ಸೋಮವಾರ, ಜನವರಿ 17, 2022
19 °C

ಕೋವಿಡ್‌: ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಶೇ 5ರಿಂದ 10ರಷ್ಟಿದೆ ಎಂದ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಸೋಂಕು ಪ್ರಕರಣದ ತೀವ್ರ ಏರಿಕೆ ಇದ್ದರೂ ಪ್ರಸ್ತುತ, ದೇಶದಲ್ಲಿ ಶೇ 5 ರಿಂದ 10ರಷ್ಟು ಪ್ರಕರಣಗಳಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಾಗುವುದರ ಅಗತ್ಯವಿದೆ. ಆದರೆ, ಈ ಪರಿಸ್ಥಿತಿಯು ತೀವ್ರಗತಿಯಲ್ಲಿ ಬದಲಾಗಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಹೋಂ ಐಸೋಲೇಷನ್‌ ಮತ್ತು ಆಸ್ಪತ್ರೆಗಳಲ್ಲಿ ಇರುವ ಕೋವಿಡ್‌ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಕೋವಿಡ್‌ ಎರಡನೇ ಅಲೆಯಲ್ಲಿ ಶೇ 20 ರಿಂದ 23ರಷ್ಟು ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಲವೊಂದು ರಾಜ್ಯಗಳಲ್ಲಿ ಬೃಹತ್‌ ಆರೋಗ್ಯ ಸೌಲಭ್ಯ ಸಜ್ಜುಗೊಳಿಸಲಾಗಿದೆ. ಮೂಲಸೌಲಭ್ಯ, ಮಾನವ ಸಂಪನ್ಮೂಲದ ಲಭ್ಯತೆ ಎರಡಕ್ಕೂ ಮಿತಿಯಿದೆ. ಹೀಗಾಗಿ, ಸಮರ್ಪಕ ನಿರ್ವಹಣೆಯ ಮೂಲಕ ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಲಹೆ ಮಾಡಿದ್ದಾರೆ.

ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು ಎಷ್ಟು ಸಕ್ರಿಯ ಪ್ರಕರಣಗಳು ಇವೆ, ಎಷ್ಟು ಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ, ಆಮ್ಲಜನಕ ಸಹಿತ ಹಾಸಿಗೆಗಳು, ಐಸಿಯು ಹಾಸಿಗೆಗಳು, ವೆಂಟಿಲೇಟರ್‌ ನೆರವಿನಲ್ಲಿ ಇರುವ ರೋಗಿಗಳ ಪರಿಸ್ಥಿತಿ ಎಲ್ಲವನ್ನೂ ಗಮನಿಸಬೇಕು. ಇದರ ಆಧಾರದಲ್ಲಿ ಲಭ್ಯವಿರುವ ಸಿಬ್ಬಂದಿಯನ್ನು ಸೇವೆಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

ದರ ನ್ಯಾಯಯುತವಾಗಿರಲಿ: ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ವಿಧಿಸುವ ದರವು ನ್ಯಾಯಯುತವಾಗಿದೆ ಎಂದು ನೋಡಿಕೊಳ್ಳಬೇಕು. ಹೆಚ್ಚು ವಿಧಿಸಿದ್ದಲ್ಲಿ ಗಮನಿಸಿ, ಕ್ರಮ ಜರುಗಿಸುವ ವ್ಯವಸ್ಥೆಯೂ ಇರಬೇಕು ಎಂದು ಭೂಷಣ್‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿವೃತ್ತ ವೈದ್ಯರು, ಎಂಬಿಬಿಎಸ್‌ ವಿದ್ಯಾರ್ಥಿಗಳ ನೆರವನ್ನು ಟೆಲಿಸಂಪರ್ಕ ಸೇವೆಗಾಗಿ ಬಳಸಿಕೊಳ್ಳಬಹುದು. ಸಮುದಾಯ ಕಾರ್ಯಕರ್ತರಿಗೆ ಕೌಶಲ ತರಬೇತಿಯನ್ನು ನೀಡಬಹುದು ಎಂದು ತಿಳಿಸಿದ್ದಾರೆ.

ಎಲ್ಲ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಇ–ಸಂಜೀವಿನಿ ಟೆಲಿಸಂಪರ್ಕ ಕೇಂದ್ರಗಳಾಗಿ ಬಳಸಬೇಕು. ಇದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಈಗಾಗಲೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು