ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖೋಯ್, ಮಿರಾಜ್ ಪತನ: ಪೈಲಟ್‌ ಸಾವು, ಹಾರಾಟದ ವೇಳೆ ಡಿಕ್ಕಿ ಸಾಧ್ಯತೆ

Last Updated 28 ಜನವರಿ 2023, 17:59 IST
ಅಕ್ಷರ ಗಾತ್ರ

ನವದೆಹಲಿ/ಮೊರೆನಾ/ಭರತ್‌ಪುರ: ಭಾರತೀಯ ವಾಯುಪಡೆಯ (ಐಎಎಫ್) ಎರಡು ಯುದ್ಧವಿಮಾನ‌ ಗಳು ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಶನಿವಾರ ಪತನವಾಗಿವೆ. ಸುಖೋಯ್‌–30ಎಂಕೆಐ ಹಾಗೂ ಮಿರಾಜ್–2000 ಯುದ್ಧವಿಮಾನಗಳು ಗ್ವಾಲಿಯರ್‌ನಿಂದ ದಿನನಿತ್ಯದ ಹಾರಾಟ ತರಬೇತಿಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

ಮಿರಾಜ್ ಯುದ್ಧವಿಮಾನದಲ್ಲಿದ್ದ ಪೈಲಟ್, ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಮೃತಪಟ್ಟಿದ್ದಾರೆ. ಆದರೆ, ಸುಖೋಯ್ ಯುದ್ಧವಿಮಾದಲ್ಲಿದ್ದ ಇಬ್ಬರು ಪೈಲಟ್‌ ಗಳು ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಹಾರಾಟದ ವೇಳೆ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿರಬಹುದು’ ಎಂದು ರಕ್ಷಣಾ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ವಾಯುಪಡೆಯು ಇದನ್ನು ಖಚಿತಪಡಿಸಿಲ್ಲ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ. ‌ನಾಲ್ಕು ವರ್ಷಗಳ ಹಿಂದೆ, ವಾಯುಪಡೆಯ ಸೂರ್ಯಕಿರಣ್‌ ತಂಡದ ಎರಡು ಹಾಕ್‌ ಯುದ್ಧವಿಮಾನಗಳು ಬೆಂಗಳೂರಿನಲ್ಲಿ ಡಿಕ್ಕಿಯಾಗಿದ್ದವು.

ಎರಡೂ ಯುದ್ಧವಿಮಾನಗಳ ಅವಶೇಷಗಳು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪಹಾರ್‌ಗಢ ಪ್ರದೇಶದಲ್ಲಿ, ಇನ್ನೂ ಕೆಲವು ಅವಶೇಷಗಳು ರಾಜಸ್ಥಾನದ ಭರತ್‌ಪುರ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಮೊರೆನಾ ಜಿಲ್ಲಾಧಿಕಾರಿ ಅಂಕಿತ್ ಆಸ್ಥಾನಾ ಹೇಳಿದ್ದಾರೆ.

ಐಎಎಫ್‌ನ ಗ್ವಾಲಿಯರ್‌ ವಾಯುನೆಲೆಯಲ್ಲಿ ಸುಖೋಯ್ ಹಾಗೂ ಮಿರಾಜ್ ಯುದ್ಧವಿಮಾನಗಳ ತಂಡಗಳಿವೆ. ಇಲ್ಲಿಂದ ಎರಡೂ ಯುದ್ಧ ವಿಮಾನಗಳು ಹಾರಾಟ ತರಬೇತಿಗೆ ತೆರಳಿದ್ದವು. ಎರಡೂ ವಿಮಾನಗಳ ದತ್ತಾಂಶ ದಾಖಲೆಗಳು, ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಮೇಲೆ ಬೆಳಕು ಚೆಲ್ಲಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗಸದಲ್ಲಿ ಡಿಕ್ಕಿ ನಡೆದಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುವ ಸಾಧ್ಯತೆಯಿದೆ. ಮೊರೆನಾ ಸಮೀಪ ಮಿರಾಜ್ ವಿಮಾನ ಪತನವಾಗಿದ್ದು, ಸುಖೋಯ್ ವಿಮಾನವು ಬಹುಶಃ, ಕೆಲವು ನಿಮಿಷದ ಹಾರಾಟದ ಬಳಿಕ ಭರತ್‌ಪುರ ಸಮೀಪ ಪತನವಾಗಿರ
ಬಹುದು ಎನ್ನಲಾಗಿದೆ.

ಫ್ರಾನ್ಸ್‌ನ ಡಾಸೋ ಏವಿಯೇಷನ್ ಸಂಸ್ಥೆಯ ಮಿರಾಜ್ ಒಂದು ಸೀಟಿನ ಯುದ್ಧವಿಮಾನವಾಗಿದ್ದು, ರಷ್ಯಾ ನಿರ್ಮಿತ ಸುಖೋಯ್ ಎರಡು ಸೀಟರ್‌ನ ಯುದ್ಧ ವಿಮಾನವಾಗಿದೆ.

ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್‌ ವಿ.ಆರ್. ಚೌಧರಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಘಟನೆಯ ಮಾಹಿತಿ ನೀಡಿದರು. ಹನುಮಂತರಾವ್ ಸಾರಥಿ ನಿಧನಕ್ಕೆ ರಾಜನಾಥ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಪೈಲಟ್‌ ಸಾವು

ಬೆಳಗಾವಿ: ಗ್ವಾಲಿಯರ್ ಸಮೀಪ ಪತನವಾದ ಮಿರಾಜ್ ಯುದ್ಧ ವಿಮಾನದಲ್ಲಿ ಮೃತಪಟ್ಟ ಪೈಲಟ್, ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ (34) ಬೆಳಗಾವಿಯವರು.

‘ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಇಲ್ಲಿನ ಗಣೇಶಪುರಕ್ಕೆ ಭಾನುವಾರ ತರುವುದಾಗಿ ಮಾಹಿತಿ ಬಂದಿದೆ’ ಎಂದು ಕುಟುಂಬದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ. ಹನುಮಂತರಾವ್‌ ಅವರಿಗೆ ತಂದೆ, ತಾಯಿ, ಪತ್ನಿ ಮೀಮಾಂಶ, ಮೂರು ವರ್ಷದ ಪುತ್ರಿ, ಒಂದು ವರ್ಷದ ಪುತ್ರ ಇದ್ದಾರೆ. ತಂದೆ ರೇವಣಸಿದ್ಧಪ್ಪ ಹಾಗೂ ತಾಯಿ ಸಾವಿತ್ರಿ ಬೆಳಗಾವಿ ನಗರದಲ್ಲಿ ವಾಸವಿದ್ದಾರೆ. ಗಣೇಶಪುರದಲ್ಲಿ 1987ರಲ್ಲಿ ಜನಿಸಿದ ಅವರು, ನಗರದ ಕೇಂದ್ರೀಯ ವಿದ್ಯಾಲಯ–2ರಲ್ಲಿ ಶಿಕ್ಷಣ ಪೂರೈಸಿದ್ದರು.

2009ರಲ್ಲಿ ವಾಯುಪಡೆ ಸೇರಿದ ಅವರು, ಪತ್ನಿ, ಮಕ್ಕಳ ಜತೆ ಗ್ವಾಲಿಯರ್‌ನಲ್ಲಿ ನೆಲೆಸಿದ್ದರು. ತಂದೆ ರೇವಣಸಿದ್ಧಪ್ಪ ಅವರೂ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನಿವೃತ್ತರಾಗಿದ್ದಾರೆ. ಸಹೋದರ ಪ್ರವೀಣ ವಾಯುಪಡೆಯಲ್ಲಿ ಗ್ರೂಪ್‌ ಕ್ಯಾಪ್ಟನ್‌ ಆಗಿದ್ದಾರೆ.

ವಿಮಾನ, ಹೆಲಿಕಾಪ್ಟರ್ ಪತನ: ನಿಲ್ಲದ ಸರಣಿ

*ಕಳೆದ ಜುಲೈನಲ್ಲಿ ರಾಜಸ್ಥಾನದ ಬಾಡ್‌ಮೇರ್‌ನಲ್ಲಿ ಮಿಗ್–21 ತರಬೇತಿ ವಿಮಾನ ಪತನವಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು

*ಸೇನಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಎಚ್) ಅರುಣಾಚಲ ಪ್ರದೇಶದ ಟುಟಿಂಗ್ ಎಂಬಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪತನವಾಗಿತ್ತು

*2021ರ ಡಿ.8ರಂದು ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅಂದಿನ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿ ಹಲವು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು

*2021ರ ಆ.3ರಂದು ಪಠಾಣ್‌ಕೋಟ್‌ನ ರಂಜಿತ್‌ ಸಾಗರ್ ಜಲಾಶಯದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ ಪತನವಾಗಿತ್ತು

*2019ರ ಅಕ್ಟೋಬರ್‌ನಲ್ಲಿ, ಉತ್ತರ ಕಮಾಂಡ್‌ನ ಅಂದಿನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಸಂಚರಿಸುತ್ತಿದ್ದ ಧ್ರುವ್ ಹೆಲಿಕಾಪ್ಟರ್ ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ತುರ್ತು ಭೂಸ್ಪರ್ಶದ ವೇಳೆ ಅಪಘಾತಕ್ಕೀಡಾಗಿತ್ತು

*2017ರಿಂದ 2021ರ ಅವಧಿಯಲ್ಲಿ 15 ಸೇನಾ ಹೆಲಿಕಾಪ್ಟರ್‌ಗಳು ಪತನವಾಗಿ 31 ಮಂದಿ ಮೃಪಟ್ಟಿದ್ದಾರೆ. ನಾಲ್ಕು ಎಎಲ್‌ಎಚ್, ನಾಲ್ಕು ಚೀತಾ, ಎರಡು ಎಎಲ್ಎಚ್‌ (ಡಬ್ಲ್ಯೂಎಸ್‌ಐ), ಮೂರು ಮಿಗ್‌–17ವಿ5, ಒಂದು ಎಂಐ–17 ಹಾಗೂ ಒಂದು ಚೇತಕ್ ಹೆಲಿಕಾಪ್ಟರ್‌ ಪತನವಾಗಿವೆ

*ಕಳೆದ ಐದು ವರ್ಷಗಳಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನ ಅವಘಡಗಳಲ್ಲಿ 42 ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ರಾಜ್ಯಸಭೆಗೆ ಕಳೆದ ಮಾರ್ಚ್‌ನಲ್ಲಿ ಮಾಹಿತಿ ನೀಡಿದ್ದರು

***

ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ಸಾವಿನಿಂದ ಆಘಾತವಾಗಿದೆ. ಅವರ ಕುಟುಂಬದ ಜೊತೆ ನಾವಿದ್ದೇವೆ

– ರಾಜನಾಥ್ ಸಿಂಗ್, ರಕ್ಷಣಾ ಸಚಿವ

***

ಹಾರಾಟದ ವೇಳೆ ವಿಮಾನಗಳ ನಡುವೆ ಡಿಕ್ಕಿ ಸಂಭವಿಸುವುದು ಹೊಸತಲ್ಲ. 70 ವರ್ಷಗಳಲ್ಲಿ 64 ವಿಮಾನಗಳು ಪತನವಾಗಿ, 39 ಪೈಲಟ್‌ಗಳು ಮೃಪಟ್ಟಿದ್ದಾರೆ

– ಅಂಚಿತ್ ಗುಪ್ತಾ, ವೈಮಾನಿಕ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT