ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪುನಶ್ಚೇತನಕ್ಕೆ ಮುನ್ನುಡಿ: ಸಿದ್ದರಾಮಯ್ಯ– ಸೋನಿಯಾ ಚರ್ಚೆ

‍‍ಪೈಲಟ್‌ಗೆ ಎಐಸಿಸಿ ಅಧ್ಯಕ್ಷ ಗಿರಿ?
Last Updated 5 ಅಕ್ಟೋಬರ್ 2021, 22:21 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದ ಪುನಶ್ಚೇತನ ಪ್ರಕ್ರಿಯೆಗೆ ಕೊನೆಗೂ ಚಾಲನೆ ಕೊಟ್ಟಿರುವ ಎಐಸಿಸಿ ಉಸ್ತುವಾರಿ ಅಧ್ಯಕ್ಷೆ ಸೋನಿಯಾಗಾಂಧಿ, ಸಂಘಟನೆಯಲ್ಲಿ ನಿಷ್ಕ್ರಿಯವಾಗಿರುವ ‘ಹಿರಿತಲೆ’ಗಳಿಗೆ ಕಡ್ಡಾಯ ನಿವೃತ್ತಿ ನೀಡಿ, ರಾಜಕಾರಣದಲ್ಲಿ ಸಕ್ರಿಯವಾಗಿರುವ ಪಕ್ಷ ನಿಷ್ಠರಿಗೆ ರಾಷ್ಟ್ರೀಯ ಮಟ್ಟದ ಹುದ್ದೆ ಕಲ್ಪಿಸುವತ್ತ ಅಡಿ ಇಟ್ಟಿದ್ದಾರೆ.

ಇದರ ಭಾಗವಾಗಿ ಕರ್ನಾಟಕದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮಂಗಳವಾರ ದಿಢೀರ್ ಕರೆಸಿಕೊಂಡಿರುವ ಸೋನಿಯಾ, ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ ಸಚಿನ್ ಪೈಲಟ್ ಅವರನ್ನು ನೇಮಕ ಮಾಡುವುದು, ಅವರ ಕೈ ಬಲಪಡಿಸಲು ನಾಲ್ವರು ಕಾರ್ಯಾಧ್ಯಕ್ಷರ ನೇಮಕದ ಬಗ್ಗೆಯೂ ಚರ್ಚೆ ನಡೆದಿದೆ. ಒಂದು ಕಾರ್ಯಾಧ್ಯಕ್ಷ ಹುದ್ದೆಯನ್ನು (ದಕ್ಷಿಣ ವಲಯ) ಕರ್ನಾಟಕಕ್ಕೆ ನೀಡಲು ಸೋನಿಯಾ ಒಲವು ತೋರಿದ್ದು, ಈ ಬಗ್ಗೆಯೂ ಸಿದ್ದರಾಮಯ್ಯ ಅವರಿಂದ ಅಭಿಪ್ರಾಯ ಕೇಳಿದ್ದಾರೆ ಎಂದು ಗೊತ್ತಾಗಿದೆ.

2019ರ ಲೋಕಸಭೆ ಚುನಾವಣೆ ನಂತರ ಖಾಲಿ ಇರುವ ರಾಷ್ಟ್ರೀಯ ಅಧ್ಯಕ್ಷ ಸ್ಥಾನವೂ ಸೇರಿದಂತೆ ಇತರ ಪದಾಧಿಕಾರಿಗಳ ಆಯ್ಕೆಗೆ ಕ್ರಮ ಕೈಗೊಳ್ಳುವ ಮೂಲಕ, ಪಕ್ಷವನ್ನು ಬಲಪಡಿಸಲು ಆಲೋಚಿಸಿದ್ದಾರೆ.

‘ರಾಷ್ಟ್ರ ರಾಜಕಾರಣದ ಪ್ರಶ್ನೆಯೇ ಇಲ್ಲ’

‘ನಾನು ರಾಷ್ಟ್ರ ರಾಜಕಾರಣ ಪ್ರವೇಶಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ವರಿಷ್ಠರೊಂದಿಗೆ ಚರ್ಚೆಯನ್ನೂ ನಡೆಸಿಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವೆ. ಈ ಬಗ್ಗೆ ಸಂಶಯ ಬೇಡ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.

‘ರಾಹುಲ್‌ ಗಾಂಧಿ ಅವರು ಈ ಹಿಂದೆಯೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಹ್ವಾನ ನೀಡಿದ್ದರು. ಅದನ್ನು ನಿರಾಕರಿಸಿದ್ದಲ್ಲದೆ, ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೆ. ಈಗ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಬರುವ ವಿಚಾರ ಮಾಡುವುದಿಲ್ಲ’ ಎಂದು ಅವರು ಹೇಳಿದರು.

ಮಾನೆ, ಮನಗೂಳಿಗೆ ಟಿಕೆಟ್‌

ಹಾನಗಲ್‌ ನಿಂದ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂದಗಿಯಿಂದ ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಲಾಗಿದೆ. ಅಶೋಕ ಮನಗೂಳಿ ಅವರನ್ನು ಸಿದ್ದರಾಮಯ್ಯನವರೇ ಪಕ್ಷಕ್ಕೆ ಕರೆತಂದಿದ್ದರು. ಹಾನಗಲ್ ಕ್ಷೇತ್ರದಲ್ಲಿ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು,ಮನೋಹರ ತಹಶೀಲ್ದಾರ್‌ಗೆ ಟಿಕೆಟ್ ಕೊಡಿಸುವಲ್ಲಿ ಆಸ್ಥೆ ತೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT