ಗುರುವಾರ , ಆಗಸ್ಟ್ 11, 2022
23 °C
ಭಾರತ–ಜಪಾನ್‌ ಸೇನಾ ನೆಲೆ ಹಂಚಿಕೆ ಒಪ್ಪಂದಕ್ಕೆ ಸಹಿ

ಚೀನಾ ಗಡಿ ತಂಟೆಗೆ ಮತ್ತೊಂದು ಎದುರೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ಜಪಾನ್‌ ತಮ್ಮ ಭೂ, ವಾಯು ಮತ್ತು ನೌಕಾ ಸೇನೆಗಳ ನೆಲೆಗಳನ್ನು ಪರಸ್ಪರರ ಬಳಕೆಗೆ ತೆರೆದಿಡಲು ನಿರ್ಧರಿಸಿವೆ. ಚೀನಾದ ಅತಿಕ್ರಮಣಕಾರಿ ಪ್ರವೃತ್ತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ರಕ್ಷಣಾ ಸಹಕಾರದ ಈ ನಡೆ ಮಹತ್ವ ಪಡೆದುಕೊಂಡಿದೆ. 

ಕ್ವಾಡ್‌ ಕೂಟದ (ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌) ಎಲ್ಲ ದೇಶಗಳ ಜತೆಗೆ ಭಾರತ ಇಂತಹ ಒಪ್ಪಂದ ಮಾಡಿಕೊಂಡಂತಾಗಿದೆ. ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ವಿಸ್ತರಣಾವಾದಿ ನೀತಿಯನ್ನು ತಡೆಯುವುದಕ್ಕಾಗಿಯೇ 2017ರಲ್ಲಿ ಕ್ವಾಡ್‌ ಕೂಟ ರಚನೆಯಾಗಿದೆ. 

ಜಪಾನ್‌ ಜತೆಗಿನ ಒಪ್ಪಂದವು, ಚೀನಾದ ಜತೆಗಿನ ವಿವಾದಾತ್ಮಕ ಗಡಿ ಪ್ರದೇಶಕ್ಕೆ ಸೀಮಿತವಲ್ಲ. ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶ, ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರ ಮತ್ತು ತೈವಾನ್‌ ಖಾರಿಗೆ ಕೂಡ ಅನ್ವಯ. 

ವರ್ಷದ ಕೊನೆಗೆ ಕವಾಯತು: ಭಾರತ, ಜಪಾನ್‌ ಮತ್ತು ಅಮೆರಿಕದ ನೌಕಾಪಡೆಗಳ ‘ಮಲಬಾರ್‌ 2020’ ಅಭ್ಯಾಸ ಈ ವರ್ಷದ ಕೊನೆಯಲ್ಲಿ ಹಿಂದೂ ಮಹಾಸಾಗರದ ಮಲಕ್ಕಾ ಖಾರಿ ಯಲ್ಲಿ ನಡೆಯಲಿದೆ. ಮಲಕ್ಕಾ ಖಾರಿಯು ಚೀನಾಕ್ಕೆ ಅತ್ಯಂತ ಮಹತ್ವದ ಸಮುದ್ರ ಮಾರ್ಗವಾಗಿದೆ. ಸಂಘರ್ಷ ತೀವ್ರಗೊಂಡರೆ ಈ ಮಾರ್ಗದಲ್ಲಿ ತೊಂದರೆ ಖಚಿತ ಎಂಬ ಸಂದೇಶವನ್ನು ಚೀನಾಕ್ಕೆ ರವಾನಿಸುವುದಕ್ಕಾಗಿಯೇ ಇಲ್ಲಿ ಕಸರತ್ತು ನಡೆಸಲಾಗುತ್ತಿದೆ. ಮೂರು ರಾಷ್ಟ್ರಗಳ ತ್ರಿಪಕ್ಷೀಯ ಕವಾಯತನ್ನು ಕ್ವಾಡ್‌ ಕೂಟದ ಮೊದಲ ಜಂಟಿ ಅಭ್ಯಾಸವಾಗಿ ಪರಿವರ್ತಿಸುವ ಚಿಂತನೆಯೂ ಇದೆ. ಕ್ವಾಡ್‌ ಕವಾಯತು ನಡೆದರೆ ಚೀನಾದ ಚಿಂತೆ ಹೆಚ್ಚುವುದು ಖಚಿತ ಎನ್ನಲಾಗಿದೆ.

ಜೈಶಂಕರ್‌–ವಾಂಗ್‌ ಭೇಟಿ

ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌ ಮತ್ತು ವಾಂಗ್ ಯಿ ಅವರು ಮಾಸ್ಕೊದಲ್ಲಿ ಗುರುವಾರ ಭೇಟಿಯಾಗಿದ್ದಾರೆ. ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಮಾವೇಶದ ಸಂದರ್ಭದಲ್ಲಿ ಈ ಭೇಟಿ ನಡೆಯಿತು.

ಗಡಿಯಲ್ಲಿನ ಸಂಘರ್ಷ ತಪ್ಪಿಸುವುದಕ್ಕಾಗಿ ದ್ವಿಪಕ್ಷೀಯವಾದ ಎಲ್ಲ ಒಪ್ಪಂದಗಳಿಗೆ ಚೀನಾವು ಕಟ್ಟುನಿಟ್ಟಿನ ಬದ್ಧತೆ ತೋರಬೇಕು ಎಂದು ಜೈಶಂಕರ್‌ ಅವರು ವಾಂಗ್‌ಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಜೈಶಂಕರ್‌ ಮತ್ತು ವಾಂಗ್‌ ನಡುವೆ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯ್‌ ಲಾವ್ರೊವ್‌ ಅವರ ಸಮ್ಮುಖದಲ್ಲಿಯೂ ಒಂದು ಸಭೆ ನಡೆದಿದೆ. ಭಾರತ–ಚೀನಾ ಗಡಿ ಬಿಕ್ಕಟ್ಟು ನಿವಾರಣೆಗೆ ಲಾವ್ರೊವ್‌ ಅವರೂ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಚೀನಾ ಜತೆಗಿನ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಲು ಭಾರತ ಬದ್ಧ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ. ಜೈಶಂಕರ್‌–ವಾಂಗ್ ಭೇಟಿಯ ಬೆನ್ನಿಗೇ ಈ ಹೇಳಿಕೆ ಹೊರಬಿದ್ದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು