ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ: ದ್ವಿಪಕ್ಷೀಯ ಮಾತುಕತೆ ಸಲಹೆ ನೀಡಿದ ಮುಫ್ತಿ

Last Updated 14 ನವೆಂಬರ್ 2020, 10:17 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಸೇನೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಭಾರತದ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಎರಡೂ ಕಡೆ ಸಾವು–ನೋವು ವರದಿಯಾಗಿವೆ. ಈ ಬಗ್ಗೆ ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಹಾಗೂ ಜಮ್ಮ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಗಡಿಯಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ನಾಯಕರು ಮಾತುಕತೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

‘ಗಡಿ ನಿಯಂತ್ರಣ ರೇಖೆ ಬಳಿಯ ಎರಡೂ ಕಡೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಬೇಸರದ ಸಂಗತಿ. ಭಾರತ ಮತ್ತು ಪಾಕಿಸ್ತಾನದ ನಾಯಕರು ತಮ್ಮ ರಾಜಕೀಯ ಪ್ರಚೋದನೆಯನ್ನು ಮೀರಿ ಮಾತುಕತೆ ಆರಂಭಿಸಿದರೆ ಮಾತ್ರವೇ, ವಾಜಪೇಯಿ ಮತ್ತು ಮುಷರಫ್‌ ಅವರು ಒಪ್ಪಿ ಜಾರಿಗೊಳಿಸಿದ್ದ ಕದನ ವಿರಾಮವನ್ನು ಪುನಃಸ್ಥಾಪಿಸಲು ಸಾಧ್ಯ’ ಎಂದು ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ದಾಳಿಯಿಂದಾಗಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಆರು ಮಂದಿ ನಾಗರಿಕರೂ ಮೃತಪಟ್ಟಿದ್ದಾರೆ. ಇದರ ವಿರುದ್ಧ ಭಾರತ ನಡೆಸಿದ ಪ್ರತಿದಾಳಿ ವೇಳೆ ಪಾಕಿಸ್ತಾನದ ಎಂಟು ಸೈನಿಕರು ಪ್ರಾಣಬಿಟ್ಟಿದ್ದು, ಇದರಲ್ಲಿ ಸೇನೆಯ ವಿಶೇಷ ಸೇವಾ ಪಡೆಯ ಇಬ್ಬರು ಅಥವಾ ಮೂವರು ಕಮಾಂಡೊಗಳು ಸೇರಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲದೆ, 10–12 ಸೈನಿಕರು ಗಾಯಗೊಂಡಿದ್ದಾರೆ.

ಪಾಕ್‌ ಸೇನೆಯ ಹಲವು ಬಂಕರ್‌ಗಳು, ಇಂಧನ ಸಂಗ್ರಹಾಗಾರಗಳು ನಾಶವಾಗಿವೆ ಎಂದು ವರದಿಯಾಗಿದೆ.

ಭಾರತ–ಚೀನಾ ಗಡಿಯಲ್ಲಿಯೂ ವಿವಾದ ಮುಂದುವರಿದಿದೆ. ಲಡಾಖ್‌ ಬಳಿಯಿರುವ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಭಾರತ ಮತ್ತು ಚೀನಾ ಸೈನಿಕರು ನಿಯೋಜನೆಗೊಂಡಿದ್ದಾರೆ. ಸೇನಾ ಪಡೆಗಳನ್ನು ಹಿಂಪಡೆಯುವ ವಿಚಾರವಾಗಿ ಎರಡೂ ದೇಶಗಳು ಚರ್ಚೆ ನಡೆಸುತ್ತಿವೆ. ಆದರೂ ಯಾವುದೇ ಸುಧಾರಣೆಗಳು ಕಂಡು ಬಂದಿಲ್ಲ.

ಈ ವಿಚಾರವನ್ನು ಪ್ರಸ್ತಾಪಿಸಿ ಮಂಗಳವಾರ ಮಾತನಾಡಿದ್ದ ಮುಷ್ತಿ, ‘ನೀವು ಚೀನಾದೊಂದಿಗೆ ಮಾತುಕತೆ ನಡೆಸಲು ಸಾಧ್ಯ ಎಂದ ಮೇಲೆ, ಪಾಕ್‌ ಜೊತೆಗೆ ಮಾತನಾಡಲು ಏಕೆ ಸಾಧ್ಯವಿಲ್ಲ? ನಮ್ಮ ಭೂಮಿಯನ್ನು ನಮಗೆ ಮರಳಿಸಿ ಎಂದು ಚೀನಾಗೆ ಮನವಿ ಮಾಡುತ್ತಿದ್ದೇವೆ. ಆದರೆ, ಅವರು ತಮ್ಮ ನಿಲುವಿನಿಂದ ಕದಲುತ್ತಿಲ್ಲ. ನಾವು ಪಾಕಿಸ್ತಾನದೊಂದಿಗೆ ಏಕೆ ಮಾತನಾಡಲು ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದರು.

ಮುಂದುವರಿದು, ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಕಣಿವೆಯಲ್ಲಿ ಶಾಂತಿ ಪುನಃಸ್ಥಾಪನೆಗೆ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT