ಬುಧವಾರ, ಮಾರ್ಚ್ 22, 2023
32 °C

ಜೈಪುರ ಸಾಹಿತ್ಯೋತ್ಸವ | ತಾಯಿ ಇಲ್ಲದ ಭಾಷೆ ಹಿಂದಿ: ಲೇಖಕ ಪುಷ್ಪೇಶ್ ಪಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೈಪುರ: ‘ಹಿಂದಿ‌ ಭಾಷೆಗೆ ಅಮ್ಮ ಇಲ್ಲ. ಬಾಡಿಗೆ ತಾಯಿಯೂ ಇಲ್ಲ. ಅಲ್ಲಿ‌ ಇಲ್ಲಿ ನೋಡುತ್ತಾ, ಕಣ್ಣು ಪಿಳಿಪಿಳಿಸುತ್ತಾ ಇರುವ ಈ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನ ದಕ್ಕಿಸಿಕೊಡುವ ಯಾವ ಇಚ್ಛಾಶಕ್ತಿಯೂ ಸರ್ಕಾರಕ್ಕೆ ಇದ್ದಂತೆ ಇಲ್ಲ’ ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಹಾಗೂ ಲೇಖಕ ಪುಷ್ಪೇಶ್ ಪಂತ್ ಹೇಳಿದರು.

ಜೈಪುರ ಸಾಹಿತ್ಯೋತ್ಸವದ ಮೂರನೇ ದಿನವಾದ ಶನಿವಾರ ‘ಏಕ್ ಹಿಂದಿ ಅನೇಕ್ ಹಿಂದಿ’ ಗೋಷ್ಠಿಯಲ್ಲಿ ಅವರು ಮಾತನಾಡಿದರು. 

‘ವಿಕಿ ಡೋನರ್ ತರಹದವರು ವೀರ್ಯ ಕೊಟ್ಟು ಬೆಳೆಸಲು ಮುಂದೆ ಬಂದರೂ ಹಿಂದಿ ಭಾಷೆಗೆ ಬಾಡಿಗೆ ತಾಯಿಯೇ ಇಲ್ಲ.‌ ಮೇರೆ ಪಾಸ್ ಮಾ ಹೈ ಎನ್ನುವ ಸ್ಥಿತಿಯಲ್ಲಿ ನಾವಿಲ್ಲ. ಬೇರೆ ಭಾಷೆಗಳ ಸಾಹಿತ್ಯವನ್ನೇ ನೆಚ್ಚಿಕೊಂಡು ಅದು ಸಾರಸತ್ವವನ್ನು ಕಡ ಪಡೆದುಕೊಳ್ಳುತ್ತಿದೆ. ಸ್ವಂತ ಕಾಲಿನ ಮೇಲೆ ಅದು ಇನ್ನೂ ನಿಲ್ಲಲು ಸಾಧ್ಯವಾಗಿಲ್ಲ. ಸರ್ಕಾರಕ್ಕೆ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ಉತ್ಕಟತೆ ಇಲ್ಲ, ಹಿಂದೂಸ್ತಾನವನ್ನಷ್ಟೆ ಮಾಡುವ ಆಲೋಚನೆ ಇದೆ’ ಎಂದು ವ್ಯಂಗ್ಯ ಬೆರೆಸಿದ ಧಾಟಿಯಲ್ಲಿ ಹೇಳಿದರು.

‘ಉರ್ದು ಮೂಲದಿಂದ ಕಳಚಿ ಕೊಂಡು ನಿಧಾನವಾಗಿ ಹಿಂದಿ ಭಾಷೆಯು ತನ್ನ ಅಸ್ತಿತ್ವವನ್ನು ಸೃಷ್ಟಿಸಿಕೊಂಡಿದೆ. ಈಗ ದೇಶದಲ್ಲಿ ಬೇರೆ ಯಾವುದೇ ಭಾಷೆಗಳಿಗಿಂತಲೂ ಹೆಚ್ಚು ಕೃತಿಗಳು ಹಿಂದಿ ಭಾಷೆಯಲ್ಲಿ ಅನುವಾದಗೊಳ್ಳುತ್ತಿವೆ. ಭಾಷೆಯ ಬೆಳವಣಿಗೆಗೆ ಇದೂ ಕೊಡುಗೆ ನೀಡುತ್ತಿದೆ. ರಾಷ್ಟ್ರಭಾಷೆಯನ್ನಾಗಿ ಹಿಂದಿಯನ್ನು ಜಾರಿಗೆ ತರುವ ಪ್ರಯತ್ನಗಳೂ ನಡೆದಿವೆ. ಮುಂದೆ ಅದೂ ಸಾಧ್ಯವಾಗಬಹುದು’ ಎಂದು ಕಾದಂಬರಿಗಾರ್ತಿ ಹಾಗೂ ಅನುವಾದಕಿ ಅನಾಮಿಕಾ ಆಶಾವಾದ ವ್ಯಕ್ತಪಡಿಸಿದರು. 

‘ಸಂವಹನ ಭಾಷೆಯಾಗಿ ಹಿಂದಿ ಇಡೀ ದೇಶದಲ್ಲಿಯೇ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಾ ಬಂದಿದೆ. ಇದು ಸ್ವಯಂ ಭಾಷೆಯ ಬೆಳವಣಿಗೆಗೆ ಪೂರಕವಾಗಿರುವ ಅಂಶ’ ಎಂದು ಹೇಳಿದರು. 

ಸಾಹಿತಿಗಳಾದ ಸಂಜೀವ್ ಛಡ್ಡಾ, ಗೀತಾಂಜಲಿ ಶ್ರೀ ಅವರೂ ಸಂವಾದದಲ್ಲಿದ್ದರು. ಲೇಖಕ ಯತೀಂದ್ರ ಮಿಶ್ರ ಗೋಷ್ಠಿಯನ್ನು ನಿರ್ವಹಿಸಿದರು.

ತಂತ್ರಜ್ಞಾನ ಬಳಕೆಗೆ ವಿನ್ಯಾಸಿತ ತತ್ತ್ವ ಬೇಕು: ಲೇಖಕ ಅನಿರುದ್ಧ್ ಸೂರಿ
ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ಆಯಾಮಗಳಿಂದ ಆವರಿಸಿಕೊಂಡಿದೆ. ಆದರೆ, ಇವುಗಳ ಬಳಕೆಗೆ ವಿನ್ಯಾಸಿತ ತತ್ತ್ವಗಳಿಲ್ಲ. ಯುದ್ಧಗಳನ್ನು ತಂತ್ರಜ್ಞಾನ ಅವಲಂಬಿಸಿ ನಡೆಸುತ್ತಿರುವ ಕಾಲಮಾನದಲ್ಲಿ ಅಂತಹ ತತ್ತ್ವ ಇರಬೇಕಾದದ್ದು ತುಂಬಾ ಮುಖ್ಯ ಎಂದು ‘ದಿ ಗ್ರೇಟ್ ಟೆಕ್‌ ಗೇಮ್’ ಕೃತಿಯ ಲೇಖಕ ಅನಿರುದ್ಧ್ ಸೂರಿ ತಿಳಿಸಿದರು.

ಜೈಪುರ ಸಾಹಿತ್ಯೋತ್ಸವದಲ್ಲಿ ಶನಿವಾರ ನಡೆದ ‘ದಿ ಗೇಮ್ ಆಫ್ ಟೆಕ್ ಮೊರ‍್ಯಾಲಿಟಿ’ ಸಂವಾದದಲ್ಲಿ ಅವರು ಮಾತನಾಡಿದರು. 

ವಾರಕ್ಕೆ ನಾಲ್ಕು ದಿನ ನೌಕರರಿಂದ ಕೆಲಸ ಮಾಡಿಸಿ, ಮೂರು ದಿನ ರಜಾ ಕೊಡುವ ಪ್ರಯೋಗವನ್ನು ಯುರೋಪ್‌ನಲ್ಲಿ ಕೆಲವು ದೇಶಗಳಲ್ಲಿ ನಡೆಸಲಾಗಿದೆ. ಇದರಿಂದ ನೌಕರರ ಕಾರ್ಯಕ್ಷಮತೆ ಸುಧಾರಿಸುವುದಲ್ಲದೆ ಉತ್ತಮ ಫಲಿತಾಂಶ ಪಡೆಯುವುದೂ ಸಾಧ್ಯವಾಗುತ್ತಿದೆ. ಕೈಗಾರಿಕಾ ಕ್ರಾಂತಿ ನಿಧಾನವಾಗಿ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ತಂತ್ರಜ್ಞಾನದಿಂದಲೂ ಅದೇ ಆಗುತ್ತಿದೆ. ಆದರೆ, ಅದರ ನಿಯಂತ್ರಿತ ಉಪಯೋಗಕ್ಕೆ ಮುಂದೆ ಅಂತರರಾಷ್ಟ್ರೀಯ ಕಾನೂನು ಬಂದರೂ ಅಚ್ಚರಿಯಿಲ್ಲ ಎಂದು ನ್ಯೂ ಸೌತ್‌ವೇಲ್ಸ್‌ ವಿಶ್ವವಿದ್ಯಾಲಯದ ಕೃತಕ ಬುದ್ಧಿಮತ್ತೆ ವಿಷಯದ ಪ್ರಾಧ್ಯಾಪಕ ಟೋಬಿ ವಾಲ್ಶ್  ಅಭಿಪ್ರಾಯಪಟ್ಟರು.

‘ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಉದ್ಯೋಗ ಕಡಿತವಾಗುತ್ತದೆ ಎನ್ನುವುದು ತಪ್ಪು ಭಾವನೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳನ್ನು ತುಂಬುವ ಕೆಲಸವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ’ ಎಂದು ಎಬಿಪಿ ನೆಟ್‌ವರ್ಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಪಾಂಡೆ ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅನಿರುದ್ಧ್, ‘ಟಿ.ವಿ ವಾಹಿನಿಗಳೂ ಸುಳ್ಳನ್ನೇ ಸುರಿಯುತ್ತಿವೆ. ಕೇವಲ ಸಾಮಾಜಿಕ ಜಾಲತಾಣಗಳನ್ನು ದೂರುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಹೇಳಿದರು.

ಲತಾ ಮಂಗೇಷ್ಕರ್ ಕುರಿತ ಕೃತಿ ಬಿಡುಗಡೆ
ಯತೀಂದ್ರ ಮಿಶ್ರಾ ಹಿಂದಿಯಲ್ಲಿ ಬರೆದಿರುವ ‘ಲತಾ: ಸುರ್ ಗಾಥಾ’ ಕೃತಿಯ ಇಂಗ್ಲಿಷ್‌ ಅನುವಾದಿತ ಪುಸ್ತಕ ‘ಲತಾ ಮಂಗೇಷ್ಕರ್‌: ಎ ಲೈಫ್ ಇನ್ ಮ್ಯೂಸಿಕ್’ (ಅನುವಾದಕಿ: ಇರಾ ಪಾಂಡೆ) ಅನ್ನು ಕವಿ ಗುಲ್ಜಾರ್ ಬಿಡುಗಡೆ ಮಾಡಿದರು.

ಎಲ್ಲ ಗುಣವಿಶೇಷಣಗಳಿಗೂ ಪಕ್ಕಾಗಿದ್ದ, ಎಲ್ಲ ಹಬ್ಬಗಳಲ್ಲೂ ಹಾಡುಗಳ ಮೂಲಕ ಚಿರಸ್ಥಾಯಿಯಾಗಿರುವ ಲತಾ ಮಂಗೇಷ್ಕರ್ ಅವರೊಂದಿಗೆ ಕಳೆದ ಕೆಲವು ಕ್ಷಣಗಳನ್ನು ಗುಲ್ಜಾರ್ ಮೆಲುಕುಹಾಕಿದರು. ಏಳು ವರ್ಷದ ಸುದೀರ್ಘ ಅವಧಿಯಲ್ಲಿ ಸಂವಾದ ನಡೆಸಿ ಲತಾ ಮಂಗೇಷ್ಕರ್ ಅವರನ್ನು ಕುರಿತ 600 ಪುಟಗಳ ಪುಸ್ತಕ ರಚಿಸಿದ ಅನುಭವವನ್ನು ಯತೀಂದ್ರ ಹಂಚಿಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು