ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ ಸೇನೆ ನೆಲೆಯಾಗಿ ಪರಿವರ್ತನೆ: ಮೆಹಬೂಬ ಮುಫ್ತಿ

ಪ್ರವಾಸಿತಾಣಗಳ 170 ಎಕರೆ ಜಾಗ ‘ಆಯಾಕಟ್ಟಿನ ಪ್ರದೇಶ’ವಾಗಿ ಅಧಿಸೂಚನೆ
Last Updated 6 ಜನವರಿ 2022, 13:48 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದ ಪ್ರವಾಸಿ ಸ್ಥಳಗಳಲ್ಲಿನ 170 ಎಕರೆ ಜಾಗವನ್ನುಸಶಸ್ತ್ರ ಪಡೆಗಳ ಅಗತ್ಯತೆಗಳಿಗಾಗಿ ‘ಆಯಕಟ್ಟಿನ ಪ್ರದೇಶಗಳೆಂದು’ ಘೋಷಿಸಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಹೊರಡಿಸಿರುವು ಅಧಿಸೂಚನೆಯು ಈಗ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ‘ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಸೇನೆ ನೆಲೆಯನ್ನಾಗಿ ಪರಿವರ್ತನೆ ಮಾಡಲು ಹೊರಟಿದೆ’ ಎಂದು ಆಪಾದಿಸಿದ್ದಾರೆ.

‘ಪ್ರವಾಸಿ ತಾಣಗಳಲ್ಲಿ ನೂರಾರು ಎಕರೆ ಪ್ರದೇಶವನ್ನು ಸೇನೆಗಳಿಗೆ ಕೊಡುತ್ತಿರುವ ಸರ್ಕಾರದ ಅಧಿಸೂಚನೆಯು ಜಮ್ಮು ಮತ್ತು ಕಾಶ್ಮೀರವನ್ನು ಸೇನೆ ನೆಲೆ ಮಾಡುವ ಉದ್ದೇಶವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ನಮ್ಮ ಭೂಮಿಯನ್ನು ಕಬಳಿಸುವುದರ ಜತೆಗೆ ಸ್ಥಳೀಯರನ್ನು ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಶ್ಮೀರ ವಿಭಾಗೀಯ ಆಯುಕ್ತ ಪಿ.ಕೆ.ಪೋಲೆ, ಅಧಿಸೂಚನೆ ಹೊರಡಿಸಿರುವ ಭೂ ಪ್ರದೇಶವನ್ನು ಸರ್ಕಾರ ವರ್ಗಾವಣೆ ಹಾಗೂ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಹಲವು ವರ್ಷಗಳಿಂದ ಈ ಜಾಗಗಳನ್ನು ಸೇನೆಯೇ ಬಳಸುತ್ತಿದ್ದು, ಈ ಪ್ರದೇಶಗಳಲ್ಲಿ ಸೇನೆಯು 30–40 ವರ್ಷಗಳಿಂದ ತರಬೇತಿ ಹಾಗೂ ಇತರೆ ಕಾರ್ಯಗಳನ್ನು ನಡೆಸುತ್ತಿದೆ’ ಎಂದು ಹೇಳಿದರು.

ಕಾಶ್ಮೀರದ ಪ್ರಸಿದ್ಧ ಸ್ಕೈ ರೆಸಾರ್ಟ್‌ ಇರುವ ಗುಲ್‌ಮಾರ್ಗ್‌ನಲ್ಲಿ 129.30 ಎಕರೆ ಹಾಗೂ ಮತ್ತೊಂದು ಪ್ರವಾಸಿತಾಣ ಸೋನಾಮಾರ್ಗ್‌ನಲ್ಲಿ 44.25 ಎಕರೆ ಪ್ರದೇಶವನ್ನು‘ಆಯಕಟ್ಟಿನ ಪ್ರದೇಶಗಳೆಂದು’ ಘೋಷಿಸಿ ಜಮ್ಮು ಮತ್ತು ಕಾಶ್ಮೀರ ಆಡಳಿತವು 2021ರ ಡಿ.31ರಂದು ಅಧಿಸೂಚನೆ ಹೊರಡಿಸಿದೆ.

ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಕಾಯ್ದೆಯಡಿ ಈ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪ್ರದೇಶದಲ್ಲಿ ಸೇನೆಯು ಪರಿಸರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಪಾಲಿಸಬೇಕು. ಅಲ್ಲದೇ ಈಗಿರುವ ಜಮ್ಮು ಮತ್ತು ಕಾಶ್ಮಿರದ ಕೇಂದ್ರಾಡಳಿತದ ಪ್ರದೇಶದ ಬೇರೆ ಯಾವುದೇ ಕಾನೂನುಗಳಿಗೆ ಚ್ಯುತಿ ಬರದಂತೆ ಸೇನಾ ಕಮಾಂಡರ್‌ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ.

‘ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆ–1970’ಕ್ಕೆ 2020ರ ಅಕ್ಟೋಬರ್‌ನಲ್ಲಿ ತಿದ್ದುಪಡಿ ಮಾಡಿದ ನಂತರ ಹೊರಡಿಸಿದ ಮೊದಲ ಅಧಿಸೂಚನೆ ಇದಾಗಿದೆ. ಈ ಕಾಯ್ದೆಯಡಿ ಸೇನೆಯು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲೂ ಕಟ್ಟಡ ನಿರ್ಮಾಣ, ಮೂಲಸೌಕರ್ಯ ಸಂಬಂಧಿಸಿದ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT