ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಗಳಲ್ಲಿ ಕೃತಕ ಅಂಗ ತೆಗೆದು ತೋರಿಸಲು ಹೇಳುವುದು ಅಮಾನವೀಯ: ಸುಪ್ರೀಂ

Last Updated 3 ಡಿಸೆಂಬರ್ 2021, 16:37 IST
ಅಕ್ಷರ ಗಾತ್ರ

ನವದೆಹಲಿ: ವಿಮಾನಯಾನದ ವೇಳೆ ಭದ್ರತಾ ತಪಾಸಣೆ ನಡೆಸುವಾಗ ಅಂಗವಿಕಲರಿಗೆ ಅವರ ಕೃತಕ ಅಂಗ ತೆಗೆದು ತೋರಿಸುವಂತೆ ಕೇಳಬಾರದು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ (ಡಿಜಿಸಿಎ) ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಕೃತಕ ಅಂಗ ತೆಗೆದು ತೋರಿಸುವಂತೆ ಕೇಳುವುದು ಅಮಾನವೀಯ ಎಂದು ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ ಮತ್ತು ರಾಮ ಸುಬ್ರಮಣಿಯನ್‌ ಅವರಿದ್ದ ಪೀಠ ಹೇಳಿದೆ. ಅಲ್ಲದೇ, ವಿಮಾನಯಾನ ಅಥವಾ ಭದ್ರತಾ ತಪಾಸಣೆ ವೇಳೆ ಅಂಗವಿಕಲ ವ್ಯಕ್ತಿಯನ್ನು ಎತ್ತುವುದೂ ಅಮಾನವೀಯ. ವ್ಯಕ್ತಿಯ ಅನುಮತಿ ಇಲ್ಲದೇ ಅವರನ್ನು ಎತ್ತಬಾರದು ಎಂದು ಹೇಳಿದೆ.

ಅಂಗವಿಕಲ ವ್ಯಕ್ತಿಯನ್ನು ಭದ್ರತಾ ತಪಾಸಣೆಗೆ ಒಳಪಡಿಸಬೇಕಾದ ಸಂದರ್ಭದಲ್ಲಿ ಅವರ ಕೃತಕಕೈ, ಕಾಲು ತೆಗೆಯಲು ಸೂಚಿಸದೇ ಆದಷ್ಟು ಸಂಪೂರ್ಣ ದೇಹವನ್ನು ಸ್ಕಾನಿಂಗ್‌ಗೆ ಒಳಪಡಿಸಬೇಕು ಎಂದು ಕರಡು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ ಎಂದು ಪೀಠ ಹೇಳಿದೆ.

ಸೆರೆಬ್ರಲ್‌ ಪಾಲ್ಸಿ(ದೇಹದ ಸ್ವಾಧೀನ ಇಲ್ಲದಿರುವಿಕೆ) ಕಾಯಿಲೆ ಹೊಂದಿರುವ ಜೀಜಾ ಘೋಷ್‌ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಕೋರ್ಟ್‌ ಈ ನಿರ್ದೇಶನ ನೀಡಿದೆ. 2012ರಲ್ಲಿ ಅವರು ಕೋಲ್ಕತ್ತದಿಂದ ಗೋವಾಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಸ್ಪೈಸ್‌ಜೆಟ್‌ನಿಂದ ಕೆಳಕ್ಕೆ ಇಳಿಸಲಾಗಿತ್ತು.

ನಾಗರಿಕ ವಿಮಾನಯಾನದ ಅಗತ್ಯ(ಸಿಎಆರ್‌) ಮಾರ್ಗಸೂಚಿಯನ್ನು 2021ರ ಜು.2ರಂದು ಪರಿಷ್ಕರಿಸಲಾಗಿದೆ. ‘ಅಂಗವಿಕಲ ಮತ್ತು ಚಲನೆಯಲ್ಲಿ ಸಮಸ್ಯೆ ಇರುವವರ ವಿಮಾನಯಾನ’ ಕುರಿತ ಕರಡು ಮಾರ್ಗಸೂಚಿಯನ್ನು ಸಾರ್ವಜನಿಕರ ವಿಚಾರ ವ್ಯಾಪ್ತಿಗೆ ಇರಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಅರ್ಜಿದಾರರಾದ ಜೀಜಾ ಘೋಷ್‌‍ಪರ ವಕೀಲರಾದ ಕೊಲಿನ್‌ ಗಾನ್ಸಾಲ್ವೆಸ್‌ಕರಡು ಮಾರ್ಗಸೂಚಿ ಕುರಿತು ಹಲವಾರು ಆಕ್ಷೇಪಗಳನ್ನು ಎತ್ತಿದ್ದರು. ಇದರಿಂದಾಗಿ, ಮಾರ್ಗಸೂಚಿ ಕುರಿತು ಸಲಹೆಗಳನ್ನು ಡಿಜಿಸಿಎಗೆ ನೀಡುವಂತೆ ಅರ್ಜಿದಾರರಿಗೆಸುಪ್ರೀಂ ಕೋರ್ಟ್‌ ಹೇಳಿದೆ. ಅದಕ್ಕಾಗಿ ಒಂದು ತಿಂಗಳ ಕಾಲಾವಕಾಶವನ್ನೂ ಅರ್ಜಿದಾರರಿಗೆ ಕೋರ್ಟ್‌ ನೀಡಿದೆ. ಅರ್ಜಿದಾರರು ಸೂಚಿಸುವ ಸಲಹೆಗಳನ್ನು ಡಿಜಿಸಿಎ ಸ್ವೀಕರಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT