ಗುರುವಾರ , ನವೆಂಬರ್ 26, 2020
22 °C

ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ ಉದ್ಧವ್‌ ಠಾಕ್ರೆ: ಕಂಗನಾ ಮಾತಿನ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ವಿರುದ್ಧ ನಟಿ ಕಂಗನಾ ರನೌತ್‌ ಸೋಮವಾರ ಹೊಸದಾಗಿ ಟೀಕಾ ಪ್ರಹಾರ ನಡೆಸಿದ್ದಾರೆ. ‘ಉದ್ಧವ್‌ ಠಾಕ್ರೆ ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ’ ಎಂದು ಅವರು ಹೇಳಿದ್ದಾರೆ. ಜತೆಗೆ, ‘ನನ್ನ ರಾಜ್ಯ ಹಿಮಾಚಲ ಪ್ರದೇಶವು ದೇವತೆಗಳ ಭೂಮಿ. ಗಾಂಜಾ ತೋಟವಲ್ಲ,’ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ನಟಿ ಕಂಗನಾ ರನೌತ್‌ ಅವರ ವಿರುದ್ಧ ಭಾನುವಾರ ದಸರಾ ಭಾಷಣದ ವೇಳೆ ಪರೋಕ್ಷ ವಾಗ್ದಾಳಿ ನಡೆಸಿದ್ದರು.

‘ಜೀವನೋಪಾಯಕ್ಕಾಗಿ ಮುಂಬೈಗೆ ಬರುವ ಕೆಲ ಮಂದಿ ದ್ರೋಹ ಮಾಡುತ್ತಾರೆ. ಮುಂಬೈ ಪಾಕ್‌ ಆಕ್ರಮಿತ ಕಾಶ್ಮೀರ ಎಂದು ಕರೆಯುತ್ತಾರೆ. ವಾಸ್ತವವಾಗಿ ಇದು ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯ. ಅವರು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದಾಗಿ ಹೇಳಿದ್ದರು,’ ಎಂದು ಹೇಳಿದ್ದರು.

ಅಲ್ಲದೆ, ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ವಿಚಾರದಲ್ಲಿ ತಮ್ಮ ಪುತ್ರ, ಸಚಿವ ಆದಿತ್ಯ ಠಾಕ್ರೆ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ಕುರಿತು ಇದೇ ದಸರಾ ಭಾಷಣದಲ್ಲಿ ಮೌನ ಮುರಿದಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ಬಿಹಾರದ ಮಗನ ನ್ಯಾಯಕ್ಕಾಗಿ ಕೂಗುತ್ತಿರುವವರು ಮಹಾರಾಷ್ಟ್ರದ ಮಕ್ಕಳ ಚಾರಿತ್ರ್ಯಹರಣದಲ್ಲಿ ತೊಡಗಿದ್ದಾರೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಸೋಮವಾರ ಕೆಂಡಾಮಂಡಲಗೊಂಡಿರುವ ರನೌತ್‌, ‘ಉದ್ಧವ್‌ ಠಾಕ್ರೆ ಅವರು ನನ್ನನ್ನು ನಮಕ್‌ಹರಾಮ್‌ (ವಿಶ್ವಾಸಘಾತಕ) ಎಂದು ಕರೆದಿದ್ದಾರೆ,’ ಎಂದು ಆರೋಪಿಸಿದರು. ಅಲ್ಲದೆ, ಠಾಕ್ರೆ ವಿರುದ್ಧ ವಾಗ್ದಾಳಿಯನ್ನೂ ನಡೆಸಿದರು.

‘ಮುಖ್ಯಮಂತ್ರಿ ಸ್ಥಾನದಲ್ಲಿರುವ ನೀವು, ನಿಮ್ಮ ಮಗನ ವಯಸ್ಸಿನ ನನ್ನ ಮೇಲೆ ಆಕ್ರೋಶಗೊಳ್ಳುವ ಮೂಲಕ ಇಡೀ ರಾಜ್ಯವನ್ನೇ ನಿರಾಶಗೊಳಿಸಿದ್ದಾರೆ. ಮುಂಬೈ ಪಾಕ್‌ ಆಕ್ರಮಿತ ಕಾಶ್ಮೀರ ಎಂದು ಕರೆದದ್ದಕ್ಕೆ ನೀವು ನನ್ನ ಮೇಲೆ ಆಕ್ರೋಶಗೊಂಡಿದ್ದೀರಿ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ‘ಕಾಶ್ಮೀರವನ್ನು ಮುಕ್ತಗೊಳಿಸಿ’ ಎಂಬ ಘೋಷಣೆಗಳನ್ನು ನಿಮ್ಮ ‘ಸೋನಿಯಾ ಸೇನೆ’ (ಶಿವಸೇನೆ) ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ. ಅದಕ್ಕಾಗಿಯೇ ನಾನು ಮುಂಬೈ ಅನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದೆ,’ ಎಂದು ಅವರು ವಿಡಿಯೊ ಮಾಡಿ ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

‘ಮೊದಲಿಗೆ ಶಿವಸೇನೆ ನಾಯಕ ಸಂಜಯ್‌ ರಾವುತ್ ನನ್ನನ್ನು ನಿಂದಿಸಿದರು. ಈಗ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ನನ್ನನ್ನು ನಿಂದಿಸುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ನಾನು ನಿಮ್ಮ ಮಗನ ವಯಸ್ಸಿನವಳು. ಸ್ವಪ್ರಯತ್ನದಿಂದ ಮೇಲೆ ಬಂದ ಒಂಟಿ ಮಹಿಳೆಯೊಂದಿಗೆ ಮಾತನಾಡುವ ರೀತಿಯೇ ಇದು? ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೇ, ನೀವು ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ,’ ಎಂದು ಕಟು ಟೀಕೆ ಮಾಡಿದ್ದಾರೆ.

ಹಿಮಾಚಲ ಪ್ರದೇಶವು ‘ಗಾಂಜಾ ತೋಟ’ ಎಂದು ಠಾಕ್ರೆ ಅವರು ಹೇಳಿದ್ದಾರೆ ಎನ್ನಲಾಗಿದ್ದು, ರನೌತ್‌ ಅವರು ಈ ಹೇಳಿಕೆಯ ವಿರುದ್ಧವೂ ಕಿಡಿ ಕಾರಿದರು. ‘ಹಿಮಾಚಲ ಪ್ರದೇಶ ದೇವತೆಗಳ ಭೂಮಿ. ನಾನು ನಿಮಗೆ ಹೇಳಲು ಬಯಸುವುದಿಷ್ಟೇ. ಸರ್ಕಾರಗಳು ಬಂದು ಹೋಗುತ್ತವೆ. ನೀವು ಕೇವಲ ಸರ್ಕಾರದ ಸೇವಕ ಮಾತ್ರ. ಮಹಾರಾಷ್ಟ್ರದ ಜನರು ನಿಮ್ಮೊಂದಿಗೆ ಸಂತೋಷವಾಗಿಲ್ಲ. ಸರ್ಕಾರಗಳು ಬಂದು ಹೋಗಬಹುದು. ಆದರೆ, ವ್ಯಕ್ತಿಯು ಗೌರವವನ್ನು ಕಳೆದುಕೊಂಡರೆ, ಅವನು ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಮುಂಬೈ, ಹಿಮಾಚಲ ಪ್ರದೇಶ ಎಂದು ಎಣಿಸಿದೆ ಮುಂಬೈ ಎಲ್ಲಿರಿಗೂ ಅವಕಾಶ ಕಲ್ಪಿಸುತ್ತದೆ,’ ಎಂದು ಕಂಗನಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು