ಬುಧವಾರ, ಮಾರ್ಚ್ 22, 2023
32 °C
ಎಎಪಿ ಸಂಸದ ರಾಘವ ಛೆಡ್ಡಾ ವಿರುದ್ಧ ಪರೋಕ್ಷ ವಾಗ್ದಾಳಿ

ದೆಹಲಿಯಿಂದ ಪಂಜಾಬ್ ಸರ್ಕಾರದ ನಿಯಂತ್ರಣ: ರಾಹುಲ್‌ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಠಾಣ್‌ಕೋಟ್: ಪಂಜಾಬ್‌ನ ಆಡಳಿತಾರೂಢ ಎಎಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ದೆಹಲಿಯಿಂದ ನಿಯಂತ್ರಿಸಲಾಗುತ್ತಿರುವ ಸರ್ಕಾರವಿದು’ ಎಂದು ಗುರುವಾರ ಟೀಕಿಸಿದರು.

‘ದೆಹಲಿಯಲ್ಲಿ ಕುಳಿತವರು ನೀಡುವ ಸೂಚನೆ ಪ್ರಕಾರ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎನ್ನುವ ಮೂಲಕ ಎಎಪಿಯ ಸಂಸದ ರಾಘವ ಛಡ್ಡಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಭಾರತ್‌ ಜೋಡೊ ಯಾತ್ರೆ ಅಂಗವಾಗಿ ಇಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ನಾನು ಗೌರವಿಸುತ್ತೇನೆ. ಆದರೆ, ಪಂಜಾಬ್‌ ಆಡಳಿತವು ಪಂಜಾಬ್‌ನಿಂದಲೇ ನಡೆಯಬೇಕು, ಅದು ದೆಹಲಿಯಿಂದ ಅಲ್ಲ’ ಎಂದರು.

ಕೆಲ ದಿನಗಳ ಹಿಂದೆ ಹೋಶಿಯಾರ್‌ಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾಡಿದ್ದ ಭಾಷಣವನ್ನು ಪ್ರಸ್ತಾಪಿಸಿದ ರಾಹುಲ್‌, ‘ಪಂಜಾಬ್‌ನ ಆಡಳಿತ ದೂರ ನಿಯಂತ್ರಣದ ಮೂಲಕ ನಡೆಯುವುದು ಬೇಡ ಎಂದು ಭಗವಂತ ಮಾನ್‌ ಅವರಿಗೆ ಹೇಳಿದ್ದೆ. ನಾನು ಹೇಳಿದ್ದು ಸಾಮಾನ್ಯ ವಿಷಯವಾಗಿರಲಿಲ್ಲ’ ಎಂದರು.

‘ಯಾತ್ರೆ ವೇಳೆ ರೈತರೊಬ್ಬರನ್ನು ಮಾತನಾಡಿಸಿ, ಎಎಪಿ ಸರ್ಕಾರದ ಬಗ್ಗೆ ಕೇಳಿದೆ. ‘ರಿಮೋಟ್‌ ಕಂಟ್ರೋಲ್‌’ ಸರ್ಕಾರ ಇದು ಎಂಬುದಾಗಿ ಆ ರೈತ ಹೇಳಿದ. ರಿಮೋಟ್‌ ಕಂಟ್ರೋಲ್‌ನ ಅರ್ಥ ಕೇಳಿದೆ. ಅದಕ್ಕೆ, ಆತ ಎಎಪಿ ಸಂಸದ ರಾಘವ ಛೆಡ್ಡಾ ಎಂಬುದಾಗಿ ಉತ್ತರಿಸಿದ’ ಎಂದ ರಾಹುಲ್‌ ಗಾಂಧಿ, ‘ಇದು ಒಳ್ಳೆಯದಲ್ಲ’ ಎಂದರು.

‘ನೀವು ಸಂಸದರಾಗಿದ್ದಾಗ ಲೋಕಸಭೆಯಲ್ಲಿ ನನ್ನ ಪಕ್ಕದಲ್ಲಿಯೇ ಕುಳಿತಿದ್ದಿರಿ. ನಿಮ್ಮನ್ನು ಬಲ್ಲೆ. ನಿಮಗೂ ಹಾಗೂ ಅರವಿಂದ ಕೇಜ್ರಿವಾಲ್‌ ಅವರಿಗೂ ಭಾರಿ ವ್ಯತ್ಯಾಸ ಇದೆ’ ಎಂದು ಹೇಳಿದರು.

‘ಪಂಜಾಬ್‌ನ ಅಭಿವೃದ್ಧಿಗಾಗಿ ಬಿಡುಗಡೆಯಾದ ಹಣವನ್ನು ಕಳೆದ ವರ್ಷ ನಡೆದ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪರ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು’ ಎಂದೂ ಅವರು ಆರೋಪಿಸಿದರು.

ಪಂಜಾಬ್‌ನಲ್ಲಿನ ಭಾರತ್‌ ಜೋಡೊ ಯಾತ್ರೆ ಗುರುವಾರ ಮುಕ್ತಾಯಗೊಂಡಿದ್ದು, ನಂತರ ಅದು ಜಮ್ಮು–ಕಾಶ್ಮೀರವನ್ನು ಪ್ರವೇಶಿಸಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು