ನವದೆಹಲಿ/ಟೊಕಿಯೊ: ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರು ಮುಂದಿನ ಸೋಮವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಚೀನಾದ ಆಕ್ರಮಣ ನೀತಿಯನ್ನು ತಡೆಯುವ ಉದ್ದೇಶದಿಂದ ಇಂಡೊ– ಪೆಸಿಫಿಕ್ ಒಪ್ಪಂದವೂ ಸೇರಿದಂತೆ ಉಭಯ ದೇಶಗಳ ರಕ್ಷಣಾ ತಂತ್ರಗಾರಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ಜಪಾನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಲಿರುವ ಕಿಶಿದಾ, ಇಲ್ಲಿ ನಡೆಯಲಿರುವ ಉಭಯ ದೇಶಗಳ ವಾರ್ಷಿಕ ಸಭೆಯಲ್ಲಿ ತಾವು ಹಾಕಿಕೊಂಡ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಪ್ರಸ್ತಾಪವಾಗಲಿರುವ ಇಂಡೊ– ಪೆಸಿಫಿಕ್ ಯೋಜನೆಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸಲಿದೆ ಎಂದು ಅಧಿಕಾರಿ ಹೇಳಿದರು.
ಯೋಜನೆಯ ಕುರಿತಂತೆ ಅವರು ಮಾತನಾಡಿ ‘ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗಗಳ ಕುರಿತಾಗಿ ಭಾರತದ ಮುಕ್ತ ಹಾಗೂ ಸ್ವತಂತ್ರ ದೃಷ್ಟಿಕೋನವು ಇಂಡೊ– ಪೆಸಿಫಿಕ್ ಯೋಜನೆಯಲ್ಲಿ ಗುರುತರ ಪಾತ್ರ ನಿರ್ವಹಿಸಲಿದೆ ಎಂಬ ನಂಬಿಕೆಯನ್ನು ಜಪಾನ್ ಪ್ರಧಾನಿ ವ್ಯಕ್ತಪಡಿಸಿದ್ದಾರೆ‘ ಎಂದರು.
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಾಂಧವ್ಯ ಉತ್ತಮವಾಗಿತ್ತು. ಅದೇ ಸ್ನೇಹವನ್ನು ಕಿಶಿದಾ ಅವರು ಮುಂದುವರಿಸಲಿದ್ದಾರೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ವಾರ್ಷಿಕ ಸಭೆಯ ವೇಳೆ ಉಕ್ರೇನ್– ರಷ್ಯಾ ಯುದ್ಧದ ಕುರಿತಂತೆ ಕೂಡ ಚರ್ಚೆ ನಡೆಯಲಿದೆ. ಈ ಸಂದರ್ಭ ರಷ್ಯಾದ ವಿರುದ್ಧ ಭಾರತವು ನಿರ್ಬಂಧ ಹೇರಬೇಕೆಂದು ಜಪಾನ್ ಕೋರಲಿದೆ ಎಂದು ತಿಳಿದುಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.