ಇಂದೋರ್(ಮಧ್ಯಪ್ರದೇಶ): ವಿದ್ಯಾರ್ಥಿ ಹಚ್ಚಿದ ಬೆಂಕಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಂದೋರ್‌ನ ಖಾಸಗಿ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್ ಶನಿವಾರ ನಿಧನರಾಗಿದ್ದಾರೆ.
ಫೆಬ್ರುವರಿ 20ರಂದು ನಡೆದಿದ್ದ ಘಟನೆಯಲ್ಲಿ ಶೇಕಡ 80ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ ವಿಮುಕ್ತಿ ಶರ್ಮಾ ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ನಸುಕಿನ 4 ಗಂಟೆಯಲ್ಲಿ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
54 ವರ್ಷದ ವಿಮುಕ್ತಿ ಶರ್ಮಾ ಅವರು ಮನೆಗೆ ತೆರಳುತ್ತಿದ್ದ ವೇಳೆ ಬಿಎಂ ಫಾರ್ಮಸಿ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿತ್ತು. ಅಂಕ ಪಟ್ಟಿ ನೀಡುವಲ್ಲಿ ವಿಳಂಬವಾಗಿದ್ದ ವಿಮುಕ್ತಿ ಶರ್ಮಾ ಅವರೊಂದಿಗೆ ವಾಗ್ವಾದ ನಡೆಸಿದ್ದ ಆರೋಪಿ, ಮಾಜಿ ವಿದ್ಯಾರ್ಥಿಯೂ ಆದ ಅಶುತೋಷ್ ಶ್ರೀವಾಸ್ತವ (24) ನಂತರ ಪೆಟ್ರೋಲ್ ಸುರಿದು ಸಿಗರೇಟ್ ಲೈಟರ್‌ನಿಂದ ಬೆಂಕಿ ಹಚ್ಚಿದ್ದ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀವಾಸ್ತವನನ್ನು ಬಂಧಿಸಲಾಗಿತ್ತು.
‘ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರಿನ್ಸಿಪಾಲ್ ವಿಮುಕ್ತಿ ಶರ್ಮಾ ಅವರು ಕೊನೆಯುಸಿರೆಳಿದ್ದಾರೆ. ಅವರಿಗೆ ಬೆಂಕಿ ಹಚ್ಚಿದ ವಿದ್ಯಾರ್ಥಿಯು 7 ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣನಾಗಿದ್ದ ಎಂಬುದು ಗೊತ್ತಾಗಿದೆ. ನಾವು ಈಗಾಗಲೇ ಆತನನ್ನು ಬಂಧಿಸಿದ್ದೇವೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ (ಇಂದೋರ್ ಗ್ರಾಮಾಂತರ) ಭಗವತ್ ಸಿಂಗ್ ವಿರ್ಡೆ ಹೇಳಿದ್ದಾರೆ.
‘ಶ್ರೀವಾಸ್ತವ ವಿರುದ್ಧ ಫಾರ್ಮಸಿ ಕಾಲೇಜು ಅಧಿಕಾರಿಗಳು, ಪ್ರಿನ್ಸಿಪಾಲ್ ವಿಮುಕ್ತಿ ಶರ್ಮಾ ಮತ್ತು ಸಿಬ್ಬಂದಿ ಎರಡು ಮೂರು ದೂರುಗಳನ್ನು ನೀಡಿದ್ದರು ಎಂಬುದು ಗೊತ್ತಾಗಿದೆ’ ಎಂದು ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.