ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರಕ್ಕೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯೇ ಮೊದಲ ಆದ್ಯತೆ: ಅಮಿತ್ ಶಾ

Last Updated 13 ಫೆಬ್ರುವರಿ 2021, 11:33 IST
ಅಕ್ಷರ ಗಾತ್ರ

ನವದೆಹಲಿ: 2019ರ ಆಗಸ್ಟ್‌ನಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಅದನ್ನು ತಲೆಮಾರುಗಳಿಂದ ಆಳಿದವರಿಗಿಂತ ಹೆಚ್ಚಿನದನ್ನು ಮಾಡಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಲೋಕಸಭೆಯಲ್ಲಿ ಪ್ರತಿಪಾದಿಸಿದರು.

ಜಮ್ಮು ಮತ್ತು ಕಾಶ್ಮೀರ ಮರುರಚನೆ(ತಿದ್ದುಪಡಿ) ಮಸೂದೆಯ ಕುರಿತ ಚರ್ಚೆಯಲ್ಲಿ ಉತ್ತರಿಸಿದ ಅವರು, ಪ್ರಸ್ತಾವಿತ ಕಾನೂನು ಈ ಪ್ರದೇಶದ ಹಿಂದಿನ ರಾಜ್ಯ ಸ್ಥಾನಮಾನವನ್ನು ಮರಳಿ ಪಡೆಯುವ ಭರವಸೆಯನ್ನು ನಿರಾಕರಿಸುತ್ತದೆ ಎಂಬ ಕೆಲವು ವಿರೋಧ ಪಕ್ಷದ ಸದಸ್ಯರು ಆರೋಪಕ್ಕೆ ತಿರುಗೇಟು ನೀಡಿದರು. ಈ ಶಾಸನಕ್ಕೂ ರಾಜ್ಯ ಸ್ಥಾನಮಾನಕ್ಕೂ ಯಾವುದೇ ಸಂಬಂಧವಿಲ್ಲ, ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ಸ್ಥಾನಮಾನ ನೀಡಲಾಗುವುದು ಎಂದು ಶಾ ಹೇಳಿದರು.

ಈ ಪ್ರದೇಶಕ್ಕೆ ನೀಡಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವು ತಾತ್ಕಾಲಿಕವಾಗಿದೆ ಎಂದ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370ನೇ ವಿಧಿಯನ್ನು ಬೆಂಬಲಿಸಿದ್ದ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ವಿರುದ್ಧ ಕಿಡಿಕಾರಿದರು. ಇದು ಕೂಡ ತಾತ್ಕಾಲಿಕ ನಿಬಂಧನೆಯಾಗಿತ್ತು ಆದರೆ 2019ರ ಆಗಸ್ಟ್‌ನಲ್ಲಿ ಮೋದಿ ಸರ್ಕಾರವು ಅದನ್ನು ರದ್ದುಗೊಳಿಸುವ ಮೊದಲು 70 ವರ್ಷಗಳಿಗೂ ಹೆಚ್ಚು ಕಾಲ ಅದನ್ನು ಮುಂದುವರಿಸಿದ್ದರು ಎಂದು ಹೇಳಿದರು.

2014ರಲ್ಲಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದಲೂ ಜಮ್ಮು ಮತ್ತು ಕಾಶ್ಮೀರ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಸಂವಿಧಾನದ 370ನೇ ವಿಧಿಯನ್ನು ಹಿಂತೆಗೆದುಕೊಂಡ ನಂತರ ಕೇಂದ್ರೀಕೃತ ಪ್ರದೇಶದಲ್ಲಿ ವಿಕೇಂದ್ರೀಕರಣ ಮತ್ತು ಅಧಿಕಾರ ಹಂಚಿಕೆ ನಡೆದಿದೆ. ಪಂಚಾಯಿತಿ ಚುನಾವಣೆಗಳಲ್ಲಿ ಶೇ 51 ರಷ್ಟು ಮತದಾನವಾಗಿದೆ. ಸ್ಥಳೀಯ ಅಭಿವೃದ್ಧಿಗೆ ಪಂಚಾಯಿತಿಗಳಿಗೆ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರವನ್ನು ನೀಡಲಾಗಿದೆ, ಈ ಮೊದಲು ಅದೇ ಅವರಿಗೆ ಕೊರತೆಯಾಗಿತ್ತು. ಈಗ ಜನಸಾಮಾನ್ಯರು ಆಯ್ಕೆ ಮಾಡಿದ ಜನರು ಜಮ್ಮು ಮತ್ತು ಕಾಶ್ಮೀರವನ್ನು ಆಳುತ್ತಾರೆ ಹೊರತು 'ರಾಜ ಮತ್ತು ರಾಣಿಯರಿಗೆ' ಜನಿಸಿದವರಲ್ಲ ಎಂದು ಈ ಪ್ರದೇಶದ ರಾಜವಂಶದ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.

ನ್ಯಾಯಯುತವಾಗಿ ಮತ್ತು ಶಾಂತಿಯುತವಾಗಿ ನಡೆಸಲಾದ ಈ ಚುನಾವಣೆಗಳಲ್ಲಿ ನಮ್ಮ ಪ್ರತಿಸ್ಪರ್ಧಿಗಳು ಸಹ ಯಾವುದೇ ತಪ್ಪನ್ನು ತೋರಿಸಲು ಸಾಧ್ಯವಿಲ್ಲ. ಈ ಪ್ರದೇಶದಲ್ಲಿ ಎರಡು ಏಮ್ಸ್‌ಗಳ ಕೆಲಸ ಪ್ರಾರಂಭವಾಗಿದೆ ಮತ್ತು 2022ರ ವೇಳೆಗೆ ಕಾಶ್ಮೀರ ಕಣಿವೆಯನ್ನು ರೈಲ್ವೆಗೆ ಸಂಪರ್ಕಿಸಲಾಗುವುದು. ಯಾರೂ ತಮ್ಮ ಭೂಮಿಯನ್ನು ಕಳೆದುಕೊಳ್ಳುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಸಾಕಷ್ಟು ಭೂಮಿ ಇದೆ ಎಂದು ಹೇಳಿದರು.

2022ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 25 ಸಾವಿರ ಸರ್ಕಾರಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ನಿರೀಕ್ಷಿಸುತ್ತದೆ ಎಂದು ಶಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT