₹2,450 ಕೋಟಿ ಮೊತ್ತದ ಕಾಮಗಾರಿಗಳ ಉದ್ಘಾಟನೆ: ಈಶಾನ್ಯ ಕಡೆಗೆ ದೈವಿಕ ಉದ್ದೇಶ; ಮೋದಿ

ಗುವಾಹಟಿ: ಮುಂದಿನ ವರ್ಷ ಚುನಾವಣೆಯ ನಡೆಯಲಿರುವ ಮೇಘಾಲಯ ಹಾಗೂ ತ್ರಿಪುರಾದಲ್ಲಿ ₹6,800 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಭಾನುವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈಶಾನ್ಯ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರವು ದೈವಿಕ ಉದ್ದೇಶ (ಡಿವೈನ್) ಇಟ್ಟುಕೊಂಡಿದೆ ಎಂದು ಹೇಳಿದರು. ಪ್ರತಿಪಕ್ಷಗಳು ಒಡೆದಾಳುವ (ಡಿವೈಡ್) ನೀತಿ ಅನುಸರಿಸುತ್ತಿವೆ ಎಂದು ಆಗಾಗ್ಗೆ ಆರೋಪಿಸುವ ಮೋದಿ ಅವರು ಅದೇ ಧಾಟಿಯಲ್ಲಿ ಮಾತನಾಡಿದ್ದು, ಈಶಾನ್ಯ ರಾಜ್ಯಗಳ ಬಗ್ಗೆ ಪಕ್ಷ ಇಟ್ಟಿರುವ ಧೋರಣೆಯನ್ನು ಹೇಳಿದ್ದಾರೆ.
‘ವಿಭಿನ್ನ ಸಮುದಾಯ ಅಥವಾ ವಿಭಿನ್ನ ಪ್ರದೇಶಗಳೇ ಇರಲಿ, ಎಲ್ಲ ರೀತಿಯ ಭಿನ್ನತೆಗಳನ್ನು ನಾವು ತೆಗೆದುಹಾಕುತ್ತೇವೆ. ಈಶಾನ್ಯದಲ್ಲಿ ಅಭಿವೃದ್ಧಿಯ ಕಾರಿಡಾರ್ ನಿರ್ಮಿಸಲು ಒತ್ತು ನೀಡುತ್ತೇವೆಯೇ ವಿನಾ ವಿವಾದದ ಗಡಿಗಳನ್ನಲ್ಲ’ ಎಂದರು.
‘ಈಶಾನ್ಯ ಗಡಿಯ ಗ್ರಾಮಗಳಲ್ಲಿ ಉತ್ತಮ ಸೌಲಭ್ಯಗಳನ್ನು ದೊರಕಿಸುವ ‘ವೈಬ್ರಂಟ್ ವಿಲೇಜ್ ಪ್ರೋಗ್ರಾಂ’ ಅನ್ನು ಕೇಂದ್ರ ಶೀಘ್ರಗತಿಯಲ್ಲಿ ಜಾರಿ ಮಾಡುತ್ತಿದೆ. ಗಡಿ ಭಾಗದಲ್ಲಿ ಹೊಸ ರಸ್ತೆಗಳು, ಸೇತುವೆಗಳು, ಸುರಂಗ ಮಾರ್ಗಗಳು, ರೈಲ್ವೆ ಮಾರ್ಗಗಳು, ವಿಮಾನ ನಿಲ್ದಾಣಗಳನ್ನು ಧೈರ್ಯದಿಂದ ನಿರ್ಮಿಸುತ್ತಿದ್ದೇವೆ. ನಿರ್ಜನವಾಗಿದ್ದ ಗಡಿಗ್ರಾಮಗಳಿಗೆ ಜೀವಕಳೆ ಬಂದಿದೆ ಎಂದು ಪ್ರಧಾನಿ ಹೇಳಿದರು.
₹2,450 ಕೋಟಿ ಮೊತ್ತದ ಕಾಮಗಾರಿಗಳ ಉದ್ಘಾಟನೆ
ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿ ₹2,450 ಕೋಟಿ ಮೊತ್ತದ ಕಾಮಗಾರಿಗಳನ್ನು ಅವರು ಉದ್ಘಾಟಿಸಿದರು. 4ಜಿ ಮೊಬೈಲ್ ಗೋಪುರ, ಐಐಎಂ ಶಿಲ್ಲಾಂಗ್, ಶಿಲ್ಲಾಂಗ್–ದೀಂಗ್ಬಾಸೋಹ್ ರಸ್ತೆ ಕಾಮಗಾರಿ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ ರಸ್ತೆಗಳನ್ನು ಮೋದಿ ಅವರು ಉದ್ಘಾಟಿಸಿದರು. ಶಿಲ್ಲಾಂಗ್‌ನಲ್ಲಿ ಈಶಾನ್ಯ ಮಂಡಳಿಯ (ಎನ್‌ಇಸಿ) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗೃಹಸಚಿವ ಅಮಿತ್ ಶಾ ಉಪಸ್ಥಿತರಿದ್ದರು. ನಂತರ, ತ್ರಿಪುರಾ ರಾಜಧಾನಿ ಅಗರ್ತಲಾಗೆ ಭೇಟಿ ನೀಡಿದ ಪ್ರಧಾನಿ, ಪ್ರ₹4,350 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
‘ಕಳೆದ ಎಂಟು ವರ್ಷಗಳಿಂದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಈಶಾನ್ಯವು ಶಾಂತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಹಲವು ಬಂಡುಕೋರ ಗುಂಪುಗಳು ಹಿಂಸೆಯ ಮಾರ್ಗವನ್ನು ತೊರೆದಿವೆ. ರಾಜ್ಯಸರ್ಕಾರಗಳ ನೆರವಿನ ಜೊತೆಗೆ ತೆಗೆದುಕೊಂಡ ಕ್ರಮಗಳಿಂದಾಗಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ಬಹುತೇಕ ಜಾಗಗಳಲ್ಲಿ ಆಫ್‌ಸ್ಪ ಹಿಂದೆಗೆದುಕೊಳ್ಳಲಾಗಿದೆ. ರಾಜ್ಯಗಳ ನಡುವಿನ ಗಡಿಬಿಕ್ಕಟ್ಟುಗಳೂ ಶಮನಗೊಂಡಿವೆ’ ಎಂದು ಮೋದಿ ಹೇಳಿದರು.
ಭ್ರಷ್ಟಾಚಾರ, ತಾರತಮ್ಯ, ವಂಶಾಡಳಿತ, ಹಿಂಸಾಚಾರ, ಮತಬ್ಯಾಂಕ್ ರಾಜಕಾರಣಗಳು ಈಶಾನ್ಯದ ಅಭಿವೃದ್ಧಿಗೆ ತೊಡಕಾಗಿದ್ದವು. ಪ್ರಗತಿಗೆ ಅಡ್ಡಿಯಾಗಿದ್ದ ಎಲ್ಲ ವಿಚಾರಗಳನ್ನೂ ನಿವಾರಣೆ ಮಾಡಿದ್ದೇವೆ. ಎಲ್ಲ ದುಷ್ಟಶಕ್ತಿಗಳನ್ನು ಬುಡಮೇಲು ಮಾಡಲು ಪ್ರಾಮಾಣಿಕ ಯತ್ನದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಪ್ರಧಾನಿ ಹೇಳಿದರು.
ತ್ರಿಪುರಾದಲ್ಲಿ ಮತ್ತೆ ಎರಡನೇ ಅವಧಿಗೆ ಸರ್ಕಾರ ರಚಿಸುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದೆ. ಮೇಘಾಲಯದಲ್ಲಿ ಎನ್‌ಪಿಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ಮೈತ್ರಿಕೂಟದ ಕಿರಿಯ ಪಾಲುದಾರ ಆಗಿರುವ ಬಿಜೆಪಿಯಿಂದ ಇಬ್ಬರು ಶಾಸಕರಿದ್ದಾರೆ. ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಎನ್‌ಪಿಪಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.