ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆರಡು ಲಸಿಕೆಗಳ ಬಳಕೆಗೆ ಅನುಮತಿ

‘ಕೋವೊವ್ಯಾಕ್ಸ್’, ‘ಕಾರ್ಬಿವ್ಯಾಕ್ಸ್’ ಲಸಿಕೆ, ಮೊಲ್ನುಪಿರವಿರ್‌ ಔಷಧಕ್ಕೆ ಒಪ್ಪಿಗೆ
Last Updated 28 ಡಿಸೆಂಬರ್ 2021, 18:13 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ತಡೆಯ ‘ಕೋವೊವ್ಯಾಕ್ಸ್’ ಮತ್ತು ‘ಕಾರ್ಬಿವ್ಯಾಕ್ಸ್’ ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕರು ಮಂಗಳವಾರ ಅನುಮೋದನೆ ನೀಡಿದ್ದಾರೆ. ಜೊತೆಗೆ ‘ಮೊಲ್ನುಪಿರವಿರ್‌’ ಔಷಧದ ತುರ್ತು ಬಳಕೆಗೂ ಅನುಮತಿ ನೀಡಲಾಗಿದ್ದು, 13 ಕಂಪನಿಗಳು ಇದನ್ನು ಸ್ಥಳೀಯವಾಗಿ ತಯಾರಿಸಲಿವೆ.ಎರಡೂ ಲಸಿಕೆ ಹಾಗೂ ಔಷಧವನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಭಾರತದ ಕಂಪನಿಗಳ ಸಹಯೋಗದಲ್ಲಿ ದೇಶೀಯವಾಗಿಯೇ ತಯಾರಾಗಲಿವೆ.

ಈ ಎರಡು ಲಸಿಕೆಗಳ ಮೂಲಕ ದೇಶದಲ್ಲಿ ಒಟ್ಟು ಎಂಟು ಲಸಿಕೆಗಳಿಗೆ ಅನುಮೋದನೆ ಸಿಕ್ಕಂತಾಗಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್, ಝೈಕೋವ್‌–ಡಿ, ಸ್ಪುಟ್ನಿಕ್ ವಿ, ಮೊಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳ ತುರ್ತು ಬಳಕೆಗೆ ಈಗಾಗಲೇ ಅನುಮತಿ ಸಿಕ್ಕಿದೆ.

ಪ್ರೊಟೀನ್ ಆಧಾರಿತ ಕೋವೊವ್ಯಾಕ್ಸ್ ಲಸಿಕೆಯನ್ನು ಅಮೆರಿಕದ ನೋವೊವ್ಯಾಕ್ಸ್ ಪಾಲುದಾರಿಕೆಯಲ್ಲಿ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಲಿದೆ. ಹ್ಯೂಸ್ಟನ್‌ನ ಬಾಯ್ಲರ್ ಕಾಲೇಜ್ ಆಫ್ ಮೆಡಿಸಿನ್ ಮತ್ತು ಡೈನಾವ್ಯಾಕ್ಸ್ ಟೆಕ್ನಾಲಜಿ ಸಹಯೋಗದಲ್ಲಿ ಹೈದರಾಬಾದ್‌ನ ಬಯೊಲಾಜಿಕಲ್–ಇ ಸಂಸ್ಥೆಯು ಕಾರ್ಬಿವ್ಯಾಕ್ಸ್ ಲಸಿಕೆ ತಯಾರಿಸಲಿದೆ.

ಈ ಎರಡೂ ಲಸಿಕೆಗಳನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. 2ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇವನ್ನು ಇರಿಸಬೇಕು. ಕಾರ್ಬಿವ್ಯಾಕ್ಸ್ ಲಸಿಕೆಯು ವುಹಾನ್‌ ತಳಿಯ ವಿರುದ್ಧ ಶೇ 90ರಷ್ಟು, ಡೆಲ್ಟಾ ತಳಿ ವಿರುದ್ಧ ಶೇ 80ರಷ್ಟು ಪರಿಣಾಮಕಾರಿ ಎನಿಸಿದ್ದು, ಮೊದಲ ಡೋಸ್ ನೀಡಿದ 28ನೇ ದಿನದ ಬಳಿಕ ಎರಡನೇ ಡೋಸ್ ನೀಡ ಬೇಕು. ಕೋವೊವ್ಯಾಕ್ಸ್ ಶೇ 90ರಷ್ಟು ಪರಿ ಣಾಮಕಾರಿ ಎನಿಸಿದ್ದು, 2ನೇ ಡೋಸ್ ನೀಡಲು 21 ದಿನದ ಅಂತರ ಸಾಕು.

ಬಯೊಲಾಜಿಕಲ್–ಇ ಸಂಸ್ಥೆ ಜೊತೆಗೆ ಜೂನ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದ ಕೇಂದ್ರ ಸರ್ಕಾರವು, ₹1,500 ಕೋಟಿ ವೆಚ್ಚದಲ್ಲಿ 30 ಕೋಟಿ ಡೋಸ್‌ ಪೂರೈಸಲು ಬೇಡಿಕೆ ಸಲ್ಲಿಸಿತ್ತು.ತಿಂಗಳಿಗೆ 7.5 ಕೋಟಿ ಡೋಸ್ ತಯಾರಿಸಲು ಸಂಸ್ಥೆ ಉದ್ದೇಶಿಸಿದೆ. 2022ರ ಫೆಬ್ರುವರಿಯಿಂದ ಈ ಪ್ರಮಾಣವನ್ನು 10 ಕೋಟಿಗೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ.ಕೋವೊವ್ಯಾಕ್ಸ್ ಲಸಿಕೆ ತಯಾರಿಯ ಪ್ರಮಾಣದ ಬಗ್ಗೆ ಸೀರಂ ಸಂಸ್ಥೆ ಇನ್ನೂ ಮಾಹಿತಿ ನೀಡಿಲ್ಲ.

ಆ್ಯಂಟಿ ವೈರಲ್ ಔಷಧವಾದ ‘ಮೊಲ್ನುಪಿರವಿರ್’ ದೇಹದೊಳಗೆ ಕೊರೊನಾ ವೈರಸ್ ದುಪ್ಪಟ್ಟಾಗುವುದನ್ನು ತಡೆಯುತ್ತದೆ ಮತ್ತು ಇದನ್ನು ಕೋವಿಡ್‌ನ ಆರಂಭಿಕ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಡಾ. ರೆಡ್ಡೀಸ್ ಲ್ಯಾಬ್, ನಾಟ್ಕೊ ಫಾರ್ಮಾ, ಮೈಲಾನ್, ಸ್ಟ್ರೈಡ್ಸ್, ಸಿಪ್ಲಾ, ಸನ್ ಫಾರ್ಮಾ ಸೇರಿದಂತೆ 13 ಕಂಪನಿಗಳು ಈ ಔಷಧ ತಯಾರಿಸಲಿವೆ. ಸೌಮ್ಯ ಮತ್ತು ಮಧ್ಯಮ ಕೋವಿಡ್ ಲಕ್ಷಣಗಳಿರುವ ಜನರಿಗೆ ಈ ಔಷಧವನ್ನು ನೀಡಲು ಅಮೆರಿಕ ಹಾಗೂ ಬ್ರಿಟನ್ ಸರ್ಕಾರಗಳು ಇತ್ತೀಚೆಗೆ ಅನುಮತಿ ನೀಡಿದ್ದವು.

ಈ ಔಷಧವನ್ನು ವೈದ್ಯರ ಸಲಹೆ ಮೇರೆಗೆ ನೀಡಲಾಗುತ್ತದೆ. ರೋಗಿಯ ರಕ್ತದಲ್ಲಿ ಆಮ್ಲಜನಕದ ಪ್ರಮಾಣವು ಶೇ 93ಕ್ಕಿಂತ ಹೆಚ್ಚಿದ್ದು, ಆಸ್ಪತ್ರೆ ಸೇರಬೇಕಾದ ತುರ್ತು ಉಂಟಾದ ವ್ಯಕ್ತಿಗೆ ನೀಡಲಾಗುತ್ತದೆ. 800 ಎಂಜಿ ಪ್ರಮಾಣದಲ್ಲಿದಿನಕ್ಕೆ ಎರಡು ಬಾರಿ, ಐದು ದಿನ ಔಷಧ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.

ಶಾಲಾ-ಕಾಲೇಜು, ಸಿನಿಮಾ ಮಂದಿರ ಬಂಧ್‌

ನವದೆಹಲಿ: ಓಮೈಕ್ರಾನ್ ಸೇರಿದಂತೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿದ್ದಾರೆ. ಸರ್ಕಾರದ ಆದೇಶದ ಪ್ರಕಾರ, ಶಾಲೆಗಳು, ಕಾಲೇಜುಗಳು, ಸಿನಿಮಾ ಮಂದಿರಗಳು ಹಾಗೂ ಜಿಮ್‌ಗಳು ಬಂದ್ ಆಗಲಿವೆ.

ಅಗತ್ಯವಲ್ಲದ ವಸ್ತುಗಳ ಮಾರಾಟದ ಅಂಗಡಿಗಳು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ದಿನ ಬಿಟ್ಟು ದಿನ ಮಾತ್ರ ತೆರೆಯಬೇಕು. ಬಸ್‌ ಹಾಗೂ ಮೆಟ್ರೊಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ 50ರಷ್ಟು ಜನರು ಪ್ರಯಾಣಿಸಲು ಮಾತ್ರ ಅನುಮತಿ ಇದೆ. ಶೇ 50ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಮದುವೆ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನರ ಮಿತಿ
ಹೇರಲಾಗಿದೆ.

ಜನ ಸೇರುವ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ. ರೆಸ್ಟೋರೆಂಟ್‌ಗಳು ಒಟ್ಟು ಆಸನ ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು. ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ತೆರೆದಿರಬಹುದು. ಜನರ ಮಿತಿ ನಿಯಮ ಬಾರ್‌ಗಳಿಗೂ ಅನ್ವಯವಾಗಲಿದ್ದು, ಇವು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ತೆರೆದಿರಬಹುದು.

ಕೋವಿಡ್‌ ದೃಢಪಡುವಿಕೆ ದರವು ಸತತವಾಗಿ ಎರಡು ದಿನ ಶೇ 0.50ಕ್ಕಿಂತ ಹೆಚ್ಚಿದ್ದರೆ, ಯೆಲ್ಲೋ ಅಲರ್ಟ್ ಘೋಷಿಸಲಾಗುತ್ತದೆ. ಪ್ರಕರಣ ಹೆಚ್ಚುತ್ತಿರುವುದರಿಂದ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಜನರು ದಿಗಿಲಿಗೆ ಒಳಗಾಗಬಾರದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ದಾಖಲೆಯ ಪ್ರಕರಣ: ದೆಹಲಿಯಲ್ಲಿ ಒಂದೇ ದಿನ ಕೋವಿಡ್‌ನ 331 ಹೊಸ ಪ್ರಕರಣಗಳು ವರದಿಯಾಗಿದ್ದು, ದೃಢಪಡುವಿಕೆ ದರ ಶೇ 0.67 ದಾಖಲಾಗಿದೆ.


ಮುನ್ನೆಚ್ಚರಿಕೆ ಡೋಸ್‌ಗೆ ವೈದ್ಯರ ಶಿಫಾರಸು ಬೇಕಿಲ್ಲ

ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ 60 ವರ್ಷಕ್ಕೆ ಮೇಲ್ಪಟ್ಟ ವ್ಯಕ್ತಿಗಳಿಗೆ ಲಸಿಕೆಯ ‘ಮುನ್ನೆಚ್ಚರಿಕೆ ಡೋಸ್’ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ. ಆದರೆ ವೈದ್ಯರ ಶಿಫಾರಸು ಪತ್ರವಿದ್ದರೆ ಲಸಿಕೆ ನೀಡಲಾಗುವುದು ಎಂಬ ನಿಯಮವನ್ನು ಕೈಬಿಡಲಾಗಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂಧ ಮಂಗಳವಾರ ಮಾಹಿತಿ
ನೀಡಿದ್ದಾರೆ.

ಚುನಾವಣೆಗೆ ನಿಯೋಜಿಸುವ ಸಿಬ್ಬಂದಿಯನ್ನೂ ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಅವರಿಗೂ ಮುನ್ನೆಚ್ಚರಿಕೆ ಡೋಸ್ ನೀಡಬೇಕು ಎಂದು ಸರ್ಕಾರ ತಿಳಿಸಿದೆ. 2ನೇ ಡೋಸ್ ಪಡೆದು 39 ವಾರ ಅಥವಾ 9 ತಿಂಗಳು ಕಳೆದಿರುವವರು ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ‘ಕೋವಿನ್’ ವ್ಯವಸ್ಥೆಯು ಮುನ್ನೆಚ್ಚರಿಕೆ ಡೋಸ್ ಪಡೆಯುವ ಕುರಿತಂತೆ
ಅರ್ಹರಿಗೆ ಸಂದೇಶ ಕಳುಹಿಸಲಿದೆ. ಮುನ್ನೆಚ್ಚರಿಕೆ ಡೋಸ್ ಪಡೆದ ಮಾಹಿತಿಯು ಡಿಜಿಟಲ್ ರೂಪದ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ನಮೂದಾಗಲಿದೆ.

ಓಮೈಕ್ರಾನ್‌ ಪ್ರಕರಣ 653ಕ್ಕೆ ಏರಿಕೆ

ನವದೆಹಲಿ (ಪಿಟಿಐ): ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಸೋಂಕಿತರ ಸಂಖ್ಯೆ ದೇಶದಲ್ಲಿ 653ಕ್ಕೆ ಏರಿದೆ. ಅವರ ಪೈಕಿ 186 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ಹೇಳಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ, 167 ಪ್ರಕರಣಗಳಿವೆ. ದೆಹಲಿಯಲ್ಲಿ 165, ಕೇರಳದಲ್ಲಿ 57, ತೆಲಂಗಾಣದಲ್ಲಿ 55, ಗುಜರಾತ್‌ನಲ್ಲಿ 49 ಮತ್ತು ರಾಜಸ್ಥಾನದಲ್ಲಿ 46 ಪ್ರಕರಣಗಳು ದೃಢಪಟ್ಟಿವೆ. ಇದು ಮಂಗಳವಾರ ಬೆಳಿಗ್ಗೆ 8.30ರ ವರೆಗಿನ ದತ್ತಾಂಶವಾಗಿದೆ.

6,358 ಜನರಲ್ಲಿ ಕೊರೊನಾ ಸೋಂಕು ಮಂಗಳವಾರ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 75,456ಕ್ಕೆ ಇಳಿದಿದೆ. 293 ಮಂದಿ ಮೃತಪಟ್ಟಿದ್ದಾರೆ. 61 ದಿನಗಳಲ್ಲಿ ಪ್ರತಿ ದಿನದ ಹೊಸ ಸೋಂಕು ಸಂಖ್ಯೆಯು 15 ಸಾವಿರದ ಒಳಗೇ ಇದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕೇರಳದಲ್ಲಿ 1,636 ಮತ್ತು ಮಹಾರಾಷ್ಟ್ರದಲ್ಲಿ 2,172 ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT