ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ದೇಶದಲ್ಲಿ 196 ವೈದ್ಯರ ಸಾವು: ಪ್ರಧಾನಿ ಗಮನಹರಿಸಬೇಕಾಗಿ ಐಎಂಎ ಮನವಿ

ವೈದ್ಯರ ಸುರಕ್ಷತೆ ಬಗ್ಗೆ ಗಮನ ಹರಿಸಲು ಪ್ರಧಾನಿಗೆ ಪತ್ರ
Last Updated 8 ಆಗಸ್ಟ್ 2020, 12:50 IST
ಅಕ್ಷರ ಗಾತ್ರ

ನವದೆಹಲಿ: ‘ಈವರೆಗೆ ದೇಶದಲ್ಲಿ 196 ವೈದ್ಯರು ಕೋವಿಡ್‌–19ನಿಂದ ಮೃತಪಟ್ಟಿದ್ದು, ಈ ಗಂಭೀರ ಸಮಸ್ಯೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗಮನಹರಿಸಬೇಕು’ ಎಂದುಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮನವಿ ಮಾಡಿದೆ.

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿರುವ ವೈದ್ಯರ ಸುರಕ್ಷತೆಯ ಕುರಿತು ಐಎಂಎ ಆತಂಕ ವ್ಯಕ್ತಪಡಿಸಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಐಎಂಎ, ‘ಕೊರೊನಾವೈರಸ್ ವಿರುದ್ಧ ಸೆಣಸುತ್ತಿರುವ ವೈದ್ಯಕೀಯ ವೃಂದ ಮತ್ತು ಅವರ ಕುಟುಂಬದವರಿಗೆ ಸಮರ್ಪಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮತ್ತು ಎಲ್ಲಾ ವಿಭಾಗಗಳ ವೈದ್ಯರಿಗೆ ರಾಜ್ಯ ಪ್ರಾಯೋಜಿತ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯಗಳನ್ನು ವಿಸ್ತರಿಸಬೇಕು’ ಎಂದು ಮನವಿ ಮಾಡಿದೆ.

ವೈದ್ಯರು ಸೋಂಕಿಗೆ ಒಳಗಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ವ್ಯಕ್ತಿ ಜ್ವರ ಬಂದ ತಕ್ಷಣ ಜನರಲ್‌ ಫಿಸಿಷಿಯನ್‌ ಬಳಿಗೆ ಮೊದಲು ಹೋಗುವುದರಿಂದ ಸೋಂಕಿನ ಪರಿಣಾಮ ಆ ವೈದ್ಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ ಎಂದು ಐಎಂಎ ತಿಳಿಸಿದೆ.

‘ಈ ಬಿಕ್ಕಟ್ಟಿನಸಂದರ್ಭದಲ್ಲಿ ವೈದ್ಯರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಗಮನ ನೀಡುವಂತೆ ಭಾರತ ಸರ್ಕಾರವನ್ನು ವಿನಂತಿ ಮಾಡುತ್ತಿದ್ದೇವೆ’ ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜನ್ ಶರ್ಮಾ ತಿಳಿಸಿದ್ದಾರೆ.

‘ಸೋಂಕಿನಿಂದಾಗಿ ವೈದ್ಯರ ಮರಣ ಪ್ರಮಾಣವುಆತಂಕಕಾರಿ ಹಂತಕ್ಕೆ ತಲುಪಿದೆ. ವೈದ್ಯರ ಸುರಕ್ಷತೆ ಅತಿ ಮುಖ್ಯ. ಅವರನ್ನೇಅವಲಂಬಿಸಿರುವ ಸಾವಿರಾರು ರೋಗಿಗಳ ಮೇಲೂ ಇದು ಪರಿಣಾಮ ಬೀರುತ್ತದೆ’ ಎಂದು ಐಎಂಎಪ್ರಧಾನ ಕಾರ್ಯದರ್ಶಿ ಡಾ. ಆರ್.ವಿ ಅಶೋಕನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT