ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಬಾಲಕನ ಸಾವು: ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವ ಎಚ್ಚರಿಕೆ

Last Updated 18 ಆಗಸ್ಟ್ 2022, 2:36 IST
ಅಕ್ಷರ ಗಾತ್ರ

ಜಾಲೋರ್‌ (ರಾಜಸ್ಥಾನ): ಜಾಲೋರ್‌ನ ದಲಿತ ಬಾಲಕನ ಕುಟುಂಬಕ್ಕೆ ನ್ಯಾಯ ಸಿಗದೇ ಹೋದರೆ, ಬಿಎಸ್‌ಪಿ ಶಾಸಕರೆಲ್ಲರೂ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯಲಿದ್ದೇವೆ ಎಂದು ರಾಜಸ್ಥಾನ ಸಚಿವ ರಾಜೇಂದ್ರ ಗುಡಾ ಬುಧವಾರ ಹೇಳಿದ್ದಾರೆ.

ಯಾವುದೇ ಅಪರಾಧದ ಘಟನೆಯನ್ನು ಯಾವುದೇ ನಿರ್ದಿಷ್ಟ ಸಮುದಾಯದೊಂದಿಗೆ ಸಂಬಂಧ ಕಲ್ಪಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಗುಡಾ ಹೇಳಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿದ್ದ ಆರು ಶಾಸಕರಲ್ಲಿ ರಾಜೇಂದ್ರ ಗುಡಾ ಅವರೂ ಒಬ್ಬರು. ನಂತರ ಆರೂ ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

'ಸತ್ಯವೇನೆಂದರೆ, ದಲಿತ ವಿದ್ಯಾರ್ಥಿ ಸಾವಿನ ಪ್ರಕರಣದಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತು ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸದೇ ಹೋದರೆ, ನಮ್ಮ ಸದಸ್ಯತ್ವ ಕಳೆದುಕೊಳ್ಳಲೂ ನಾವು ಸಿದ್ಧ‘ ಎಂದು ಗುಡಾ ಸುದ್ದಿಗಾರರಿಗೆ ತಿಳಿಸಿದರು. ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುವುದಾಗಿಯೂ ಅವರು ಹೇಳಿದರು.

‘ರಾಜಸ್ಥಾನದ ಜಾಲೋರ್‌ ಜಿಲ್ಲೆಯ ಸುರಾನಾ ಎಂಬ ಹಳ್ಳಿಯೊಂದರ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಇಂದ್ರ ಮೇಘವಾಲ್‌ ನೀರಿನ ಮಡಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಾಯಿಲ್‌ ಸಿಂಗ್‌ ವಿದ್ಯಾರ್ಥಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದರು. ಜುಲೈ 20ರಂದು ಈ ಘಟನೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಹೋರಾಟ ನಡೆಸಿದ್ದ ಬಾಲಕ ಆ. 13ರಂದು ಕೊನೆಯುಸಿರೆಳೆದಿದ್ದ. ಶಿಕ್ಷಕನನ್ನು ಬಂಧಿಸಲಾಗಿದ್ದು, ಕೊಲೆಗೆ ಯತ್ನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಾಲೋರ್‌ ಹರ್ಷವರ್ಧನ್‌ ಅಗರ್ವಾಲ್‌ ತಿಳಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಲಕ್ಷ ಪರಿಹಾರವನ್ನು ಆ 13ರಂದು ಘೋಷಿಸಿದ್ದರು. ಪ್ರಕರಣದ ತನಿಖೆ ನಡೆಸಲಾಗುವುದು. ಆದಷ್ಟು ಬೇಗ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು’ ಎಂದು ಅವರು ಟ್ವೀಟ್‌ ಮಾಡಿದ್ದರು.

ದಲಿತ ಬಾಲಕನ ಹತ್ಯೆ ಪ್ರಕರಣ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿ ಮಾಡಿದ್ದು, ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದಾರೆ. ಇನ್ನೊಂದಡೆ ವಿಪಕ್ಷ ಬಿಜೆಪಿಯು ಕಾಂಗ್ರೆಸ್‌ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದೆ.

ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಶಾಲಾ ಶಿಕ್ಷಕರ ಥಳಿತಕ್ಕೊಳಗಾಗಿ ಮೃತಪಟ್ಟ ಘಟನೆಯಿಂದ ಮನನೊಂದಿರುವ ಕಾಂಗ್ರೆಸ್‌ ಶಾಸಕ ಪಾನ್‌ ಚಂದ್‌ ಮೇಘವಾಲ್‌ ಎಂಬುವವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಾರಾನ್ ನಗರಸಭೆಯ 12 ಮಂದಿ ಕಾಂಗ್ರೆಸ್ ಸದಸ್ಯರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT