ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದ ಇಫ್ಕೊ; ಬಾಟಲಿಗೆ ₹ 240

Last Updated 31 ಮೇ 2021, 10:57 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಸಂಸ್ಥೆಯಾಗಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯು (ಇಫ್ಕೊ) ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದೆ.

ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ 'ನ್ಯಾನೊ ಯೂರಿಯಾ' ದ್ರವ ರೂಪದಲ್ಲಿದ್ದು, 500 ಮಿಲಿ ಲೀಟರ್‌ ಬಾಟಲಿಗೆ ₹ 240 ಬೆಲೆ ನಿಗದಿಯಾಗಿದೆ. ಸಾಮಾನ್ಯ ಬಳಕೆಯಲ್ಲಿರುವ ಯೂರಿಯಾ ಚೀಲದ ಬೆಲೆಗಿಂತಲೂ ಶೇ 10ರಷ್ಟು ಕಡಿಮೆ ದರದಲ್ಲಿ ನ್ಯಾನೊ ಯೂರಿಯಾ ಸಿಗಲಿದೆ.

ಇಫ್ಕೊದ ದ್ರವ ರೂಪದ ಯೂರಿಯಾ ತಯಾರಿಕೆಯು ಜೂನ್‌ನಿಂದ ಆರಂಭವಾಗಲಿದೆ. ಇಫ್ಕೊ ಇ–ಕಾಮರ್ಸ್‌ ವೇದಿಕೆ (www.iffcobazar.in) ಸೇರಿದಂತೆ ಸಹಕಾರ ಮಾರಾಟ ಮತ್ತು ಮಾರುಕಟ್ಟೆಗಳ ಮೂಲಕ ರೈತರಿಗೆ ನ್ಯಾನೊ ಯೂರಿಯಾ ಖರೀದಿಗೆ ಸಿಗಲಿದೆ.

ಇಫ್ಕೋದ 50ನೇ ವಾರ್ಷಿಕ ಸಭೆಯಲ್ಲಿ ಸೋಮವಾರ ನ್ಯಾನೊ ಯೂರಿಯಾ ಪರಿಚಯಿಸಲಾಯಿತು.

'ಸಸ್ಯಗಳಿಗೆ ಅಗತ್ಯ ಪೋಷಕಾಂಶಗಳನ್ನು ಪೂರೈಸುವ ನ್ಯಾನೊ ಯೂರಿಯಾ, ಅತಿಯಾದ ಯೂರಿಯಾ ಬಳಕೆಯನ್ನು ತಪ್ಪಿಸುತ್ತದೆ ಹಾಗೂ ಆರೋಗ್ಯಪೂರ್ಣ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. 500 ಮಿಲಿ ಲೀಟರ್‌ ಬಾಟಲಿಯ ನ್ಯಾನೊ ಯೂರಿಯಾ, ಕನಿಷ್ಠ ಇಡೀ ಒಂದು ಚೀಲದ ಯೂರಿಯಾ ಬದಲಾಗಿ ಬಳಸಬಹುದಾಗಿದೆ. ಇದರಿಂದ ರೈತರಿಗೆ ಖರ್ಚು ಕಡಿಮೆಯಾಗಲಿದೆ ಹಾಗೂ ಹೆಚ್ಚಿನ ಆದಾಯ ಗಳಿಕೆಗೆ ಸಹಕಾರಿಯಾಗಲಿದೆ' ಎಂದು ಇಫ್ಕೊ ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯಾನೊ ಯೂರಿಯಾದಿಂದ ಸದ್ಯ ಅಧಿಕ ಬಳಕೆಯಲ್ಲಿರುವ ಯೂರಿಯಾ ಪ್ರಮಾಣವನ್ನು ಶೇ 50ರಷ್ಟು ತಗ್ಗಿಸಬಹುದಾಗಿದೆ. 500 ಮಿಲಿ ಲೀಟರ್‌ನ ಒಂದು ಬಾಟಲಿ ನ್ಯಾನೊ ಯೂರಿಯಾ 40,000 ಪಿಪಿಎಂನಷ್ಟು ಸಾರಜನಕ ಅಂಶ ಒಳಗೊಂಡಿರುತ್ತದೆ. ಒಂದು ಚೀಲದಷ್ಟು ಯೂರಿಯಾದಿಂದ ಸಿಗಬಹುದಾದ ಸಾರಜನಕ ಪೋಷಕಾಂಶಕ್ಕೆ ಸಮನಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಇಫ್ಕೋ ಪ್ರಕಾರ, ಸರ್ಕಾರದ ರಸಗೊಬ್ಬರ ನಿಯಂತ್ರಣ ಆದೇಶದಲ್ಲಿ ನ್ಯಾನೊ ಯೂರಿಯಾ ಸೇರ್ಪಡೆಯಾಗಿದೆ. ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ (ನಾರ್ಸ್‌), 20 ಐಸಿಎಆರ್‌ ಸಂಶೋಧನಾ ಸಂಸ್ಥೆಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ 43 ಬೆಳೆಗಳಿಗೆ ನ್ಯಾನೊ ಯೂರಿಯಾ ಪ್ರಯೋಗಿಸಲಾಗಿದೆ.

ಭಾರತದಾದ್ಯಂತ 94ಕ್ಕೂ ಹೆಚ್ಚು ಬೆಳೆಗಳ ಮೇಲೆ ಸುಮಾರು 11,000 ರೈತರ ಭೂಮಿಗಳಲ್ಲಿ ನ್ಯಾನೊ ಯೂರಿಯಾ ಬಳಕೆ ಮಾಡಿ ಪರೀಕ್ಷಿಸಲಾಗಿದ್ದು, ಇಳುವರಿಯಲ್ಲಿ ಸರಾಸರಿ ಶೇ 8ರಷ್ಟು ಹೆಚ್ಚಳವಾಗಿರುವುದು ಫಲಿತಾಂಶಗಳಿಂದ ತಿಳಿದು ಬಂದಿದೆ. ಗುಜರಾತ್‌ನ ಕಲೋಲ್‌ನಲ್ಲಿರುವ ಇಫ್ಕೊದ ನ್ಯಾನೊ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ (ಎನ್‌ಬಿಆರ್‌ಸಿ) ದೇಶೀಯವಾಗಿ ನ್ಯಾನೊ ಯೂರಿಯಾ ಅಭಿವೃದ್ಧಿ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT