ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಭಾರಿ ನಷ್ಟದಲ್ಲಿ ಹೈದರಾಬಾದ್ ಮೆಟ್ರೊ ಯೋಜನೆ, ಉನ್ನತ ಮಟ್ಟದ ಸಮಿತಿ ರಚನೆ

Last Updated 15 ಸೆಪ್ಟೆಂಬರ್ 2021, 6:43 IST
ಅಕ್ಷರ ಗಾತ್ರ

ಹೈದರಾಬಾದ್: ಹೈದರಾಬಾದ್‌ ನಗರದಲ್ಲಿ ಮೆಟ್ರೊ ರೈಲು ಯೋಜನೆ ಭಾರಿ ನಷ್ಟದಲ್ಲಿದ್ದು, ಅದರ ಸಾಧಕ–ಬಾಧಕಗಳನ್ನು ಪರಿಶೀಲಿಸಲು ತೆಲಂಗಾಣ ಸರ್ಕಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಕೋವಿಡ್‌ ಪಿಡುಗು ಹಾಗೂ ಲಾಕ್‌ಡೌನ್‌ ಕಾರಣದಿಂದಾಗಿ ಮೆಟ್ರೊ ರೈಲು ಕಾರ್ಯನಿರ್ವಹಣೆಯಲ್ಲಿ ಭಾರಿ ನಷ್ಟವಾಗಿದೆ. ಈ ಸಂಬಂಧ ನೆರವು ನೀಡುವಂತೆ ಕೋರಿ ಹೈದರಾಬಾದ್ ಮೆಟ್ರೊ ರೈಲು ಕಾರ್ಯಾಚರಣೆ ನಿರ್ವಹಿಸುತ್ತಿರುವ ಎಲ್‌ ಅಂಡ್‌ ಟಿ ಕಂಪನಿ ಸಲ್ಲಿಸಿರುವ ಮನವಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಎಲ್‌ ಅಂಡ್ ಟಿ ಮೆಟ್ರೊ ರೈಲು ಕಂಪನಿಯ ವಾರ್ಷಿಕ ವರದಿಯ ಪಕ್ರಾರ, ‘ಕಳೆದ ಆರ್ಥಿಕ ವರ್ಷದಲ್ಲಿ ಮೆಟ್ರೊ ರೈಲು ಕಾರ್ಯಾಚರಣೆ ಮತ್ತು ಇತರೆ ಮೂಲಗಳಿಂದ ಬರುವ ಆದಾಯ (ಇದರಲ್ಲಿ ಟಿಕೆಟ್‌ ದರ ಮತ್ತು ತೆರಿಗೆಯೇತರ ದರ ಸೇರಿದೆ) ₹228 ಕೋಟಿ. ಆದರೆ, ಹಿಂದಿನ ವರ್ಷದ ಈ ಆದಾಯ ₹598 ಕೋಟಿ ಇತ್ತು.

ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ, ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಭಾರಿ ಕುಸಿತ ಕಂಡಿದ್ದರ ಪರಿಣಾಮವಾಗಿ ಪ್ರಸಕ್ತ ವರ್ಷ ಕಂಪನಿಗೆ ₹1,767 ಕೋಟಿ ನಷ್ಟವಾಗಿದೆ. ಹಿಂದಿನ ವರ್ಷ ₹382 ಕೋಟಿಯಷ್ಟು ನಷ್ಟವಾಗಿತ್ತು ಎಂಬ ಅಂಶ ವರದಿಯಲ್ಲಿದೆ.

ಮೆಟ್ರೊ ರೈಲು ಕಾರ್ಯನಿರ್ವಹಣೆಯಲ್ಲಿ ನಷ್ಟವಾಗುತ್ತಿದ್ದು, ಈ ಸಂಬಂಧ ಸರ್ಕಾರ ನೆರವು ನೀಡಬೇಕೆಂದು ಕಂಪನಿ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರು, ಎಲ್‌ ಅಂಡ್ ಟಿ ಮೆಟ್ರೊ ರೈಲು ಕಾರ್ಯನಿರ್ವಹಣೆ ವಿಭಾಗ, ಸಚಿವರು ಹಾಗೂ ಸರ್ಕಾರದ ಅಧಿಕಾರಿಗೊಳೊಂದಿಗೆ ಸಭೆ ನಡೆಸಿ, ಮೆಟ್ರೊ ರೈಲು ಯೋಜನೆಯನ್ನು ಬೆಂಬಲಿಸುವ ಜೊತೆಗೆ, ಪುನಶ್ಚೇತನಕ್ಕೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇದಕ್ಕೂ ಮೊದಲು, ಮೆಟ್ರೊ ರೈಲು ಕಾರ್ಯನಿರ್ವಹಣೆಯ ಸಾಧಕ ಬಾಧಕ ಕುರಿತು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ಆ ಸಮಿತಿಯಲ್ಲಿ ಪೌರಾಡಳಿತ ಸಚಿವ ಕೆ.ಟಿ.ರಾಮರಾವ್ ಮತ್ತು ಸಚಿವ ವೇಮುಲಾ ಪ್ರಶಾಂತ್ ರೆಡ್ಡಿ, ಇತರ ಹಿರಿಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.

ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಹೈದರಾಬಾದ್ ಮೆಟ್ರೋವನ್ನು ನಷ್ಟದಿಂದ ಹೇಗೆ ಪಾರುಮಾಡುವುದು ಎಂಬುದರ ಕುರಿತು ವರದಿಯಲ್ಲಿ ತಿಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT