ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ’ರಿಸ್ಯಾಟ್‌‘ ಅಭಿವೃದ್ಧಿಪಡಿಸಿದ್ದಕ್ಕೆ ಕೊಲೆ ಯತ್ನ: ತಪನ್‌ ಮಿಶ್ರಾ

ಚರ್ಚೆಗೆ ಗ್ರಾಸವಾದ ಇಸ್ರೊ ವಿಜ್ಞಾನಿ ಹೇಳಿಕೆ
Last Updated 6 ಜನವರಿ 2021, 13:48 IST
ಅಕ್ಷರ ಗಾತ್ರ

ಅಹಮದಾಬಾದ್‌: ‘ದೇಶೀಯ ತಂತ್ರಜ್ಞಾನ ಬಳಸಿ ರಾಡಾರ್‌ ಇಮೇಜಿಂಗ್‌ ಉಪಗ್ರಹಗಳನ್ನು (ರಿಸ್ಯಾಟ್‌) ಅಭಿವೃದ್ಧಿಪಡಿಸಿದ್ದಕ್ಕಾಗಿ ನನಗೆ ಆರ್ಸೆನಿಕ್‌ ಟ್ರೈ ಆಕ್ಸೈಡ್‌ ಎಂಬ ವಿಷಕಾರಿ ರಾಸಾಯನಿಕ ನೀಡಿ ಕೊಲ್ಲಲು ಯತ್ನಿಸಿರಬಹುದು’ ಎಂದು ಇಸ್ರೊ ವಿಜ್ಞಾನಿ ತಪನ್‌ ಮಿಶ್ರಾ ಬುಧವಾರ ಹೇಳಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಡಾರ್‌ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಕೆಲವು ದೇಶಗಳು ಭಾರತಕ್ಕೆ ಮಾರಾಟ ಮಾಡುತ್ತಿವೆ. ದೇಶೀಯವಾಗಿ ಈ ಸಾಧನಗಳನ್ನು ಅಭಿವೃದ್ಧಿಪಡಿಸಿದಾಗ, ತನ್ನ ಉತ್ಪನ್ನಗಳಿಗೆ ಬೇಡಿಕೆ ಕಳೆದುಕೊಳ್ಳುವ ಭೀತಿಯಿಂದ ಕೆಲವು ದೇಶಗಳು ಈ ಕೃತ್ಯ ಎಸಗಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.

‘ಭವಿಷ್ಯದಲ್ಲಿ ಇಂಥ ದುಷ್ಕೃತ್ಯಗಳು ನಡೆಯದಂತೆ ತಡೆಯಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ನನ್ನ ಕೊಲೆ ಯತ್ನದ ಘಟನೆಯನ್ನು ಬಹಿರಂಗಗೊಳಿಸಲು ನಿರ್ಧರಿಸಿದೆ’ ಎಂದೂ ಹೇಳಿದರು.

‘ನಿವೃತ್ತಿ ಹೊಂದಿದ ನಂತರ ಈ ವಿಷಯವನ್ಜು ನಾನು ಬಹಿರಂಗಪಡಿಸಬಹುದು ಎಂದು ನನ್ನ ಕೊಲೆಗೆ ಯತ್ನಿಸಿದವರು ಭಾವಿಸಿರಬೇಕು. ಅದಕ್ಕಾಗಿ ನಿವೃತ್ತಿಗೂ ಮೊದಲೇ ನನ್ನನ್ನು ಮುಗಿಸಲು ಅವರು ಸಂಚು ರೂಪಿಸಿರುವ ಸಾಧ್ಯತೆಯೂ ಇದೆ. ಒಂದು ವೇಳೆ ನನಗೆ ಏನಾದರೂ ತೊಂದರೆಯಾದರೆ ಮಾಧ್ಯಮಗಳು ದನಿ ಎತ್ತಬಹುದು’ ಎಂದೂ ಅಭಿಪ್ರಾಯಪಟ್ಟರು.

2017 ಮೇ 23ರಂದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಚಾರ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ, ಆರ್ಸೆನಿಕ್ ಟ್ರೈ ಆಕ್ಸೆೈಡ್‌ ನೀಡಿ ತಮ್ಮ ಕೊಲೆಗೆ ಯತ್ನಿಸಲಾಗಿತ್ತು ಎಂದು ಅವರು ಮಂಗಳವಾರ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು.

‘ರಾಡಾರ್‌ ಬಳಸಿ ಚಿತ್ರ ಸೆರೆ ಹಿಡಿಯುವುದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸುವ ಉಪಗ್ರಹಗಳ ನೆರವಿನಿಂದ ಭೂಮಿಯ ಚಿತ್ರಗಳನ್ನು ಹೆಚ್ಚು ನಿಖರವಾಗಿ ಸೆರೆ ಹಿಡಿಯಬಹುದು. ಹಗಲಿರಲಿ, ರಾತ್ರಿ ಇರಲಿ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಈ ರಿಸ್ಯಾಟ್‌ ನಮಗೆ ಕಳುಹಿಸಬಲ್ಲದು’ ಎಂದರು.

‘ಈ ರಾಡಾರ್‌ ವ್ಯವಸ್ಥೆಯನ್ನು ಬೇರೆ ದೇಶಗಳಿಂದ ಖರೀದಿ ಮಾಡಿದರೆ, ಇಲ್ಲಿ ತಯಾರಿಸಲು ತಗಲುವ ವೆಚ್ಚಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ನೀಡಬೇಕಾಗುತ್ತದೆ’ ಎಂದೂ ಮಿಶ್ರಾ ವಿವರಿಸಿದರು.

‘ಮೋಡ ಕವಿದ ಇಲ್ಲವೇ ದೂಳಿನಿಂದ ಕೂಡಿದ ವಾತಾವರಣ ಇದ್ದರೂ ರಿಸ್ಯಾಟ್‌ ಸಹಾಯದಿಂದ ಹೆಚ್ಚು ಸ್ಪಷ್ಟ ಇರುವ ಚಿತ್ರಗಳನ್ನು ಸೆರೆ ಹಿಡಿಯಬಹುದು. ಹೀಗಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ವ್ಯವಸ್ಥೆ ಹೆಚ್ಚು ಉಪಯುಕ್ತ. ಇಂಥ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಿದರೆ, ಬೇರೆ ದೇಶಗಳ ಕಣ್ಣು ಕೆಂಪಾಗುತ್ತದೆ. ಅವರ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ’ ಎಂದೂ ಹೇಳಿದರು.

ನಿಮ್ಮ ಕೊಲೆ ಯತ್ನಕ್ಕೆ ನಿಖರ ಕಾರಣ ಏನು ಎಂಬುದನ್ನು ಹೇಳಿ ಎಂಬ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಮಿಶ್ರಾ ಉತ್ತರಿಸಿದರು.

ಇಸ್ರೊದಲ್ಲಿ ಸದ್ಯ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಮಿಶ್ರಾ, ಈ ತಿಂಗಳಾಂತ್ಯಕ್ಕೆ ನಿವೃತ್ತಿ ಹೊಂದುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT