ಸೋಮವಾರ, ಅಕ್ಟೋಬರ್ 18, 2021
26 °C

ಗುಜರಾತ್‌: ₹21 ಸಾವಿರ ಕೋಟಿ ಮೌಲ್ಯದ ಹೆರಾಯಿನ್‌ ವಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಗುಜರಾತ್‌ನ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ರೆವಿನ್ಯೂ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) 3,000 ಕೆ.ಜಿಯಷ್ಟು ಹೆರಾಯಿನ್ ಮಾದಕವಸ್ತುವನ್ನು ವಶಪಡಿಸಿಕೊಂಡಿದೆ. ದೇಶದಲ್ಲಿ ಈವರೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕವಸ್ತು ವಶಕ್ಕೆ ಪಡೆದದ್ದು ಇದೇ ಮೊದಲು. ವಶಪಡಿಸಿಕೊಳ್ಳಲಾದ ಹೆರಾಯಿನ್‌ನ ಅಂತರರಾಷ್ಟ್ರೀಯ ಮಾರುಕಟ್ಟೆಯ ಮೌಲ್ಯ ₹21,000 ಕೋಟಿಯಷ್ಟು ಎಂದು ಡಿಆರ್‌ಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್‌ 11ರಂದು ಮುಂದ್ರಾ ಬಂದರಿಗೆ 40 ಅಡಿಗಳ ಎರಡು ಕಂಟೇನರ್‌ಗಳಲ್ಲಿ ಹೆರಾಯಿನ್‌ ಅನ್ನು ತರಲಾಗಿದೆ. ಬಿಲ್‌ನಲ್ಲಿ ಇದನ್ನು ಟಾಲ್ಕ್‌ಪೌಡರ್‌ ಎಂದು ನಮೂದು ಮಾಡಲಾಗಿದೆ. ಒಂದು ಕಂಟೇನರ್‌ನಲ್ಲಿ 1999.57 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ. ಮತ್ತೊಂದು ಕಂಟೇನರ್‌ನಲ್ಲಿ 988.64 ಕೆ.ಜಿಯಷ್ಟು ಹೆರಾಯಿನ್ ತರಲಾಗಿತ್ತು.

ಇವುಗಳ ಜತೆ 2,000 ಕೆ.ಜಿಯಷ್ಟು ಟಾಲ್ಕ್‌ ಪೌಡರ್ ಸಹ ತರಲಾಗಿತ್ತು. ಅದನ್ನೂ ವಶಕ್ಕೆ ಪಡೆಯಲಾಗಿದೆ. ಇವೆಲ್ಲವುಗಳ ಮಹಜರಿಗೆ ಒಂದು ವಾರಕ್ಕೂ ಹೆಚ್ಚಿನ ಸಮಯ ಬೇಕಾಯಿತು. ಬಿಲ್‌ನಲ್ಲಿ ಇವುಗಳ ಮೌಲ್ಯ ₹7.50 ಕೋಟಿ ಎಂದು ನಮೂದಿಸಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ವಿಚಾರ ಎಂದು ಅವರು ಹೇಳಿದ್ದಾರೆ.

ಚೆನ್ನೈನ ಎಂ.ಸುಧಾರ್ಕರ್ ಮತ್ತು ಆತನ ಪತ್ನಿ ವೈಶಾಲಿ ಒಡೆತನದ, ಆಶಿ ಟ್ರೇಡಿಂಗ್ ಕಂಪನಿಯ ಹೆಸರಿನಲ್ಲಿ ಈ ಕಂಟೇನರ್‌ ತರಲಾಗಿದೆ. ದಂಪತಿಯು ಈ ಮೊದಲು ಬೇರೆ ಬೇರೆ ವ್ಯವಹಾರ ಮಾಡಿ, ನಷ್ಟ ಅನುಭವಿಸಿದ್ದರು. ಆನಂತರ ಮಾದಕ ವಸ್ತು ಕಳ್ಳಸಾಗಣೆ ಆರಂಭಿಸಿದ್ದರು. ಅವರು ಮೊದಲ ಬಾರಿ ಜುಲೈನಲ್ಲಿ ಭಾರಿ ಪ್ರಮಾಣದಲ್ಲಿ ಮಾದಕವಸ್ತು ತರಿಸಿಕೊಂಡಿದ್ದರೂ, ಅದು ಪತ್ತೆಯಾಗಿಲ್ಲ. ಈಗ ದಂಪತಿಯನ್ನು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಸೆ.30ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಅಧಿಕಾರಿ ಹೇಳಿದ್ದಾರೆ. ಅಫ್ಗಾನಿಸ್ತಾನದ ಕಂದಹಾರ್‌ನಲ್ಲಿರುವ ಹಸನ್ ಹುಸೇನ್ ಲಿಮಿಟೆಡ್‌ ಈ ಕಂಟೇನರ್‌ಗಳನ್ನು ಕಳುಹಿಸಿದೆ. ಇರಾನ್‌ನ ಬಂದಾರ್ ಅಬ್ಬಾಸ್ ಬಂದರಿನಿಂದ ಈ ಕಂಟೇನರ್‌ಗಳನ್ನು ತರಲಾಗಿದೆ. ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಭದ್ರತಾ ಸಂಸ್ಥೆಗಳ ಕಳವಳ
ಭಾರತಕ್ಕೆ ಈಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಈಚಿನ ವರ್ಷಗಳಲ್ಲಿ ಹಡಗುಗಳ ಮೂಲಕ ಮಾದಕ ವಸ್ತು ಕಳ್ಳಸಾಗಣೆ ಮಾಡುವುದು ಹೆಚ್ಚಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಬೆಳವಣಿಗೆ ಎಂದು ಭದ್ರತಾ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. 

2019ರ ಮೇನಲ್ಲಿ ಮುಂದ್ರಾ ಬಂದರಿನಲ್ಲಿ ಡಿಆರ್‌ಐ ಸಿಬ್ಬಂದಿಯು, 217 ಕೆ.ಜಿ.ಯಷ್ಟು ಹೆರಾಯಿನ್ ವಶಕ್ಕೆ ಪಡೆದಿದ್ದರು. ಸಣ್ಣ ಹಡಗಿನಲ್ಲಿ ಅದನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಆರು ಜನರನ್ನು ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಅದೇ ಬಂದರಿನಲ್ಲಿ 650 ಕೆ.ಜಿ. ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆಗ 16 ಜನ ಇರಾನಿಯನ್ನರು, ಪಾಕಿಸ್ತಾನದ ಎಂಟು ಮಂದಿ ಮತ್ತು ಅಫ್ಗಾನಿಸ್ತಾನದ ಇಬ್ಬರನ್ನು ಬಂಧಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು