ಗುರುವಾರ , ಮೇ 26, 2022
23 °C

'ಐಐಎಸ್‌ಸಿ ಅಭಿವೃದ್ಧಿಪಡಿಸಿದ ಲಸಿಕೆ ಎಲ್ಲ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ'

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ಸಿ) ಅಭಿವೃದ್ಧಿಪಡಿಸಿರುವ ಶಾಖ–ಸಹಿಷ್ಣು ಕೋವಿಡ್‌ ಲಸಿಕೆಯು ಎಲ್ಲ ಬಗೆಯ ಸಾರ್ಸ್‌ ಕೋವ್‌–2 ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಪ್ರಾಣಿಗಳ ಮೇಲಿನ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಸಂಶೋಧಕರ ತಂಡ ಪ್ರತಿಪಾದಿಸಿದೆ.

‘ಎಸಿಎಸ್ ಇನ್‌ಫೆಕ್ಷಿಯಸ್‌ ಡಿಸೀಸಸ್‌ ಜರ್ನಲ್‌’ನಲ್ಲಿ ಗುರುವಾರ ಈ ಕುರಿತು ಸಂಶೋಧನಾ ಲೇಖನ ಪ್ರಕಟವಾಗಿದೆ. ಐಐಎಸ್ಸಿಯು  ಬಯೋಟೆಕ್‌ ಸ್ಟಾರ್ಟ್‌ ಅಪ್‌ ಕಂಪನಿ ‘ಮೈನ್ವಾಕ್ಸ್’ ಜತೆಗೂಡಿ ಈ ಲಸಿಕೆಯ ಸೂತ್ರೀಕರಣವನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು, ಇಲಿಗಳಲ್ಲಿ ಬಲವಾದ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ ಎಂದು ಜರ್ನಲ್‌ನಲ್ಲಿ ಹೇಳಲಾಗಿದೆ.

ಇದು ಇಲಿಗಳನ್ನು ವೈರಸ್‌ನಿಂದ ರಕ್ಷಿಸಿತು ಎಂದಿರುವ ಸಂಶೋಧಕರು, ಒಂದು ತಿಂಗಳವರೆಗೆ 37 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮತ್ತು 90 ನಿಮಿಷಗಳವರೆಗೆ 100 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ ಎಂದಿದ್ದಾರೆ.

ಹೆಚ್ಚಿನ ಲಸಿಕೆಗಳ ಪರಿಣಾಮಕಾರಿತ್ವವನ್ನು ಉಳಿಸಲು ಶೀತಲೀಕರಣದ ಅಗತ್ಯವಿರುತ್ತದೆ ಎಂದು ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ (ಸಿಎಸ್‌ಐಆರ್‌ಒ) ಸಂಶೋಧಕರನ್ನು ಒಳಗೊಂಡ ತಂಡ ತಿಳಿಸಿತ್ತು.

ಉದಾಹರಣೆಗೆ, ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್ ನಡುವೆ ಸಂಗ್ರಹಿಸಿಡಬೇಕು ಮತ್ತು ಫೈಜರ್‌ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ವಿಶೇಷ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಬೇಕಾದ ಅಗತ್ಯವಿದೆ.

ಸಿಎಸ್ಐಆರ್‌ಒ ಕೋವಿಡ್‌–19ರ ಯೋಜನಾ ನಾಯಕ ಮತ್ತು ಅಧ್ಯಯನದ ಸಹ ಲೇಖಕರಾಗಿರುವ ಎಸ್.ಎಸ್. ವಾಸನ್ ಅವರ ಪ್ರಕಾರ, ಈ ಲಸಿಕೆಯು ಎಲ್ಲಾ ರೀತಿಯ ರೂಪಾಂತರ ವೈರಸ್‌ಗಳ ವಿರುದ್ಧ ಬಲವಾದ ಪ್ರತಿಕ್ರಿಯೆಯನ್ನು ತೋರಿರುವುದು ಇಲಿಗಳ ಮೇಲಿನ ಪ್ರಯೋಗದಿಂದ ಗೊತ್ತಾಗಿದೆ ಎಂದಿದ್ದಾರೆ.

ಇದರ ಎಲ್ಲಾ ಸೂತ್ರೀಕರಣಗಳು ಪ್ರತಿಕಾಯಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಇದು ಕೊರೊನಾ ವೈರಸ್‌ನ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರ ತಳಿಗಳ ವಿರುದ್ಧವೂ ಪರಿಣಾಮಕಾರಿ ಎಂದು ವಾಸನ್‌ ಹೇಳಿದ್ದಾರೆ.

ಈ ಲಸಿಕೆ ಕುರಿತು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಯೋಜಿತ ಮಾನವ ಕ್ಲಿನಿಕಲ್ ಪ್ರಯೋಗ ನಡೆಯುವ ಸಾಧ್ಯತೆಗಳಿವೆ. ಐಐಎಸ್ಸಿ, ಸಿಎಸ್‌ಐಆರ್‌ಒ ಜತಗೆ ಬ್ರಿಟನ್‌ನ ಯಾರ್ಕ್‌ ವಿಶ್ವವಿದ್ಯಾಲಯ, ದೆಹಲಿಯ ಸಿಎಸ್‌ಐಆರ್‌–ಐಜಿಐಬಿ, ಫರಿದಾಬಾದ್‌ನ ಟ್ರಾನ್ಸ್‌ಸ್ಲೇಷನಲ್‌ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ಚಂಡೀಗಡದ ಸಿಎಸ್ಐಆರ್- ಸೂಕ್ಷ್ಮ ಜೀವಿ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು