ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌ ಪತನ: ಜೋರು ಸದ್ದು, ಜಿಗಿದ ವ್ಯಕ್ತಿಗಳು, ಹೊತ್ತಿದ ಬೆಂಕಿ...

Last Updated 8 ಡಿಸೆಂಬರ್ 2021, 19:32 IST
ಅಕ್ಷರ ಗಾತ್ರ

ಚೆನ್ನೈ: 'ಕೇಳಿದ ಜೋರು ಸದ್ದು, ಜಿಗಿದ ವ್ಯಕ್ತಿಗಳು, ದಿಢೀರನೆ ಹೊತ್ತಿ ಉರಿದ ಬೆಂಕಿ,....ನೋಡ ನೋಡುತ್ತಿದ್ದಂತೆ ಎಲ್ಲ ಕರಕಲು...'-

ಹೆಲಿಕಾಪ್ಟರ್‌ ದುರಂತದಲ್ಲಿ ಭಾರತದ ಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದಾರೆ. ನೀಲ್ಗಿರೀಸ್‌ನ ಕೂನೂರು ಸಮೀಪ ನಡೆದ ಹೆಲಿಕಾಪ್ಟರ್‌ ಪತನವನ್ನು ಹತ್ತಿರದಿಂದ ಕಂಡವರು ದುರ್ಘಟನೆಯ ವಿವರವನ್ನು ಬಿಚ್ಚಿಟ್ಟಿದ್ದಾರೆ.

'ಮನೆಯ ಸಮೀಪದಲ್ಲೇ ಹೆಲಿಕಾಪ್ಟರ್‌ನ ಜೋರು ಸದ್ದು ಕೇಳಿಸಿತು, ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮರಕ್ಕೆ ಬಡಿದಿದ್ದ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿತ್ತು. ಕೆಲವೇ ಕ್ಷಣದಲ್ಲಿ ಅದು ಮತ್ತೊಂದು ದೊಡ್ಡ ಮರಕ್ಕೆ ಬಡಿಯಿತು ಹಾಗೂ ಹೆಲಿಕಾಪ್ಟರ್‌ನಿಂದ ಜನರು ಬೀಳುತ್ತಿರುವುದು ಕಂಡಿತು. ಅನಂತರ ಹೆಲಿಕಾಪ್ಟರ್‌ ಧಗಧಗನೆ ಉರಿಯಲು ಶುರುವಾಯಿತು...' ಕಂಡ ದುರಂತವನ್ನು ಹೀಗೆ ವಿವರಿಸಿದ್ದು ಸ್ಥಳೀಯ ನಿವಾಸಿ ಕೃಷ್ಣಸ್ವಾಮಿ.

ಹೆಲಿಕಾಪ್ಟರ್‌ನಿಂದ ಜನರು ಬೀಳುತ್ತಿರುವುದನ್ನು ಕಂಡು ಗಾಬರಿಗೊಂಡ ಕೃಷ್ಣಸ್ವಾಮಿ, ತಕ್ಷಣವೇ ಸಮೀಪದ ಮನೆಯ ಕುಮಾರ್‌ ಅವರಿಗೆ ವಿಷಯ ಮುಟ್ಟಿಸಿದರು. ಆತ ತಡ ಮಾಡದೆ ತನ್ನ ಮೊಬೈಲ್‌ ಫೋನ್‌ ಮೂಲಕ ಪೊಲೀಸರು ಮತ್ತು ಅಗ್ನಿಶಾಮಕ ಸೇವೆಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು.

ಗುಡ್ಡಗಾಡಿನ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನವಾಗುವಾ‌ಗ ವಾತಾವರಣದಲ್ಲಿ ದಟ್ಟ ಮಂಜು ಆವರಿಸಿಕೊಂಡಿತ್ತು ಎಂದು ಬುರ್ಲಿಯರ್‌ ಗ್ರಾಮದ ನಿವಾಸಿ ಪ್ರಕಾಶ್ ಹೇಳಿದರು.

'ಬುರ್ಲಿಯರ್‌ ಗ್ರಾಮದಲ್ಲಿ ಹೆಲಿಕಾಪ್ಟರ್‌ ಇಳಿಯುತ್ತಿರುವುದನ್ನು ಕಂಡೆ. ಅದು ಮರಕ್ಕೆ ಬಡಿಯಿತು ಮತ್ತು ಬೆಂಕಿ ಹೊತ್ತಿತು. ತೋಟಗಾರಿಕೆ ಇಲಾಖೆಗೆ ಸೇರಿದ ಫಾರ್ಮ್‌ನಲ್ಲಿ ಹೆಲಿಕಾಪ್ಟರ್‌ ಪತನವಾಗಿದೆ. ಆ ಪ್ರದೇಶದಲ್ಲಿ ಸುಮಾರು 200 ಮನೆಗಳಿವೆ. ವಾತಾವರಣದಲ್ಲಿ ಪೂರ್ಣ ಮಂಜು ಆವರಿಸಿತ್ತು' ಎಂದರು.

ಪ್ರಕಾಶ್‌ ಅವರ ಪ್ರಕಾರ ಪೈಲಟ್‌ ಒಬ್ಬರು ಮಾತ್ರವೇ ಜೀವಂತವಾಗಿ ಹೊರಬಂದರು, ಉಳಿದ ಎಲ್ಲರೂ ಸ್ಥಳದಲ್ಲೇ ಸಾವಿಗೀಡಾದರು.

ನೀಲ್ಗಿರೀಸ್‌ ದಟ್ಟ ಕಾಡುಗಳಿಂದ ಸುತ್ತುವರಿದಿದ್ದು, ವೆಲ್ಲಿಂಗ್‌ಟನ್‌ಗೆ ತಲುಪಲು ಕೇವಲ ಹತ್ತು ನಿಮಿಷದ ಮುಂಚೆ ಹೆಲಿಕಾಪ್ಟರ್‌ ಪತನಗೊಂಡಿದೆ. ಅವರು ವೆಲ್ಲಿಂಗ್‌ಟನ್‌ನ ಡಿಫೆನ್ಸ್‌ ಸರ್ವೀಸಸ್‌ ಸ್ಟಾಫ್‌ ಕಾಲೇಜಿನಲ್ಲಿ ಉಪನ್ಯಾಸ ನೀಡುವುದು ನಿಗದಿಯಾಗಿತ್ತು. ಹೆಲಿಕಾಪ್ಟರ್‌ ಪತನದ ಸುದ್ದಿ ಹರಡುತ್ತಿದ್ದಂತೆ ಕೆಲವು ಗಂಟೆಗಳಲ್ಲಿ ಎಂಟು 108 ತುರ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು ಹಾಗೂ ಕೊಯಮತ್ತೂರು ವೈದ್ಯಕೀಯ ಕಾಲೇಜಿನ ಆರು ವೈದ್ಯರು ಕೂನೂರು ತಲುಪಿದರು.

ಹೆಲಿಕಾಪ್ಟರ್‌ ಪತನವಾದ ಸ್ಥಳದಿಂದ ಮನೆಗಳು ಕೆಲವೇ ಮೀಟರ್‌ಗಳ ಅಂತರದಲ್ಲಿದ್ದು, ನಾಗರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿನ ಹೆಚ್ಚಿನ ಸ್ಥಳೀಯರು ಟೀ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವುದರಿಂದ ಕೆಲವು ಜನರಷ್ಟೇ ಮನೆಗಳಲ್ಲಿ ಉಳಿದಿದ್ದರು.

'ಜೋರಾಗಿ ಉರಿಯುತ್ತಿದ್ದ ಬೆಂಕಿ ಮತ್ತು ದಟ್ಟವಾಗಿ ಆವರಿಸಿದ ಹೊಗೆಯಷ್ಟೇ ನೋಡುವಂತಾಯಿತು. ಆದರೆ, ಹೆಲಿಕಾಪ್ಟರ್‌ ಬೀಳುವುದನ್ನು ನೋಡಿದೆ. ಮೂವರು ಹೆಲಿಕಾಪ್ಟರ್‌ನಿಂದ ಬೀಳುತ್ತಿರುವುದನ್ನು ಕಂಡೆ...' ಎಂದು ಕೃಷ್ಣಸ್ವಾಮಿ ದನಿಗೂಡಿಸಿದರು.

ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಯು ಸೇನೆಯ ಅಧಿಕಾರಿಗಳ ಶರೀರಗಳನ್ನು ಪತನ ಸ್ಥಳದಿಂದ ಹೊರಗೆಳೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT