ಶನಿವಾರ, ಆಗಸ್ಟ್ 13, 2022
24 °C

ಭಾರತ–ಚೀನಾ ವಿದೇಶಾಂಗ ಸಚಿವರ ಮಾತುಕತೆ; ಗಡಿ ಸಂಘರ್ಷ ಶಮನಕ್ಕೆ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಕಳೆದ ನಾಲ್ಕು ತಿಂಗಳಿಂದ ನಿರ್ಮಾಣವಾಗಿರುವ ಪ್ರಕ್ಷುಬ್ಧ ಸ್ಥಿತಿಯನ್ನು ಶಮನಗೊಳಿಸಲು ಐದು ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಭಾರತ ಮತ್ತು ಚೀನಾ ರೂಪಿಸಿವೆ.

ಭಾರತ ಮತ್ತು ಚೀನಾ ವಿದೇಶಾಂಗ ಸಚಿವರಾದ ಎಸ್‌.ಜೈಶಂಕರ್‌ ಹಾಗೂ ವಾಂಗ್‌ ಯಿ ಅವರ ನಡುವಿನ ಮಾತುಕತೆ ವೇಳೆ, ಬಿಕ್ಕಟ್ಟು ತಿಳಿಗೊಳಿಸಲು ಉಭಯ ದೇಶಗಳು ಸಮ್ಮತಿಸಿದವು ಎಂದು ಮೂಲಗಳು ತಿಳಿಸಿವೆ.

ತ್ವರಿತವಾಗಿ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಪಡೆಯಬೇಕು, ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನಕ್ಕೆ ಭಂಗ ತರುವ ಯಾವುದೇ ಕ್ರಮಗಳಿಗೆ ಮುಂದಾಗಬಾರದು, ಗಡಿಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಒಪ್ಪಂದದಲ್ಲಿ ಉಲ್ಲೇಖಿಸಿದ ಪ್ರಕಾರ ಎರಡೂ ದೇಶಗಳ ಯೋಧರು ನಿರ್ದಿಷ್ಟ ಅಂತರದಲ್ಲಿ ಇರಬೇಕು, ಗಡಿ ನಿರ್ವಹಣೆಗೆ ಸಂಬಂಧಿಸಿದ ಶಿಷ್ಟಾಚಾರ ಪಾಲಿಸಬೇಕು ಎಂಬ ಅಂಶಗಳಿಗೆ ಸಚಿವರು ಒಪ್ಪಿಗೆ ನೀಡಿದರು.

‘ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳ ನಾಯಕರಿಂದ ಮಾರ್ಗದರ್ಶನ ಪಡೆಯಬೇಕು, ಭಿನ್ನಾಭಿಪ್ರಾಯಗಳೇ ವಿವಾದವಾಗುವುದನ್ನು ತಪ್ಪಿಸಬೇಕು ಎಂಬ ಒಮ್ಮತಕ್ಕೆ ಬರಲಾಯಿತು’ ಎಂದು ಉಭಯ ದೇಶಗಳ ವಿದೇಶಾಂಗ ಸಚಿವರು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಸಚಿವರಾದ ಜೈಶಂಕರ್‌ ಮತ್ತು ವಾಂಗ್‌ ಯಿ ನಡುವೆ ಎರಡೂವರೆ ಗಂಟೆ ಕಾಲ ಮಾತುಕತೆ ನಡೆಯಿತು. ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾ ಭಾರಿ ಪ್ರಮಾಣದಲ್ಲಿ ಯೋಧರ ನಿಯೋಜನೆ ಮತ್ತು ಶಸ್ತ್ರಾಸ್ತ್ರ ಜಮಾವಣೆ ಮಾಡಿದ್ದನ್ನು ಜೈಶಂಕರ್‌ ಪ್ರಸ್ತಾಪಿಸಿದರು. ಈ ಬಗ್ಗೆ ಚೀನಾದಿಂದ ತೃಪ್ತಿಕರವಾದ ವಿವರಣೆ ದೊರೆಯಲಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು