ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ: ಶಾಂತಿ, ಭದ್ರತೆಗೆ ನಮ್ಮ ಬೆಂಬಲ ಎಂದ ಭಾರತ

ನವದೆಹಲಿ: ಭಾರತವು ಅಂತರರಾಷ್ಟ್ರೀಯ ಕಾನೂನು ಪಾಲನೆ, ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಪರವಾಗಿ ಯಾವಾಗಲು ಧ್ವನಿ ಎತ್ತಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಸಾಗರ ಭದ್ರತೆ, ಅಂತರರಾಷ್ಟ್ರೀಯ ಸಹಕಾರ, ಶಾಂತಿ ಪಾಲನೆ ಮತ್ತು ಭದ್ರತೆಯ ವಿಚಾರವಾಗಿ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಉನ್ನತ ಮಟ್ಟದ ವರ್ಚುವಲ್ ಸಭೆಯು ಆಗಸ್ಟ್ 9ರಂದು ನಡೆಯಲಿದೆ. ಪ್ರಧಾನಿ ಮೋದಿ ಅವರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಅದಕ್ಕೂ ಮುನ್ನ ಬಾಗ್ಚಿ ಹೇಳಿಕೆ ನೀಡಿದ್ದಾರೆ.
ಆಗಸ್ಟ್ 9ರಂದು ನಡೆಯುವ ಯುಎನ್‌ಎಸ್‌ಸಿ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿಕೊಳ್ಳಲಿದ್ದಾರೆ. ಭಾರತ ಯಾವಾಗಲೂ ಅಂತರರಾಷ್ಟ್ರೀಯ ಕಾನೂನಿನ ಧ್ವನಿಯಾಗಲಿದೆ. ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಬೆಂಬಲಿಸುತ್ತದೆ. ಅಂತರರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಭಾರತ ಸಮಾಲೋಚನೆ, ಸಂವಾದ ನಡೆಸಲಿದ್ದು, ನ್ಯಾಯವನ್ನು ಪ್ರತಿಪಾದಿಸಲಿದೆ ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರೂ ಈ ತಿಂಗಳು ನ್ಯೂಯಾರ್ಕ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಭಾರತವು ಆಗಸ್ಟ್ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ. ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.
ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷತೆ ವಹಿಸಿತ್ತು.
ಇವನ್ನೂ ಓದಿ
* ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆಗೆ ಅಮೆರಿಕದ ಬೆಂಬಲ
* ಮ್ಯಾನ್ಮಾರ್ನಲ್ಲಿನ ಅಸ್ಥಿರತೆಯಿಂದಲೂ ಭಾರತದ ಮೇಲೆ ನೇರ ಪರಿಣಾಮ: ತಿರುಮೂರ್ತಿ
* ಭಯೋತ್ಪಾದನೆ ಚಟುವಟಿಕೆ ಮೇಲೆ ತೀವ್ರ ನಿಗಾ: ತಿರುಮೂರ್ತಿ
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ: ದಿಟ್ಟ ಹೆಜ್ಜೆಗುರುತು –ಭಾರತ
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಸಿಗಲಿ: ಉಜ್ಬೇಕಿಸ್ತಾನ
* ಭಯೋತ್ಪಾದನೆಗೆ ಡ್ರೋನ್ ಬಳಕೆ ಸಾಧ್ಯತೆ, ಗಂಭೀರ ಪರಿಗಣನೆ ಅಗತ್ಯ: ಭಾರತ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.