ಸೋಮವಾರ, ಆಗಸ್ಟ್ 15, 2022
21 °C
ಹಳತಾದ ಇತಿಹಾಸ ಬದಿಗಿರಿಸಿ, ಹೊಸ ಇತಿಹಾಸ ರಚಿಸುವ ಯತ್ನ

PV Web Exclusive: ಸಂಕಟಗಳ ಮಧ್ಯೆ ಅರಳುವ ಭ್ರಮೆ!

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಹಿಂದೆ ಒಬ್ಬ ರಾಜನಿದ್ದ. ವಿಶಾಲ ಸಾಮ್ರಾಜ್ಯ ಹೊಂದಿದ್ದ. ಗಾಂಭೀರ್ಯ ಸ್ವಭಾವ ಅಥವಾ ಧ್ಯಾನಸ್ಥ ಸ್ಥಿತಿಯೋ ಗೊತ್ತಿಲ್ಲ. ಚರ್ಚಿಸಲು ಅಥವಾ ವಾದಿಸಲು ಇಷ್ಟಪಡುತ್ತಿರಲಿಲ್ಲ. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಈ ಹಿಂದಿನವರಿಗಿಂತ ಈ ರಾಜ ಮೇಲು ಎಂದು ಮಂತ್ರಿಮಹೋದಯರು ಹಾಡಿಹೊಗಳಿದರೆ, ಕೆಲ ಪ್ರಜೆಗಳು ಅದಕ್ಕೆ ತಲೆದೂಗುತ್ತಿದ್ದರು.

ಇಂಥ ದಿನಗಳಲ್ಲಿಯೇ ಬರ ಆವರಿಸಿತು. ಕೃಷಿ ಚಟುವಟಿಕೆ ಸ್ಥಗಿತಗೊಂಡಿತು. ಸಹಜ ವಹಿವಾಟು ಮೇಲೆ ದುಷ್ಪರಿಣಾಮ ಬೀರಿತು. ಬಹುತೇಕ ಮಂದಿ ಚಿಂತಾಕ್ರಾಂತರಾದರು. ಯುವಜನರು ನಿರುದ್ಯೋಗಿಗಳಾದರೆ, ವೃದ್ಧರು ಅಸಹಾಯಕರಾದರು. ಮಹಿಳೆಯರು ಮತ್ತು ಮಕ್ಕಳು ದಿಕ್ಕುಗಾಣದಾದರು.

ಇಂಥ ಸಣ್ಣಪುಟ್ಟ ಸಮಸ್ಯೆಗಳ ಭಾರವನ್ನು ರಾಜನ ಮೇಲೆ ಯಾಕೆ ಹಾಕಬೇಕು? ಅವರಿಗೆ ಯಾಕೆ ತಲೆ ಬಿಸಿ ಮಾಡಬೇಕು ಎಂದು ಮಂತ್ರಿವರ್ಯರು ತಾವೇ ಖುದ್ದು ಎಲ್ಲಾ ಪರಿಸ್ಥಿತಿ ನಿಭಾಯಿಸಲು ನಿರ್ಧರಿಸಿದರು. ರಾಜನಾದವನು ಸಾಮ್ರಾಜ್ಯದ ಅಭಿವೃದ್ಧಿ ಮತ್ತು ಉನ್ನತಿಗೆ ಮಾತ್ರ ಯೋಚಿಸಬೇಕು ಮತ್ತು ಶ್ರಮಿಸಬೇಕು ಎಂಬ ಕಾಳಜಿ ಅವರದ್ದು.

ಬರ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಅವರು ಉಪನ್ಯಾಸ ನೀಡಿದರು. ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿ ಯಾರ ಮೇಲೆಯೂ ಅವಲಂಬಿಸದೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರಜೆಗಳಿಗೆ ತಿಳಿ ಹೇಳಿದರು.

ಈ ಎಲ್ಲಾ ಬೆಳವಣಿಗಗಳ ಮಧ್ಯೆ ರಾಜನಿಗೆ ಏಕಾಏಕಿ ತಾನು ವಾಸವಿದ್ದ ಅರಮನೆ ಬಗ್ಗೆಯೇ ಬೇಸರ ಮೂಡತೊಡಗಿತು. ಇದರಲ್ಲಿ ಬರೀ ಹಳೆಯ ನೆನಪುಗಳಿವೆ. ಈ ಹಿಂದೆ ಆಳಿದವರ ಗುರುತುಗಳಿವೆ ಹೊರತು ತನ್ನದೇನೂ ಛಾಪು ಇಲ್ಲ ಎಂದು ಅನ್ನಿಸತೊಡಗಿತು.

ಒಂದು ರಾತ್ರಿ ದಿಢೀರ್ ನಿರ್ಣಯ ಕೈಗೊಂಡು, ಮಾರನೇ ದಿನವೇ ಹೊಸ ಅರಮನೆ ಕಟ್ಟಲು ರಾಜ ಆದೇಶ ಹೊರಡಿಸಿದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸದ ಮಂತ್ರಿಗಳು, ‘ಖಜಾನೆಯೊಳಗೆ ಭಾರಿ ಸಂಪತ್ತಿದೆ. ಅರಮನೆ ನಿರ್ಮಾಣಕ್ಕೆ ಅಲ್ಲದೇ ಅದನ್ನು ಇನ್ನು ಯಾವುದಕ್ಕೆ ಸದ್ಬಳಕೆ ಮಾಡಲು ಸಾಧ್ಯ? ಅರಮನೆ ನಿರ್ಮಾಣಗೊಳ್ಳಲಿ’ ಎಂದು ದನಿಗೂಡಿಸಿದರು.

ನೋಡುನೋಡುತ್ತಿದ್ದಂತೆ ಹೊಸ ಅರಮನೆ ನಿರ್ಮಾಣವಾಯಿತು. ಹಳೆಯ ಅರಮನೆ ಬಳಕೆ ಕಡಿಮೆಯಾಯಿತು. ಕೆಲವೇ ದಿನಗಳಲ್ಲಿ ಪಾಳು ಬಿತ್ತು. ತನ್ನ ಆಪ್ತರೊಬ್ಬರ ಎತ್ತರದ ಪ್ರತಿಮೆ ಸ್ಥಾಪಿಸುವ ಕುರಿತು ರಾಜ ಇಚ್ಛೆ ವ್ಯಕ್ತಪಡಿಸಿದಾಗಲೂ ಆಸ್ಥಾನದ ಪಂಡಿತರು ಸಮ್ಮತಿ ಸೂಚಿಸಿದರು. ಆ ಕಾರ್ಯವೂ ಪೂರ್ಣಗೊಂಡಿತು.

ಇದರ ಮಧ್ಯೆ ವಿದೇಶಿ ಪ್ರವಾಸಿಗನೊಬ್ಬ ರಾಜನ ಸಾಮ್ರಾಜ್ಯಕ್ಕೆ ಭೇಟಿ ನೀಡಿದಾಗ, ಅಚ್ಚರಿ ವ್ಯಕ್ತಪಡಿಸಿದ. ಬಡವರ ಮನೆಗಳು ದೀಪಗಳಿಲ್ಲದೇ, ಪ್ರಜೆಗಳು ಸಂತೋಷದಿಂದ ಇರದಿರುವುದು ಕಾಣಿಸಿತು. ನೇರವಾಗಿ ಹೊಸ ಅರಮನೆಗೆ ಹೋದ ಆ ಪ್ರವಾಸಿಗ, ‘ಸ್ವಾಮಿ, ದೇಶವೆಂದರೆ ಬರೀ ಸಂಪತ್ತು, ಅರಮನೆ ಮತ್ತು ಆಡಂಬರದ ಪ್ರದರ್ಶನವಲ್ಲ. ದೇಶವೆಂದರೆ ಜನ. ಅವರು ಖುಷಿಯಿಂದ ಇದ್ದರೆ ಮಾತ್ರ ಸಾಮ್ರಾಜ್ಯ ಸುಭಿಕ್ಷ ಎಂದರ್ಥ. ಪ್ರಜೆಗಳ ಖುಷಿಗೆ ಮೊದಲ ಆದ್ಯತೆ ಸಿಗಲಿ' ಎಂದು ಪ್ರವಾಸಿಗ ಸಲಹೆ ನೀಡುತ್ತಾನೆ. ವಾಸ್ತವ ಪರಿಸ್ಥಿತಿ ಅರಿವಾದ ಬಳಿಕ ರಾಜನಿಗೆ ಜ್ಞಾನೋದಯವಾಗುತ್ತದೆ.

ವರ್ಷಗಳ ಹಿಂದೆ ಹಿರಿಯರೊಬ್ಬರು ಹೇಳಿದ ಕತೆಯು ಇತ್ತೀಚೆಗೆ ತುಂಬಾ ನೆನಪಾಗುತ್ತಿದೆ. ದೇಶದಲ್ಲಿ ಸದ್ಯದಲ್ಲಿನ ಪರಿಸ್ಥಿತಿಗೂ ಈ ಕತೆಗೂ ಹೆಚ್ಚು ಹೋಲಿಕೆ ಇದೆ ಎಂದು ಅನ್ನಿಸದೇ ಇರುವುದಿಲ್ಲ.

ಪರ–ವಿರೋಧ ಅಭಿಪ್ರಾಯ

ನವದೆಹಲಿಯಲ್ಲಿ 1927ರಲ್ಲಿ ನಿರ್ಮಾಣಗೊಂಡ ಸಂಸತ್ ಭವನದ ಸಮೀಪದಲ್ಲೇ ನೂತನ ಸಂಸತ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ನವದೆಹಲಿಯಲ್ಲಿ ಒಂದೆಡೆ 16 ದಿನಗಳಿಂದ ರೈತರು ರಾಜಿಯಿಲ್ಲದೇ ಹೋರಾಟ ನಡೆಸಿದ್ದರೆ, ಮತ್ತೊಂದೆಡೆ ಕೋವಿಡ್‌ ಎರಡನೇ ಅಲೆ ಶುರುವಾಗುವ ಭೀತಿ ಇದೆ. ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದರೆ, ವರ್ಷದಿಂದ ವರ್ಷಕ್ಕೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೀಡಾದ ಸಂತ್ರಸ್ತರು ಚೇತರಿಸಿಕೊಳ್ಳಲು ಮತ್ತು ಪೂರ್ಣಪ್ರಮಾಣದಲ್ಲಿ ಬದುಕು ಕಟ್ಟಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಶ್ರಮಿಕ ವರ್ಗದ ಕೆಲವರಿಗೆ ಪರಿಹಾರ ಧನ ದೊರೆತಿಲ್ಲ. ಲಾಕ್‌ಡೌನ್ ಅವಧಿಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿಲ್ಲ ಎಂಬ ಆರೋಪಗಳಿವೆ.

ಇವೆಲ್ಲದರ ಮಧ್ಯೆ ನೂತನ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು, ‘ನೂತನ ಸಂಸತ್ತು ಭವನ ಆತ್ಮನಿರ್ಭರದ ಪ್ರತೀಕ. ಪ್ರಸ್ತುತ ಸಂಸತ್ ಭವನವು ದೇಶದ ಸ್ವಾತಂತ್ರ್ಯ ದಿನಗಳ ಗಾಥೆಯನ್ನು ಹೇಳಿದರೆ, ಹೊಸ ಸಂಸತ್ ಭವನವು ಹೊಸ ಭಾರತವನ್ನು ಪ್ರಸ್ತುತಪಡಿಸುತ್ತದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಎಂಥದ್ದು ಎಂಬುದನ್ನು ವಿಶ್ವಕ್ಕೆ ಸಾರಿ ಹೇಳುತ್ತದೆ’ ಎಂದರು.

ಇದಕ್ಕೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ‘16 ದಿನಗಳಿಂದ ಅನ್ನದಾತರು ತಮ್ಮ ಬೇಡಿಕೆ ಮತ್ತು ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ತಮಗಾಗಿ ಅರಮನೆ ನಿರ್ಮಿಸುತ್ತಿದ್ದರು ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಲಿದೆ. ಅಧಿಕಾರ ಎಂಬುದು ಸ್ವಂತ ಆಶಯಗಳನ್ನು ಪೂರೈಸಿಕೊಳ್ಳುವುದಲ್ಲ. ಜನರ ಸೇವೆ ಮತ್ತು ಏಳ್ಗೆಯೇ ಅಧಿಕಾರದ ಗುರಿ’ ಎಂದು ಕುಟುಕಿದರು.

ಬ್ರಿಟಿಷರ ಆಡಳಿತಾವಧಿಯಲ್ಲಿ ಸಂಸತ್ ಭವನ ನಿರ್ಮಾಣಕ್ಕೆ 7 ವರ್ಷ (1921ರಲ್ಲಿ ಶಂಕುಸ್ಥಾಪನೆ, 1927ರಲ್ಲಿ ಕಾಮಗಾರಿ ಪೂರ್ಣ) ಬೇಕಾಯಿತು. ನೂತನ ಸಂಸತ್ ಭವನವು 2022ರ ಆಗಸ್ಟ್‌ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂಬ ನಿರೀಕ್ಷೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಭವನವನ್ನು ಲೋಕಾರ್ಪಣೆಗೊಳಿಸುವ ಆಶಯವನ್ನು ಪ್ರಧಾನಿ ಹೊಂದಿದ್ದಾರೆ.

ಐತಿಹಾಸಿಕ ಕ್ಷಣಗಳು ನೆನಪಿರಲಿ

‘ಸ್ಥಳಾವಕಾಶದ ಕೊರತೆ, ಲೋಕಸಭೆ ಕ್ಷೇತ್ರಗಳ ವಿಂಗಡಣೆ ಸೇರಿದಂತೆ ವಿವಿಧ ಕಾರಣಗಳಿಂದ ನೂತನ ಸಂಸತ್ ಭವನ ನಿರ್ಮನಿಸಲಾಗುತ್ತಿದೆ. ಆದರೆ, ಅದೇ ನೆಪದಲ್ಲಿ ಹಳೆಯ ಸಂಸತ್ ಭವನ ನಿರ್ಲಕ್ಷಿಸಬಾರದು. ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ಸ್ಮಾರಕವೆಂದು ಪಾಳು ಬೀಳುವಂತೆ ಮಾಡಬರದು. ಅಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವುದರ ಜೊತೆಗೆ ಈವರೆಗೆ ನಡೆದ ಸಂಸತ್ ಕಲಾಪದ ಐತಿಹಾಸಿಕ ಕ್ಷಣಗಳನ್ನು ನೆನಪಿನಲ್ಲಿ ಇಡುವಂತಹ ಕಾರ್ಯ ಆ ಸಂಸತ್ ಭವನದಲ್ಲಿ ನಿರ್ಮಾಣವಾಗಬೇಕು’ ಎಂಬ ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹಳೆಯದೆಲ್ಲವನ್ನೂ ಬದಿಗೆ ಸರಿಸಿ, ಎಲ್ಲವನ್ನೂ ಹೊಸದಾಗಿಸುವ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಗಳು ನಡೆದಿವೆ. ಅವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಹಳತಾದ ಇತಿಹಾಸ ಮರೆತು ಹೊಸ ಇತಿಹಾಸವನ್ನು ರಚಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.

ಇಂಥ ಸಂದರ್ಭಗಳಲ್ಲಿಯೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತು ನೆನಪಿಗೆ ಬರುತ್ತದೆ: ‘ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು