ಭಾನುವಾರ, ಜೂನ್ 26, 2022
22 °C

ನೋಡಿ: ಚೀನಾ ಸಮೀಪದ ಗಡಿಯಲ್ಲಿ ಐಟಿಬಿಪಿ ಮಹಿಳಾ ಪಡೆಗಳ ಗಸ್ತು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

 ಚೀನಾ ಸಮೀಪದ ಗಡಿಯಲ್ಲಿ ಐಟಿಬಿಪಿ ಮಹಿಳಾ ಪಡೆಗಳ ಗಸ್ತು

ನವದೆಹಲಿ: ಮಾರ್ಚ್‌ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. ತಾನು ನೆಚ್ಚಿಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿರುವ ಹಲವು ಸಾಧಕಿಯರ ಸ್ಫೂರ್ತಿಯ ಹೆಜ್ಜೆಗಳು ಈ ವಿಶೇಷ ದಿನದಂದು ಇಡೀ ಜಗತ್ತಿನ ಮುಂದೆ ತೆರೆದುಕೊಳ್ಳುತ್ತಿವೆ. ಈ ಸಾಲಿಗೆ ನಮ್ಮ ದೇಶದ ಗಡಿ ಕಾಯುತ್ತಿರುವ ಮಹಿಳಾ ಪಡೆಗಳು ಸೇರುತ್ತವೆ.

ಹಲವು ಸವಾಲುಗಳ ನಡುವೆಯೂ ದೇಶದ ಗಡಿ ಕಾಯುವ ಮೂಲಕ ಶತ್ರುಗಳಿಂದ ರಕ್ಷಣೆ ನೀಡುವ ಕಾರ್ಯದಲ್ಲಿ ಇಂಡೊ ಟಿಬೆಟನ್‌ ಗಡಿ  ಪೊಲೀಸ್‌ (ಐಟಿಬಿಪಿ) ಪಡೆಯ ವೀರ ವನಿತೆಯರು ನಿರತರಾಗಿದ್ದಾರೆ. ಅದರ ವಿಡಿಯೊವೊಂದರನ್ನು ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.

ಚೀನಾದ ಗಡಿಗೆ ಸಮೀಪದ ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿ ಮಹಿಳಾ ಯೋಧರು ಗಸ್ತು ತಿರುಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಬೆಟ್ಟ ಗುಡ್ಡ, ಹರಿವ ಹೊಳೆ, ಬದಲಾಗುವ ವಾತಾವರಣ,...ಈ ಎಲ್ಲದರ ನಡುವೆಯೂ ಅವರು ಸಾಗುತ್ತಿದ್ದಾರೆ. ಚೀನಾದೊಂದಿಗಿನ 3,488 ಕಿ.ಮೀ. ಉದ್ದದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭದ್ರತೆಯ ಹೊಣೆಯನ್ನು ಐಟಿಬಿಪಿ ಹೊತ್ತಿದೆ.

 

12,000 ಚದರ ಅಡಿಯ ರಂಗೋಲಿ

 

ರಂಗೋಲಿ ಕಲಾವಿದೆ ಶಿಖಾ ಶರ್ಮಾ ಅವರು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ 12,000 ಚದರ ಅಡಿಯನ್ನು ಅಗಲದ ಬಣ್ಣದ ರಂಗೋಲಿಯನ್ನು ಮೂಡಿಸಿದ್ದಾರೆ. ಮಹಿಳೆಯ ಸಬಲೀಕರಣವನ್ನು ಬಿಂಬಿಸುವ ನಿಟ್ಟಿನಲ್ಲಿ ರಂಗೋಲಿ ಬಿಡಿಸಲಾಗಿದೆ ಎಂದು ಶಿಖಾ ಹೇಳಿದ್ದಾರೆ. ಇದಕ್ಕಾಗಿ ಅವರು ಎರಡು ದಿನ ಶ್ರಮಿಸಿದ್ದಾರೆ.

 

ಬಿಎಸ್‌ಎಫ್‌ ಮಹಿಳಾ ಸಿಬ್ಬಂದಿ ಬೈಕ್‌ ರ್‍ಯಾಲಿ

 

36 ಮಹಿಳೆಯರನ್ನು ಒಳಗೊಂಡ 'ಬಿಎಸ್‌ಎಫ್‌ ಸೀಮಾ ಭವಾನಿ ಮಹಿಳೆಯರ ಡೇರ್‌ಡೆವಿಲ್‌ ಮೋಟಾರ್‌ಸೈಕಲ್‌' ತಂಡವು 5,280 ಕಿ.ಮೀ. ದೂರದ ಪ್ರಯಾಣ ಆರಂಭಿಸಿದೆ. ಬಿಎಸ್‌ಎಫ್‌ ಸೀಮಾ ಭವಾನಿ ಶೌರ್ಯ ಯಾತ್ರೆ ಇದಾಗಿದ್ದು, 'ಎಂಪವರ್‌ಮೆಂಟ್‌ ರೈಡ್‌–2022' ಹೆಸರಿನಲ್ಲಿ ದೆಹಲಿಯಿಂದ ಕನ್ಯಾಕುಮಾರಿಯ ವರೆಗೂ ಬೈಕ್‌ ರ್‍ಯಾಲಿ ಸಾಗಲಿದೆ.

 

ಶಿಮ್ಲಾದಲ್ಲಿ ಕ್ಯಾಬ್‌ ಚಲಾಯಿಸುವ ಮಹಿಳೆ ಮೀನಾಕ್ಷಿ ನೇಗಿ

 

ಪ್ರವಾಸಿಗರನ್ನು ಸೆಳೆಯುವ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಟ್ಯಾಕ್ಸಿ ಚಾಲಕಿಯಾಗಿ ಜೀವನ ನಡೆಸುತ್ತಿದ್ದಾರೆ ಮೀನಾಕ್ಷಿ ನೇಗಿ. ಪರ್ವತ ಪ್ರದೇಶದಲ್ಲಿ ಕಾರು ಚಾಲನೆ ಸುಲಭದ ಕೆಲಸವಾಗಿರುವುದಿಲ್ಲ. ಪ್ರವಾಸಿಗರನ್ನು ಜೊತೆಯಲ್ಲಿ ಕೂರಿಸಿಕೊಂಡು ಸುತ್ತಾಡುವುದರಲ್ಲಿ ಹೆಚ್ಚಿನ ಹೊಣೆಗಾರಿಕೆಯೂ ಇರುತ್ತದೆ. ಆದರೆ, ಕಠಿಣ ಹಾದಿಯಲ್ಲಿ ಕಾರು ಚಾಲನೆ ಮಾಡುವುದರಲ್ಲೇ ಸಂತಸ ಪಡುತ್ತಿರುವವರು ಮೀನಾಕ್ಷಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು