ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಭೂಸೇನೆಗೆ 'ಮಲ್ಟಿಮೋಡ್ ಗ್ರೆನೇಡ್' ಬಲ: ಏಕಿಷ್ಟು ಮಹತ್ವ?

ಮಹತ್ವದ ಬೆಳವಣಿಗೆ
Last Updated 3 ಅಕ್ಟೋಬರ್ 2020, 16:04 IST
ಅಕ್ಷರ ಗಾತ್ರ
ADVERTISEMENT
""
""
""

ಭೂಸೇನೆಯ ಸಂರಚನೆ, ಸಂಘಟನೆ ಮತ್ತು ಯುದ್ಧೋಪಕರಣಗಳಲ್ಲಿ ಅಗತ್ಯ ಬದಲಾವಣೆ ತರಲು ರಕ್ಷಣಾ ಇಲಾಖೆ ಈಚಿನ ದಿನಗಳಲ್ಲಿ ಪ್ರಯತ್ನ ತೀವ್ರಗೊಳಿಸಿದೆ. ನೆರೆಯ ಪಾಕಿಸ್ತಾನ ಮತ್ತು ಚೀನಾಗಳು ತಮ್ಮ ಸಶಸ್ತ್ರಪಡೆಗಳನ್ನು ಮೇಲ್ದರ್ಜೆಗೇರಿಸುವ ಯತ್ನದಲ್ಲಿ ತುಸು ಯಶಸ್ಸು ಸಾಧಿಸಿದ ಬೆನ್ನಲ್ಲೇ ಭಾರತ ಸರ್ಕಾರವೂ, ತನ್ನ ಸಶಸ್ತ್ರ ಪಡೆಗಳನ್ನು ಮೇಲ್ದರ್ಜೆಗೇರಿಸಲು ಉತ್ಸುಕವಾಗಿದೆ.

ಮೂರೂ ಸಶಸ್ತ್ರ ಪಡೆಗಳ ಸಂಯೋಜನೆ ನಿರ್ವಹಿಸುವ ಚೀಫ್ ಆಫ್ ಡಿಫೆನ್ಸ್‌ ಸ್ಟಾಫ್ ಹುದ್ದೆಯ ರಚನೆ, ದೇಶದ ವಿವಿಧ ಭಾಗಗಳ ರಕ್ಷಣಾ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಕಮಾಂಡ್ ವ್ಯವಸ್ಥೆಯ ಮರುರಚನೆಯ ಪ್ರಯತ್ನ, ಯುದ್ಧೋಪಕರಣಗಳ ಆಧುನೀಕರಣದ ಯತ್ನಗಳು ಈ ನಿಟ್ಟಿನಲ್ಲಿ ಉಲ್ಲೇಖಾರ್ಹ.

ಯುದ್ಧೋಪಕರಣಗಳ ಉತ್ಪಾದನೆಗೆ ಭಾರತದ ಖಾಸಗಿ ಕಂಪನಿಗಳಿಗೂ ಅವಕಾಶ ನೀಡಬಹುದು ಎಂಬ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಈ ಹಿಂದೆಯೇ ಅನುಮತಿ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯನ್ನು ಪ್ರತಿಪಾದಿಸಿದ ನಂತರ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ದೊರೆತಿದೆ. ಆಮದು ಅವಲಂಬಿತ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ಸುಪರ್ದಿಯಲ್ಲಿ ಮಾತ್ರವೇ ಇದ್ದ ರಕ್ಷಣಾ ಉಪಕರಣಗಳ ಉತ್ಪಾದನೆಯನ್ನು ದೇಶೀಯವಾಗಿ ಖಾಸಗಿ ಕಂಪನಿಗಳಿಗೆ ವಹಿಸಿಕೊಡುವ ಕಾರ್ಯಗಳೂ ಆರಂಭವಾಗಿವೆ.

ನಮ್ಮ ಭೂಸೇನೆಯಲ್ಲಿ ಬಳಕೆಯಲ್ಲಿರುವ ‘36 ಎಂ’ ಗ್ರೆನೇಡ್‌ಗಳನ್ನು ಹಿಂಪಡೆದು, ‘ಎಂಎಂಎಚ್‌ಜಿ’ ಗ್ರೆನೇಡ್‌ಗಳನ್ನು ಬಳಕೆಗೆ ತರುವ ಪ್ರಯತ್ನಕ್ಕೆ ಇದೀಗ ಚಾಲನೆ ಸಿಕ್ಕಿದೆ. ಹತ್ತಾರು ವರ್ಷಗಳಿಂದ ನಡೆಯುತ್ತಿದ್ದ ಸಂವಾದ, ಸಂಶೋಧನೆ ಮತ್ತು ಪರೀಕ್ಷೆಗಳ ಫಲವಾಗಿ ಸಿದ್ಧವಾಗಿರುವ ಸೂತ್ರವನ್ನು (ಫಾರ್ಮುಲಾ) ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ನಾಗಪುರ ಮೂಲದ ಸೋಲಾರ್‌ ಗ್ರೂಪ್‌ನ ಅಧೀನ ಸಂಸ್ಥೆಯಾದ ಇಇಎಲ್‌ಗೆ ವರ್ಗಾಯಿಸಿದೆ.

409 ಕೋಟಿ ರೂಪಾಯಿ ಮೌಲ್ಯದ ಈ ಯೋಜನೆಯಲ್ಲಿ 10 ಲಕ್ಷ ‘ಎಂಎಂಎಚ್‌ಜಿ’ ಮಾದರಿಯ ಗ್ರೆನೇಡ್‌ಗಳನ್ನು ಇಇಎಲ್‌ ಉತ್ಪಾದಿಸಿ, ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಿದೆ. ಚೀನಾ ಗಡಿತಂಟೆ, ಲಡಾಖ್ ವಲಯದಲ್ಲಿ ದೊಡ್ಡಮಟ್ಟದ ಸೇನಾ ನಿಯೋಜನೆಯ ಜೊತೆಜೊತೆಗೆ ರಕ್ಷಣಾ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಕ್ರಮವೊಂದು ಈ ಮೂಲಕ ಜಾರಿಯಾದಂತೆ ಆಗಿದೆ.

ಎಂಎಂಎಚ್‌ಜಿ - ಮಲ್ಟಿಮೋಡ್ ಹ್ಯಾಂಡ್ ಗ್ರೆನೇಡ್

ಏನಿದು ಗ್ರೆನೇಡ್?

ಗ್ರೆನೇಡ್ ಎನ್ನುವುದು ಕೈಗಳಿಂದ ಎಸೆಯುವ ಸ್ಫೋಟಕ. ಅನಾನಸ್‌ ಆಕಾರ ಹೋಲುವ ಹೊರಮೈನ ರಕ್ಷಾ ಕವಚದೊಳಗೆ ಸ್ಫೋಟಿಸುವ ರಾಸಾಯನಿಕ ಪುಡಿ, ಸ್ಫೋಟದ ಜೊತೆಗೆ ವೇಗವಾಗಿ ಚಿಮ್ಮುವ ಮೂಲಕ ಶತ್ರುವಿಗೆ ಗರಿಷ್ಠ ಹಾನಿಯುಂಟು ಮಾಡಬಲ್ಲ ಮೊನಚಾದ ಲೋಹದ ಚೂರುಗಳು, ಸ್ಫೋಟಕ್ಕೆ ಕಾರಣವಾಗುವ ಡಿಟೊನೇಟರ್‌ ವ್ಯವಸ್ಥೆ, ಡಿಟೊನೇಟರ್‌ ಕಾರ್ಯನಿರ್ವಹಣೆ ನಿಯಂತ್ರಿಸುವ ಫೈರಿಂಗ್ ಪಿನ್, ಫ್ಯೂಸ್‌ ಇರುತ್ತದೆ. ಟೆನಿಸ್ ಬಾಲ್‌ಗಿಂತಲೂ ಚಿಕ್ಕದಾದ ಗ್ರೆನೇಡ್ ಸ್ಫೋಟಗೊಂಡ ಬಿಂದುವಿನಿಂದ 16 ಅಡಿ ವ್ಯಾಸದಲ್ಲಿ ಇರುವವರನ್ನು ಕೊಲ್ಲುತ್ತದೆ, 30 ಅಡಿ ವ್ಯಾಸದಲ್ಲಿರುವವರನ್ನು ಮಾರಣಾಂತಿಕವಾಗಿ ಘಾಸಿಗೊಳಿಸುತ್ತದೆ.

ಭೂಸೇನಾ ತುಕಡಿಗಳು ಸಾಮಾನ್ಯವಾಗಿ ಶತ್ರುಸೇನೆಯ ಹತ್ತಿರದಲ್ಲಿದ್ದಾಗ, ಕಲ್ಲೆಸೆತದ ದೂರದಲ್ಲಿರುವ ಬಂಕರ್‌ಗಳನ್ನು ನಾಶಪಡಿಸಲು, ಮುನ್ನುಗ್ಗಿ ಬರುವ ಟ್ಯಾಂಕರ್‌ಗಳ ವೇಗ ತಗ್ಗಿಸಲು ಗ್ರೆನೇಡ್‌ಗಳನ್ನು ಬಳಸುತ್ತವೆ.

ಸೇನೆಯಲ್ಲಿ ಬಳಕೆಯಲ್ಲಿರುವ ಹಳೆಯ ಆಯುಧ

ಕನ್ನಡದಲ್ಲಿ ಕೈ ಬಾಂಬ್ ಎಂದು ಕರೆಯಲಾಗುವ ಗ್ರೆನೇಡ್‌ಗಳು ಭೂಸೇನೆಯ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಈ ಆಯುಧಗಳ ಬಳಕೆ ಮಾಹಿತಿಯ ಮೊದಲು ಉಲ್ಲೇಖಗಳು ಕ್ರಿ.ಶ.717ರಿಂದ ಸಿಗುತ್ತವೆ. ‘ಗ್ರೀಕ್ ಫೈರ್’ ಎಂದು ಆರಂಭದ ದಿನಗಳಲ್ಲಿ ಗ್ರೆನೇಡ್‌ಗಳನ್ನು ಕರೆಯುತ್ತಿದ್ದರು. ಐರೋಪ್ಯ ಸೇನೆಗಳಿಂದ ಈ ಆಯುಧ ಬಳಕೆಯನ್ನು ಮಧ್ಯಪ್ರಾಚ್ಯ ದೇಶಗಳ ಸೇನೆಗಳು ಕಲಿತವು. ಅಲ್ಲಿಂದ ಇದು ರೇಷ್ಮೆ ಹಾದಿಯಗುಂಟ (ಸಿಲ್ಕ್ ರೋಡ್) ಪ್ರಯಾಣಿಸಿ ಚೀನಾಕ್ಕೂ ತಲುಪಿತು. ‘ಆಕಾಶ ಅಲುಗಿಸುವ ಸಿಡಿಲು’ (ಸ್ಕೈ ಶೇಕಿಂಗ್ ಥಂಡರ್) ಎಂದು ಮಧ್ಯಯುಗದ ಚೀನಾ ಮಿಲಿಟರಿ ಕೈಪಿಡಿಗಳು ಗ್ರೆನೇಡ್‌ಗಳನ್ನು ಉಲ್ಲೇಖಿಸಿವೆ.

ಭಾರತೀಯ ಸೇನೆಯಲ್ಲಿ ‘ಗ್ರೆನೇಡಿಯರ್ಸ್‌’ ಹೆಸರಿನ ರೆಜಿಮೆಂಟ್‌ ಸಹ ಇದೆ. ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಈ ರೆಜಿಮೆಂಟ್‌ ಎರಡೂ ಮಹಾಯುದ್ಧಗಳು ಸೇರಿದಂತೆ ಸ್ವಾತಂತ್ರ್ಯ ಪಡೆದ ನಂತರ ಭಾರತ ಈವರೆಗೆ ಸೆಣೆಸಿರುವ ಎಲ್ಲ ಯುದ್ಧಗಳಲ್ಲಿ ಸಕ್ರಿಯಪಾತ್ರ ನಿರ್ವಹಿಸಿದೆ. ಗ್ರೆನೇಡಿಯರ್ಸ್‌ನ 18ನೇ ಬೆಟಾಲಿಯನ್‌ಗೆ ಪರಮ್‌ವೀರ್ ಚಕ್ರ (ಕಾರ್ಗಿಲ್), 22ನೇ ಬೆಟಾಲಿಯನ್‌ಗೆ ಅಶೋಕ್‌ ಚಕ್ರ (ಕಾರ್ಗಿಲ್) ಮತ್ತು 25ನೇ ಬೆಟಾಲಿಯನ್‌ಗೆ ಪರಾಕ್ರಮಿ ಪಚ್ಚೀಸ್ ಎನ್ನುವ ಹೆಸರುಗಳೇ ರೂಢಿಗೆ ಬಂದಿವೆ. ಈ ರೆಜಿಮೆಂಟ್‌ನ ಯೋಧರ ಕೆಚ್ಚು ಮತ್ತು ಯುದ್ಧಗಳ ನಿರ್ಣಾಯಕ ಸಂದರ್ಭಗಳಲ್ಲಿ ತೋರುವ ಪರಾಕ್ರಮ ಹೆಸರುವಾಸಿ.

ಉತ್ತಮ ದೇಹದಾರ್ಢ್ಯ ಹೊಂದಿರುವ ಮತ್ತು ಹಲವು ಪರೀಕ್ಷೆಗಳಲ್ಲಿ ಪಾಸಾದವರನ್ನು ಮಾತ್ರವೇ ಸೇನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ‘ಅರ್ಹರು ಬರುವವರೆಗೆ ಹುದ್ದೆಗಳು ಖಾಲಿಯಿದ್ದರೂ ಪರವಾಗಿಲ್ಲ’ ಎಂಬುದು ಬಹುಕಾಲದಿಂದ ಸೇನೆ ಪಾಲಿಸಿಕೊಂಡು ಬಂದಿರುವ ನಿಯಮ. ಇಂಥ ಅರ್ಹರಲ್ಲಿಯೂ ಆಯ್ದ ಕೆಲವರಿಗೆ ಮಾತ್ರವೇ ಗ್ರೆನೇಡಿಯರ್ಸ್‌ ರೆಜಿಮೆಂಟ್‌ನಲ್ಲಿ ಸೇವೆ ಅವಕಾಶ ಸಿಗುತ್ತದೆ. ಅತ್ಯಂತ ಕಠಿಣ ಮತ್ತು ನಿರ್ಣಾಯಕ ಯುದ್ಧತಂತ್ರದ ಭಾಗವಾಗುವ ಗ್ರೆನೇಡಿಯರ್ಸ್‌ ರೆಜಿಮೆಂಟ್‌ನಲ್ಲಿ ಕೆಲಸ ಮಾಡುವುದು ನಮ್ಮ ಸೈನಿಕರಿಗೆ ಹೆಮ್ಮೆಯ ಸಂಗತಿ.

ಮುಂದಿನ ದಿನಗಳಲ್ಲಿ ಸೇನೆಯ ಭಾಗವಾಗಲಿರುವ ಮಲ್ಟಿಮೋಡ್ ಗ್ರೆನೇಡ್‌ಗಳ ತಾಂತ್ರಿಕ ಮಾಹಿತಿ

ಮಲ್ಟಿಮೋಡ್ ಗ್ರೆನೇಡ್: ಹಾಗೆಂದರೇನು?

ಗ್ರೆನೇಡ್‌ಗಳಲ್ಲಿ ಅಫೆನ್ಸಿವ್ ಮತ್ತು ಡಿಫೆನ್ಸಿವ್ ಎಂಬ ಎರಡು ಮುಖ್ಯ ವಿಧಗಳಿವೆ. ಈವರೆಗೆ ಭಾರತೀಯ ಸೇನೆಯು ‘36 ಎಂ’ ಮಾದರಿಯ ‘ಮಿಲ್ಸ್‌ ಬಾಂಬ್’ ತಂತ್ರಜ್ಞಾನದ ಗ್ರೆನೇಡ್‌ಗಳನ್ನು ಮಾತ್ರವೇ ಬಳಸುತ್ತಿತ್ತು. ಇದು ಡಿಫೆನ್ಸಿವ್ ವರ್ಗಕ್ಕೆ ಸೇರುತ್ತದೆ. ಅಂದರೆ, ಗ್ರೆನೇಡ್ ಎಸೆಯುವ ಯೋಧ ಒಂದೆಡೆ (ಗೋಡೆ, ಕಂದಕ ಇತ್ಯಾದಿ) ರಕ್ಷಣೆ ಪಡೆದು, ಬಯಲಿನಲ್ಲಿರುವ ವೈರಿಯ ಮೇಲೆ ಈ ಗ್ರೆನೇಡ್‌ಗಳನ್ನು ಎಸೆಯಬೇಕಿತ್ತು. ಸ್ಫೋಟದ ತೀವ್ರತೆ ಮತ್ತು ಛಿದ್ರಗೊಳ್ಳುವ ಲೋಹದ ಕವಚದ ತುಣುಕುಗಳು ವೈರಿಗೆ ನಷ್ಟವುಂಟು ಮಾಡುತ್ತಿದ್ದವು. ತನ್ನ ದೇಹವನ್ನು ರಕ್ಷಿಸಿಕೊಳ್ಳುವ ವಾತಾವರಣ ಸಿಗದ ಸಂದರ್ಭದಲ್ಲಿ ಗ್ರೆನೇಡ್‌ಗಳನ್ನು ಬಳಸಿದಾಗ ಗ್ರೆನೇಡ್ ಎಸೆದ ಯೋಧನೂ ಅಪಾಯಕ್ಕೆ ಈಡಾಗುವ ಸಾಧ್ಯತೆಯಿತ್ತು.

ಹಲವು ವರ್ಷಗಳ ಈ ಮಿತಿಯನ್ನು ಮೀರುವ ಪ್ರಯತ್ನ ಅವಿರತವಾಗಿ ಸಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಸೇನೆ ಮತ್ತು ಆರ್ಡಿನೆನ್ಸ್‌ ಫ್ಯಾಕ್ಟರಿ ಬೋರ್ಡ್ (ಒಎಫ್‌ಬಿ) ಹಲವು ಪ್ರಯೋಗಗಳ ನಂತರ ಜಂಟಿಯಾಗಿ ಮಲ್ಟಿಮೋಡ್ ಹ್ಯಾಂಡ್‌ ಗ್ರೆನೇಡ್ (ಎಂಎಂಎಚ್‌ಜಿ) ತಂತ್ರಜ್ಞಾನ ಅಭಿವೃದ್ಧಿಪಡಿಸಿದವು. ಯೋಧರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿದ್ದಾಗ ಮತ್ತು ಅಂಥ ಸಾಧ್ಯತೆ ಇಲ್ಲದಿದ್ದಾಗ, ಅಂದರೆ ಎರಡೂ ವಿಭಿನ್ನ ಸಂದರ್ಭಗಳಲ್ಲಿ ಬಳಸಬಹುದಾದ ಗ್ರೆನೇಡ್‌ಗಳ ತಂತ್ರಜ್ಞಾನವನ್ನು ಇದೀಗ ಅಭಿವೃದ್ಧಿಪಡಿಸಲಾಗಿದೆ.

ಹೊಸ ತಂತ್ರಜ್ಞಾನ

ಭಾರತೀಯ ಸೇನೆಯು ಪ್ರಸ್ತುತ ಉಪಯೋಗಿಸುತ್ತಿರುವ 36 ಎಂ ಗ್ರೆನೇಡ್‌ನ ವಿಶ್ವಾಸಾರ್ಹತೆ (ಸ್ಫೋಟಿಸುವ ಸಂಭವನೀಯತೆ) ಬಗ್ಗೆಯೇ ಕೆಲ ಪ್ರಶ್ನೆಗಳಿವೆ. ಇದರ ಜೊತೆಗೆ ಗ್ರೆನೇಡ್‌ ಸ್ಫೋಟಿಸಿದಾಗ ಅದರ ಕವಚದ ತುಣುಕುಗಳು ಎಲ್ಲೆಂದರಲ್ಲಿ ಚಿಮ್ಮುವುದರಿಂದ ಗ್ರೆನೇಡ್ ಎಸೆದವರಿಗೂ ಜೀವಕ್ಕೆ ಕುತ್ತು. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡೇ ಹೊಸ ಮಾದರಿಯ ಮಲ್ಟಿಮೋಡ್ ಹ್ಯಾಂಡ್ ಗ್ರೆನೇಡ್ ರೂಪಿಸಲಾಗಿದೆ. ಗ್ರೆನೇಡ್‌ನ ಒಳಗೆ ಕೊಳವೆಯಾಕಾರದ ಉಕ್ಕಿನ ಗೋಡೆಗಳಿವೆ. ಇವು ಕವಚದ ತುಣುಕುಗಳು ಒಂದೇ ದಿಕ್ಕಿನತ್ತ ಸಿಡಿಯುವಂತೆ ಮಾಡಲು ಸಹಕಾರಿ’ ಎಂದು ಡಿಆರ್‌ಡಿಒದ ಟರ್ಮಿನಲ್ ಬಾಲಸ್ಟಿಕ್ ರೀಸರ್ಚ್ ಲ್ಯಾಬೊರೇಟರಿ (ಟಿಬಿಆರ್‌ಎಲ್) ವಿವರಿಸುತ್ತದೆ. ಭಾರತೀಯ ಸೈನಿಕರ ಕೈ ಸೇರುತ್ತಿರುವ ಹೊಸ ಮಾದರಿಯ ಗ್ರೆನೇಡ್‌ಗಳನ್ನು ರೂಪಿಸಿದ್ದು ಸಹ ಇದೇ ಸಂಸ್ಥೆ.

ಎಂಎಂಎಚ್‌ಜಿ ಡಿಫೆನ್ಸಿವ್‌ ಮತ್ತು ಅಫೆನ್ಸಿವ್‌ ಮಾದರಿಗಳ ಗ್ರೆನೇಡ್‌ಗಳನ್ನು ರೂಪಿಸಿದೆ. ಡಿಫೆನ್ಸಿವ್ ಮೋಡ್‌ನಲ್ಲಿ ಎಂಎಂಎಚ್‌ಜಿ ಗ್ರೆನೇಡ್‌ಗಳಿಗೆ ಛಿದ್ರಗೊಳ್ಳುವ ಲೋಹದ ಕವಚವಿರುತ್ತದೆ. ಇದು ಸ್ಫೋಟಗೊಳ್ಳುವ ಬಿಂದುವಿನಿಂದ 32 ಅಡಿ ವ್ಯಾಸದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ. ಇದೇ ಗ್ರೆನೇಡ್‌ನ ಅಫೆನ್ಸಿವ್ ಮೋಡ್‌ನಲ್ಲಿ ಛಿದ್ರಗೊಳ್ಳುವ ಲೋಹದ ಕವಚ ಇರುವುದಿಲ್ಲ. ಸ್ಫೋಟದಿಂದ ವೈರಿಗೆ ಹಾನಿಯಾಗುತ್ತೆ, ಕಂಗಾಲಾಗುವಂತೆ ಮಾಡುತ್ತದೆ. ಅಫೆನ್ಸಿವ್‌ ಮೋಡ್‌ನಲ್ಲಿ ಈ ಗ್ರೆನೇಡ್‌ ಸ್ಫೋಟಗೊಳ್ಳುವ ಸ್ಥಳದಿಂದ 16 ಅಡಿ ವ್ಯಾಸದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡುತ್ತೆ. ಆದರೆ ಗ್ರೆನೇಡ್ ಎಸೆದವರ ಜೀವಕ್ಕೆ ಹೆಚ್ಚು ಆಪತ್ತು ಇರುವುದಿಲ್ಲ.

ಎಂಎಂಎಚ್‌ಜಿ ಪೂರೈಕೆ ವಿಚಾರ

ಎಂಎಂಎಚ್‌ಜಿ ಗ್ರೆನೇಡ್‌ಗಳ ಪೂರೈಕೆಗಾಗಿ ರಕ್ಷಣಾ ಇಲಾಖೆಯ ಖರೀದಿ ವಿಭಾಗವು ಗುರುವಾರ (ಅ.1) ಎಕನಾಮಿಕ್ ಎಕ್ಸ್‌ಪ್ಲೋಸಿವ್ ಲಿಮಿಟೆಡ್ - ಇಇಎಲ್ ಜೊತೆಗೆ ಈ ಸಂಬಂಧದ ಒಡಂಬಡಿಕೆ ಪತ್ರಕ್ಕೆ ಸಹಿಹಾಕಿದೆ. ನಾಗಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸೋಲಾರ್‌ ಗ್ರೂಪ್‌ನ ಅಧೀನ ಸಂಸ್ಥೆ ಇಇಎಲ್. 10 ಲಕ್ಷ ಎಂಎಂಎಚ್‌ಜಿಗಳ ಪೂರೈಕೆಗಾಗಿ ಮಾಡಿಕೊಂಡ ಒಪ್ಪಂದದ ಒಟ್ಟು ಮೌಲ್ಯ 409 ಕೋಟಿ ರೂಪಾಯಿ. ಪ್ರಯೋಗಗಳಿಗಾಗಿ 4 ವರ್ಷಗಳ ಹಿಂದೆಯೇ ಡಿಆರ್‌ಡಿಒ ತಂತ್ರಜ್ಞಾನವನ್ನು ಇಇಎಲ್ ಕಂಪನಿಗೆ ನೀಡಿತ್ತು. ಹಲವು ತೆರನಾದ ಭೂಮೇಲ್ಮೈ ಮತ್ತು ವಾತಾವರಣಗಳಲ್ಲಿ ಹೊಸ ಮಾದರಿಯ ಗ್ರೆನೇಡ್‌ಗಳನ್ನು ಪರೀಕ್ಷಿಸಲಾಗಿದೆ. ಸುರಕ್ಷೆ ಮತ್ತು ವಿಶ್ವಾಸಾರ್ಹತೆ ವಿಚಾರದಲ್ಲಿ ಶೇ 99ರಷ್ಟು ಖಾತ್ರಿ ಬಂದಿದೆ.

ಸಂಪೂರ್ಣ ದೇಶೀಯ ತಂತ್ರಜ್ಞಾನ ಮತ್ತು ನಿರ್ಮಾಣದ ಶಸ್ತ್ರಗಳನ್ನು ಅಭಿವೃದ್ಧಿಪಡಿಸುವ ಭಾರತ ಸರ್ಕಾರದ ಯತ್ನದಲ್ಲಿ ಇದು ಮಹತ್ವದ ಮೈಲುಗಲ್ಲು. ಅತ್ಯಾಧುನಿಕ ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲು ಸರ್ಕಾರ ಮುಂದಾಗಿದೆ ಎಂದು ರಕ್ಷಣಾ ಇಲಾಖೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸಾಮಾನ್ಯ ವಾತಾವರಣದಲ್ಲಿ, ವೈಜ್ಞಾನಿಕವಾಗಿ ದಾಸ್ತಾನು ಇರಿಸಿದಾಗ ಈ ಗ್ರೆನೇಡ್‌ಗಳ ಗರಿಷ್ಠ ಬಳಕೆಯ ಅವಧಿ ಉತ್ಪಾದನೆಯಾದ ದಿನದಿಂದ 15 ವರ್ಷಗಳು. ಈ ಗ್ರೆನೇಡ್‌ನಲ್ಲಿ ಡಿಟೊನೇಟರ್‌ ಆನ್ ಆದ ನಂತರ ಸ್ಫೋಟದ ಅವಧಿಯನ್ನು ಮುಂದೂಡುವ ಎರಡು ಡಿಲೆ ಟ್ಯೂಬ್‌ಗಳು ಮತ್ತು ಸ್ಫೋಟಗೊಂಡಾಗ ಸಿಡಿಯುವ 3800 ಸಮಾನ ಕಣಗಳು ಇದರಲ್ಲಿರುತ್ತವೆ ಎಂದು ಕಂಪನಿಯ ವೆಬ್‌ಸೈಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT