾನದ ಮೂಲಕ ಶಿಶುಗಳನ್ನು ಪಡೆಯಲು ಅನುಮತಿ ನೀಡಬಾರದು ಎಂದು ಸಂಸದೀಯ ಸಮಿತಿಯೊಂದು ಶುಕ್ರವಾರ ತಿಳಿಸಿದೆ.

ಕಾನೂನುಬದ್ಧವಾಗಿ ಮದುವೆಯಾಗದ ವ್ಯಕ್ತಿಗಳು ಒಟ್ಟಿಗೆ ವಾಸಿಸುತ್ತಿದ್ದರೂ, ಅವರು ಮಕ್ಕಳನ್ನು ಹೊಂದುವುದನ್ನು ಸಮಾಜವು ಒಪ್ಪಿಕೊಳ್ಳುವುದು ಸುಲಭವಲ್ಲ. ಭಾರತೀಯ ಕುಟುಂಬ ರಚನೆ ಮತ್ತು ಸಾಮಾಜಿಕ ಪರಿಸರವನ್ನು ಪರಿಗಣಿಸಿದಾಗ ಇದು ಕಷ್ಟ. ಲಿವ್–ಇನ್ ಸಂಬಂಧದಲ್ಲಿರುವ ಪೋಷಕರು ಅಥವಾ ಸಲಿಂಗಿಗಳು ಬೇರ್ಪಟ್ಟಾಗ ಉಂಟಾಗುವ ಸಮಸ್ಯೆಗಳನ್ನು ಪರಿಗಣಿಸಿರುವ ಸಮಿತಿಯು, ಇಂತಹವರಿಗೆ ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಮಕ್ಕಳನ್ನು ಪಡೆಯುವ ಅವಕಾಶ ನೀಡಬಾರದು ಎಂದಿದೆ.

ತಂತ್ರಜ್ಞಾನದ ನೆರವಿನ ಸಂತಾನೋತ್ಪತ್ತಿ (ನಿಯಂತ್ರಣ) ಮಸೂದೆ 2020 ಅನ್ನು  ಆರೋಗ್ಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಪರಿಶೀಲಿಸಿದೆ. ಈ ವರದಿಯು, ಬಾಡಿಗೆತಾಯಿ (ನಿಯಂತ್ರಣ) ಮಸೂದೆ 2019 ಅನ್ನು ಪರಿಶೀಲಿಸಿದ ಸಂಸತ್ ಸದಸ್ಯರ ಮತ್ತೊಂದು ಸಮಿತಿಯು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನೇ  ಹೋಲುತ್ತದೆ.

ಮಸೂದೆಯನ್ನು ಪರಿಶೀಲಿಸಿದ್ದ ಆಯ್ಕೆ ಸಮಿತಿಯು, ಲಿವ್-ಇನ್ ಸಂಬಂಧದಲ್ಲಿರುವವರು ಮತ್ತು ಸಲಿಂಗಿಗಳು ಬಾಡಿಗೆ ತಾಯಿ (ಸರೋಗಸಿ) ಸೇವೆಗಳನ್ನು ಪಡೆಯುವುದನ್ನು ಮಸೂದೆಯಲ್ಲಿ ಸೇರಿಸಿರಲಿಲ್ಲ.

ಈ ಎರಡೂ ಮಸೂದೆಗಳು ಮಕ್ಕಳಿಲ್ಲದ ದಂಪತಿಗಳಿಗೆ ದುಬಾರಿ ಐವಿಎಫ್ ಸೇವೆಗಳನ್ನು ನೀಡಲು ದೇಶಾದ್ಯಂತ ತಲೆಎತ್ತಿರುವ ನೂರಾರು ಫಲವತ್ತತೆ ಚಿಕಿತ್ಸಾಲಯಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ.

ಮೂರಕ್ಕಿಂತ ಹೆಚ್ಚು ಭ್ರೂಣಗಳನ್ನು ಮಹಿಳೆಯ ಗರ್ಭಾಶಯದಲ್ಲಿ ಇರಿಸಬಾರದು ಮತ್ತು ಗ್ಯಾಮೆಟ್‌ಗಳನ್ನು ಗರಿಷ್ಠ ಹತ್ತು ವರ್ಷಗಳವರೆಗೆ ಸಂರಕ್ಷಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು