ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧನೌಕೆ ಮುಂದಿನ ವರ್ಷ ಲೋಕಾರ್ಪಣೆ: ರಕ್ಷಣಾ ಸಚಿವ

Last Updated 25 ಜೂನ್ 2021, 8:39 IST
ಅಕ್ಷರ ಗಾತ್ರ

ಕೊಚ್ಚಿ: ಭಾರತದ ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧ ನೌಕೆ (ಐಎಸಿ) ಮುಂದಿನ ವರ್ಷ ಲೋಕಾರ್ಪಣೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.

ಐಎಸಿಯ ಯುದ್ಧ ಸಾಮರ್ಥ್ಯ, ತಲುಪುವಿಕೆ ಸೇರಿದಂತೆ ಅದರ ವಿವಿಧ ಆಯಾಮಗಳು ದೇಶದ ರಕ್ಷಣೆಯಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೊಚ್ಚಿನ್‌ ಬಂದರಿನ ಎರ್ನಾಕುಲಂನ ಹಡಗುಕಟ್ಟೆಯಲ್ಲಿ ನೌಕೆಯ ನಿರ್ಮಾಣದ ಪ್ರಗತಿಯನ್ನು ರಕ್ಷಣಾ ಸಚಿವರು ಶುಕ್ರವಾರ ಪರಿಶೀಲಿಸಿದ ಬಳಿಕ ಈ ಹೇಳಿಕೆ ನೀಡಿದ್ದು, ‘ಇದು ಭಾರತದ ಹೆಮ್ಮೆಯಾಗಿದ್ದು, ಆತ್ಮನಿರ್ಭರ ಭಾರತದ ಅತ್ಯುತ್ತಮ ನಿದರ್ಶನವಾಗಿದೆ’ ಎಂದು ಬಣ್ಣಿಸಿದ್ದಾರೆ.

‘ಎನ್‌ಡಿಎ ಸರ್ಕಾರವೇ ಅನುಮೋದಿಸಿದ ಈ ಯೋಜನೆಯು ಕೋವಿಡ್‌ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಮುಂದಿನ ವರ್ಷ ಈ ಯುದ್ಧ ನೌಕೆಯನ್ನು ಲೋಕಾರ್ಪಣೆಗೊಳಿಸಿ, ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಇದು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ಗೌರವವನ್ನು ಹೆಚ್ಚಿಸಲಿದೆ’ ಎಂದು ಸಚಿವರು ತಿಳಿಸಿದ್ದಾರೆ.

‘ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧ ನೌಕೆಯ ನಿರ್ಮಾಣ ಕಾರ್ಯಗಳನ್ನು ಖುದ್ದಾಗಿ ಪರಿಶೀಲಿಸಿದ್ದು ಸಂತಸ ತರಿಸಿದೆ’ ಎಂದಿರುವ ಅವರು, ‘ಈ ಯುದ್ಧ ನೌಕೆಯ ಬಹುಮುಖ ಸಾಮರ್ಥ್ಯ ಹೊಂದಿದ್ದು, ಕಡಲ ಕ್ಷೇತ್ರದಲ್ಲಿ ಭಾರತದ ಹಿತಾಸಕ್ತಿಗಳನ್ನು ಭದ್ರಪಡಿಸಿಕೊಳ್ಳಲು ನೆರವಾಗುತ್ತದೆ’ ಎಂದಿದ್ದಾರೆ.

ಭವಿಷ್ಯದಲ್ಲಿ ಭಾರತೀಯ ನೌಕಾಪಡೆಯ ಅತಿದೊಡ್ಡ ನೌಕಾ ನೆಲೆ ಆಗಲಿರುವ ಕಾರವಾರದ ‘ಪ್ರಾಜೆಕ್ಟ್ ಸೀಬರ್ಡ್’ ಅನ್ನು ರಕ್ಷಣಾ ಸಚಿವರು ಗುರುವಾರ ಪರಿಶೀಲಿಸಿದ್ದರು. ಇದು ಹಿಂದೂ ಮಹಾಸಾಗರ ಮತ್ತು ಅದರಾಚಿಗಿನ ಪ್ರದೇಶಗಳಲ್ಲಿ ನೌಕಾಪಡೆಯ ಕಾರ್ಯಾಚರಣೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಎರಡೂ ಯೋಜನೆಗಳು ನೌಕಾಪಡೆಯನ್ನು ಇನ್ನಷ್ಟು ಬಲಿಷ್ಠ ಪಡಿಸಲು ದೇಶ ಹೆಚ್ಚು ಒತ್ತು ನೀಡುತ್ತಿದೆ ಎಂಬುದರ ನಿದರ್ಶನವಾಗಿದೆ ಎಂದು ಅವರು ಹೇಳಿದ್ದಾರೆ.

ಯಾವುದೇ ಸವಾಲನ್ನು ಎದುರಿಸಲು ಭಾರತೀಯ ನೌಕಾಪಡೆ ಸನ್ನದ್ಧವಾಗಿದ್ದು, ಅದಕ್ಕೆ ಪೂರಕವಾಗಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT