ಬುಧವಾರ, ಜನವರಿ 20, 2021
16 °C
ಕೇಂದ್ರದಿಂದ ಕೋವಿಡ್‌ ನಿಯಂತ್ರಣಕ್ಕೆ ಮಾರ್ಗಸೂಚಿ; ಡಿ. 1ರಿಂದ ಜಾರಿ

ರಾತ್ರಿ ಕರ್ಫ್ಯೂ: ರಾಜ್ಯಕ್ಕೆ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ ಪೀಡಿತ ವ್ಯಕ್ತಿಯೊಬ್ಬರ ಶೇ 80ರಷ್ಟು ಸಂಪರ್ಕಿತರನ್ನು 72 ಗಂಟೆಗಳಲ್ಲಿ ಪತ್ತೆಹಚ್ಚುವುದು ಸೇರಿದಂತೆ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಬುಧವಾರ ಪ್ರಕಟಿಸಿದೆ. ಹೆಚ್ಚು ಸೋಂಕಿತರು ಇರುವ ಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದು ಹಾಗೂ ನಗರ ಪ್ರದೇಶಗಳಲ್ಲಿ ಕಚೇರಿ ಸಮಯವನ್ನು ನಿಗದಿಪಡಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ.

ಧಾರ್ಮಿಕ, ಸಾಮಾಜಿಕ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು 200ರಿಂದ 100ಕ್ಕೆ ಇಳಿಸಲಾಗಿದೆ.

ಹಬ್ಬಗಳು ಹಾಗೂ ಚಳಿಗಾಲದ ಕಾರಣ ದೇಶದಲ್ಲಿ ಏರಿಕೆಯಾಗುತ್ತಿರುವ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ಗೃಹಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದ್ದು, ಇವು ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. 

ಕಂಟೈನ್‌ಮೆಂಟ್‌ ವಲಯದ ಹೊರಭಾಗದಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶವಿದೆ. ಕೆಲವು ಚಟುವಟಿಕೆಗಳಿಗೆ ಮಾತ್ರ ನಿರ್ಬಂಧ ಇರಲಿದೆ. ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶಕ್ಕೆ ಈಜುಕೊಳ ಬಳಸಬಹುದು. ವಾಣಿಜ್ಯ ಉದ್ದೇಶದ ವಸ್ತುಪ್ರದರ್ಶನಗಳಿಗೆ ಅನುಮತಿ ಇದೆ.

ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕೆಲಸದಲ್ಲಿ ಹಿನ್ನಡೆಯಾಗಿರುವ ಕಾರಣ, ಎಲ್ಲ ರಾಜ್ಯಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ. ಸಂಪರ್ಕಿತರ ಪತ್ತೆ, ಗುರುತಿಸುವಿಕೆ ಹಾಗೂ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಗಡುವು ನೀಡಿದೆ.

ರೋಗಿಗಳನ್ನು ಪ್ರತ್ಯೇಕಗೊಳಿಸುವಿಕೆ, ‘ಐಎಲ್‌ಐ’ ಹಾಗೂ ‘ಸಾರಿ’ ರೋಗಿಗಳಿಗೆ ವೈದ್ಯಕೀಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವಿಕೆ, ಕಂಟೈನ್‌ಮೆಂಟ್‌ ಪ್ರದೇಶಗಳ ವ್ಯಾಪ್ತಿ ಗುರುತಿಸುವಿಕೆ, ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಮನೆಮನೆ ಕಣ್ಗಾವಲು ಹಾಗೂ ತಪಾಸಣೆ
ಯನ್ನು ಕಟ್ಟುನಿಟ್ಟಾಗಿ ಮಾಡುವಂತೆ ತಿಳಿಸಿದೆ.

ಮಾರ್ಗಸೂಚಿಗಳು
ರಾಜ್ಯದೊಳಗೆ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ನಿರ್ಬಂಧ ಇಲ್ಲ
* ಸ್ಥಳೀಯ ಪರಿಸ್ಥಿತಿ ಆಧರಿಸಿ ರಾಜ್ಯಗಳು ರಾತ್ರಿ ಕರ್ಫ್ಯೂ ವಿಧಿಸಬಹುದು
* ಕೇಂದ್ರದೊಂದಿಗೆ ಸಮಾಲೋಚನೆ ನಡೆಸದೇ ಸ್ಥಳೀಯವಾಗಿ ಲಾಕ್‌ಡೌನ್ ವಿಧಿಸುವಂತಿಲ್ಲ
* ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಮೇಲೆ ಸರ್ಕಾರ ನಿಗಾ ವಹಿಸಬೇಕು
* ನಿಯಮ ಮೀರಿದವರಿಗೆ ದಂಡ ವಿಧಿಸುವಂತಹ ಕ್ರಮಗಳನ್ನು ರಾಜ್ಯ ಸರ್ಕಾರಗಳು ಜರುಗಿಸಬಹುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು