ಸೋಮವಾರ, ಮಾರ್ಚ್ 27, 2023
32 °C

ಹಿಜಾಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ: ಓವೈಸಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ ಎಂದು ಆಲ್‌ ಇಂಡಿಯಾ ಮಜ್ಲೀಸ್‌–ಇ–ಇತ್ತೇಹಾದುಲ್‌ ಮುಸ್ಲಿಮಿನ್‌ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. 

‘ಮುಸ್ಲಿಂ ಅಸ್ಮಿತೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧವಾಗಿದೆ. ಭಾರತದ ವೈವಿಧ್ಯತೆಯನ್ನು ಕೊನೆಗೊಳಿಸುವುದು ಬಿಜೆಪಿಯ ನಿಜವಾದ ಅಜೆಂಡಾ ಎಂದು ಓವೈಸಿ ಮಾತನಾಡಿರುವ ವಿಡಿಯೊವನ್ನು ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿದೆ. 

‘ಬಿಜೆಪಿಯಿಂದ ಮುಸ್ಲಿಮರ ಗಡ್ಡ, ಟೋಪಿ, ಊಟಕ್ಕೆ ತೊಂದರೆ ಇದ್ದು, ಆ ಪಕ್ಷ ಮುಸ್ಲಿಮರ ವಿರುದ್ಧ ಇದೆ’ ಎಂದು ಆರೋಪಿಸಿರುವ ಓವೈಸಿ, ‘ಹಲಾಲ್ ಕಟ್ ವಿವಾದ ಎಬ್ಬಿಸಿ, ಹಲಾಲ್‌ ಮಾಂಸದ ಬಗ್ಗೆ ಜನರು ಕೆಟ್ಟ ದೃಷ್ಟಿಯಲ್ಲಿ ನೋಡುವಂತೆ ಮಾಡಲಾಗುತ್ತಿದೆ. ಬಿಜೆಪಿ ಹಲಾಲ್ ಕಮಿಷನ್ ಪಡೆಯುತ್ತಿರುವ ಬಗ್ಗೆ ವಿಡಿಯೊ ಸಾಕ್ಷ್ಯಗಳಿವೆ’ ಎಂದು ಹೇಳಿದ್ದಾರೆ.

ಎಐಎಂಐಎಂ ಬಿಜೆಪಿ ‘ಬಿ’ ಟೀಂ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವು ಬಿಜೆಪಿ ಟೀಂ ಅಲ್ಲವೇ ಅಲ್ಲ. ನಮಗೆ ಕಾಂಗ್ರೆಸ್ ಸರ್ಟಿಫಿಕೆಟ್ ಬೇಕಾಗಿಲ್ಲ. ಕಾಂಗ್ರೆಸ್ ಕಳಪೆ ನಾಯಕತ್ವದಿಂದಲೇ ಮೋದಿ ಎರಡು ಬಾರಿ ಪ್ರಧಾನಿಯಾಗಿದ್ದು’ ಎಂದು ವಿಶ್ಲೇಷಿಸಿದ್ದಾರೆ.

ರಾಜ್ಯ ಸರ್ಕಾರಗಳು ಮದರಸಾಗಳ ಸಮೀಕ್ಷೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೇವಲ ಒಂದು ಧರ್ಮ, ಸಮುದಾಯಕ್ಕೆ ಸೇರಿದ ಮದರಸಾಗಳ ಸರ್ವೆ ಮಾಡುವ ಬದಲು, ದೇಶದಾದ್ಯಂತ ಆರ್‌ಎಸ್‌ಎಸ್‌ ನಡೆಸುತ್ತಿರುವ ಶಿಶುಮಂದಿರ, ಶಾಲೆಗಳು, ಕ್ರೈಸ್ತರ ಶಾಲೆ, ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲೆ, ಕಾಲೇಜುಗಳ ಸ್ಥಿತಿಗತಿ ಬಗ್ಗೆಯೂ ಸಮಗ್ರ ತನಿಖೆ ನಡೆಸಲಿ’ ಎಂದು ಕಿಡಿಕಾರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು