ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ನಿವೇಶನಗಳ ಅಕ್ರಮ ಹಂಚಿಕೆ: ವಂಚನೆಗೆ ಅಧಿಕಾರಿಗಳ ನಂಟು

ಕೆಎಎಸ್‌ ಅಧಿಕಾರಿಗಳೇ ಸೂತ್ರಧಾರಿಗಳು
Last Updated 20 ಜನವರಿ 2021, 20:02 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಎಸ್‌ ಅಧಿಕಾರಿಗಳ ಸಾರಥ್ಯದಲ್ಲೇ ಗುಡಿಸಲು ನಿವಾಸಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ನೂರಕ್ಕೂ ಹೆಚ್ಚು ನಿವೇಶನಗಳನ್ನು ಕಬಳಿಸಿರುವುದನ್ನು ಪ್ರಾಧಿಕಾರದ ಜಾಗೃತ ದಳದ ಪೊಲೀಸರು ಪತ್ತೆಹಚ್ಚಿದ್ದಾರೆ.

ನಕಲಿ ಅಳತೆ ದಾಖಲೆ (ಸಿಡಿಆರ್‌) ಸೃಷ್ಟಿಸುತ್ತಿದ್ದ ಆರೋಪದಡಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ನವೀನ್‌ ಕುಮಾರ್‌ ಎಂಬ ಬಿಡಿಎ ಗುತ್ತಿಗೆ ನೌಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಬೃಹತ್‌ ಹಗರಣದ ಸುಳಿವು ಸಿಕ್ಕಿದೆ. ಆರೋಪಿ ನೀಡಿದ ಮಾಹಿತಿ ಆಧಾರದಲ್ಲಿ 100ಕ್ಕೂ ಹೆಚ್ಚು ನಿವೇಶನಗಳ ಅಕ್ರಮ ಹಂಚಿಕೆಯನ್ನು ತನಿಖಾ ತಂಡ ಪತ್ತೆಮಾಡಿದೆ.

ಬಿಡಿಎ ಉಪ ಕಾರ್ಯದರ್ಶಿಗಳ ಹುದ್ದೆಯಲ್ಲಿದ್ದ ಕೆಎಎಸ್‌ ಅಧಿಕಾರಿಗಳಾದ ಅನಿಲ್‌ ಕುಮಾರ್‌, ಭಾಸ್ಕರ್‌ ಮತ್ತು ಈಗಿನ ಉಪ ಕಾರ್ಯದರ್ಶಿ–1 ಚಿದಾನಂದ್‌ ನಕಲಿ ದಾಖಲೆಗಳನ್ನು ಬಳಸಿ ನಿವೇಶನ ಹಂಚಿಕೆ ಮಾಡಿರುವ ಹಗರಣದ ಸೂತ್ರಧಾರಿಗಳು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಜನವರಿ 12ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.

ಹೊಸಕೆರೆಹಳ್ಳಿ ಗ್ರಾಮದಲ್ಲಿ ಬಿಡಿಎ ಜಾಗದಲ್ಲಿದ್ದ ಗುಡಿಸಲುಗಳನ್ನು ತೆರವು ಮಾಡಿದ ಬಳಿಕ ಅಲ್ಲಿನ ನಿವಾಸಿಗಳಿಗೆ 20X30 ಅಳತೆಯ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಲಾಗಿತ್ತು. ಈ ಆದೇಶವನ್ನೇ ಬಳಸಿಕೊಂಡ ಅಧಿಕಾರಿಗಳು, ಮಧ್ಯವರ್ತಿಗಳ ನೆರವಿನಲ್ಲಿ ಬನಶಂಕರಿ, ಜ್ಞಾನಭಾರತಿ, ನಾಗರಭಾವಿ, ಕೆಂಗೇರಿ, ಬಿಟಿಎಂ ಲೇಔಟ್‌ಗಳಲ್ಲಿ ಗುಡಿಸಲು ವಾಸಿಗಳ ಹೆಸರಿನಲ್ಲಿ ಅನ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ನವೀನ್‌ ಕುಮಾರ್‌ ಮತ್ತು ಜಾಮೀನು ಪಡೆದುಕೊಂಡಿರುವ ಲಕ್ಷ್ಮಣ್‌ ಎಂಬ ಇಬ್ಬರೇ 26 ಮಂದಿಗೆ ಈ ರೀತಿ ಅಕ್ರಮವಾಗಿ ನಿವೇಶನಗಳನ್ನು ಮಂಜೂರು ಮಾಡಿಸಿದ್ದಾರೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ದಲ್ಲಾಳಿಗಳ ನಂಟು: ‘ಗುಡಿಸಲು ವಾಸಿಗಳಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು 2018ರವರೆಗೂ ಉಪ ಕಾರ್ಯದರ್ಶಿ–1 ಚಿದಾನಂದ್‌ ನಿರ್ವಹಿಸಿದ್ದರು. ನಂತರ ಕಡತವನ್ನು ಉಪ ಕಾರ್ಯದರ್ಶಿ–3 ಅನಿಲ್‌ ಕುಮಾರ್‌ ಅವರಿಗೆ ವರ್ಗಾಯಿಸಲಾಗಿತ್ತು. ಅವರು ವರ್ಗಾವಣೆ ಹೊಂದಿದ ಬಳಿಕ ಭಾಸ್ಕರ್‌ ಆ ಹುದ್ದೆಗೆ ಬಂದಿದ್ದರು. ಮೂವರೂ ಮಧ್ಯವರ್ತಿಗಳ ನೆರವಿನಲ್ಲಿ ಗುಡಿಸಲು ವಾಸಿಗಳು ಅಲ್ಲದವರನ್ನು ಪಟ್ಟಿಗೆ ಸೇರಿಸಿ ನಿವೇಶನ ಹಂಚಿಕೆ ಮಾಡುತ್ತಿದ್ದರು’ ಎಂದು ಚಿದಾನಂದ್‌ ಮತ್ತು ಅನಿಲ್‌ ಕುಮಾರ್‌ ಅವರ ಕಚೇರಿಯಲ್ಲಿ
ಕಾರ್ಯನಿರ್ವಹಿಸಿದ್ದ ನವೀನ್‌ ಕುಮಾರ್‌ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.

‘ಲಕ್ಷ್ಮಣ, ರಾಮಪ್ರಭು, ವಿನೋದ, ಮೋಹನ್‌ ರಾಜ್‌ ಅಲಿಯಾಸ್ ಸಿ.ಡಿ ಮೋಹನ್‌, ನೌಫೀಕ್, ಜರಾರ್‌, ಇಂದ್ರಕುಮಾರ್ ಎಂಬ ಮಧ್ಯವರ್ತಿಗಳು ಮೂವರು ಅಧಿಕಾರಿಗಳ ಜತೆ ನಂಟು ಹೊಂದಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಕಂದಾಯ ಅಧಿಕಾರಿ ಧನಲಕ್ಷ್ಮಿ, ಅಕ್ರಮವಾಗಿ ಪಟ್ಟಿಗೆ ಸೇರಿಸುತ್ತಿದ್ದ ವ್ಯಕ್ತಿಗಳನ್ನು ಗುಡಿಸಲು ವಾಸಿಗಳು ಎಂದು ದೃಢೀಕರಿಸಿ ಮಹಜರು ವರದಿ ನೀಡುತ್ತಿದ್ದರು. ಈ ರೀತಿ ನಿವೇಶನ ಪಡೆದಿರುವ 90 ಮಂದಿಯನ್ನು ಪತ್ತೆಮಾಡಿ ವಿಚಾರಣೆ ನಡೆಸಲಾಗಿದೆ. ತಾವು ಹೊಸಕೆರೆಹಳ್ಳಿ ಗುಡಿಸಲು ವಾಸಿಗಳೂ ಅಲ್ಲ, ಪಟ್ಟೇಗಾರಪಾಳ್ಯದ ದಲಿತ ಕಲ್ಯಾಣ ಕೇಂದ್ರದ ಸದಸ್ಯರೂ ಅಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಬಿಡಿಎ ಜಾಗೃತ ದಳ ವರದಿಯಲ್ಲಿ ತಿಳಿಸಿದೆ.

ಅಕ್ರಮವಾಗಿ ಮೂಲೆ ನಿವೇಶನಗಳು, ಬೃಹತ್‌ ವಿಸ್ತೀರ್ಣದ ನಿವೇಶನಗಳನ್ನೂ ಹಂಚಿಕೆ ಮಾಡಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಇನ್ನೂ ಹಲವು ನಿವೇಶನಗಳ ಹಂಚಿಕೆಯ ಕುರಿತು ತನಿಖೆ ನಡೆಯುತ್ತಿದ್ದು, ಕೆಲವು ಪ್ರಕರಣಗಳಲ್ಲಿ ನಿವೇಶನ ಪಡೆದ ವ್ಯಕ್ತಿಗಳೇ ನಾಪತ್ತೆಯಾಗಿದ್ದಾರೆ. ಇನ್ನೂ ನಿವೇಶನ ಮಂಜೂರಾತಿಗಾಗಿ ಪಡೆದಿದ್ದ ಹಲವರ ಆಧಾರ್‌ ಮತ್ತು ಇತರ ದಾಖಲೆಗಳೂ ಪತ್ತೆಯಾಗಿವೆ ಎಂಬ ಮಾಹಿತಿ ವರದಿಯಲ್ಲಿದೆ.

ತನಿಖೆಗೆ ಆಯುಕ್ತರ ಬೆಂಬಲ

ದಲ್ಲಾಳಿ ಇಂದ್ರಕುಮಾರ್‌ ಕಚೇರಿಯಲ್ಲಿ ಬಿಡಿಎ ಅಧಿಕಾರಿಗಳೇ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಿದ್ದುದ್ದನ್ನು ಪ್ರಾಧಿಕಾರದ ಜಾಗೃತ ದಳ ಡಿಸೆಂಬರ್‌ ಮೊದಲ ವಾರ ಪತ್ತೆಹಚ್ಚಿದ್ದರು. ಆ ಪ್ರಕರಣದಲ್ಲಿ ಸಿಕ್ಕ ಸುಳಿವು ಆಧರಿಸಿ ತನಿಖಾ ತಂಡ ಹಗರಣದ ಆಳಕ್ಕೆ ಇಳಿದಿದೆ. ಆರಂಭದಲ್ಲೇ ಎಚ್ಚೆತ್ತ ಆರೋಪಿಗಳು ತನಿಖೆಗೆ ಅಡ್ಡಗಾಲು ಹಾಕಲು ಸತತ ಪ್ರಯತ್ನ ನಡೆಸಿದ್ದರು. ಬಿಡಿಎ ಆಯುಕ್ತ ಎಚ್‌.ಆರ್‌. ಮಹದೇವ್‌ ಅವರು ತನಿಖಾ ತಂಡದ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗ ಎಲ್ಲಿದ್ದಾರೆ?

ಅನಿಲ್‌ ಕುಮಾರ್‌ ಈಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದಾರೆ. ಭಾಸ್ಕರ್‌ ಹಾಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ. ಚಿದಾನಂದ್‌ ಬಿಡಿಎ ಉಪ ಕಾರ್ಯದರ್ಶಿ ಹುದ್ದೆಯಲ್ಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT