ಭಾನುವಾರ, ಆಗಸ್ಟ್ 14, 2022
20 °C

ತೀಸ್ತಾ ಬಂಧನ: ಒಎಚ್‌ಸಿಎಚ್‌ಆರ್‌ ವಿರುದ್ಧ ಹರಿಹಾಯ್ದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಕಚೇರಿಯು (ಒಎಚ್‌ಸಿಎಚ್‌ಆರ್‌) ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಬಂಧನವನ್ನು ಖಂಡಿಸಿದೆ. ತೀಸ್ತಾ ಪರ ಟ್ವೀಟ್‌ ಮಾಡಿರುವ ಒಎಚ್‌ಸಿಎಚ್‌ಆರ್‌ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹರಿಹಾಯ್ದಿದ್ದಾರೆ.

‘ತೀಸ್ತಾ ಹಾಗೂ ಇಬ್ಬರು ಮಾಜಿ ಐಪಿಎಸ್‌ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ಕಳವಳಕಾರಿ. ಅವರಿಗೆ ಕಿರುಕುಳ ನೀಡದೆ ಬಂಧಿತರನ್ನೆಲ್ಲಾ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒಎಚ್‌ಸಿಎಚ್‌ಆರ್‌ ಟ್ವೀಟ್‌ ಮೂಲಕ ಆಗ್ರಹಿಸಿದೆ.

‘ತೀಸ್ತಾ ಪ್ರಕರಣದ ಕುರಿತು ಒಎಚ್‌ಸಿಎಚ್‌ಆರ್‌ ಮಾಡಿರುವ ಟ್ವೀಟ್‌ ನಮ್ಮ ಗಮನಕ್ಕೆ ಬಂದಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿದೆ. ಇದರಲ್ಲಿ  ಮೂಗು ತೂರಿಸುವ ಕೆಲಸವನ್ನು ಒಎಚ್‌ಸಿಎಚ್‌ಆರ್‌ ಮಾಡಬಾರದು’ ಎಂದು ಬಾಗ್ಚಿ ‍‍ಹೇಳಿದ್ದಾರೆ.

‘ಕಾನೂನು ಉಲ್ಲಂಘಿಸುವವರ ವಿರುದ್ಧ ನ್ಯಾಯಾಂಗದ ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಕಿಡಿಕಾರಿದ್ದಾರೆ.

2002ರ ಗುಜರಾತ್‌ ಗಲಭೆ ಪ‍್ರಕರಣಗಳಲ್ಲಿ ‘ಮುಗ್ಧ’ ಜನರನ್ನು ಸಿಲುಕಿಸುವುದಕ್ಕಾಗಿ ದಾಖಲೆಗಳನ್ನು ತಿರುಚಿದ ಮತ್ತು ಅಪರಾಧ ಒಳಸಂಚು ನಡೆಸಿದ ಆರೋಪದಲ್ಲಿ ತೀಸ್ತಾ, ಮಾಜಿ ಐಪಿಎಸ್‌ ಅಧಿಕಾರಿಗಳಾದ ಆರ್‌.ಬಿ.ಶ್ರೀಕುಮಾರ್ ಮತ್ತು ಸಂಜೀವ್‌ ಭಟ್‌ ಅವರನ್ನು ಬಂಧಿಸಲಾಗಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು