ಸೋಮವಾರ, ಸೆಪ್ಟೆಂಬರ್ 20, 2021
21 °C
ಹೊಟ್ಟೆ ಕೆಟ್ಟಿದ್ದರಿಂದ, ಆತುರದಲ್ಲಿ ಒಳ ಉಡುಪಿನಲ್ಲೇ ಶೌಚಾಲಯಕ್ಕೆ ತೆರಳಿದೆ: ಬಿಹಾರ ಶಾಸಕ ಸಮಜಾಯಿಷಿ

ಒಳಉಡುಪಿನಲ್ಲೇ ರೈಲಿನಲ್ಲಿ ಓಡಾಡಿದ ಜೆಡಿಯು ಶಾಸಕ ಗೋಪಾಲ್‌ ಮಂಡಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಹಾರದ ಜೆಡಿಯು ಶಾಸಕ ಗೋಪಾಲ್‌ ಮಂಡಲ್‌ ಅವರು ರೈಲಿನಲ್ಲಿ ಒಳ ಉಡುಪು ಧರಿಸಿ ಸಂಚರಿಸುತ್ತಿದ್ದರೆಂಬ ಕಾರಣಕ್ಕೆ ಪ್ರಯಾಣಿಕರೊಬ್ಬರು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ ಮಂಡಲ್‌ ಅವರು,‘ ನನ್ನ ಹೊಟ್ಟೆ ಕೆಟ್ಟಿತ್ತು. ಹಾಗಾಗಿ ಆತುರದಲ್ಲಿ ಒಳಉಡುಪಿನಲ್ಲೇ ನಾನು ಶೌಚಾಲಯಕ್ಕೆ ತೆರಳಿದೆ’ ಎಂದಿದ್ದಾರೆ.

ಪಟ್ನಾ–ನವದೆಹಲಿ ತೇಜಸ್‌ ರಾಜಧಾನಿ ರೈಲಿನಲ್ಲಿ ಗುರುವಾರ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸ್‌ ಪಡೆ(ಆರ್‌ಪಿಎಫ್‌) ಮತ್ತು ಟಿಕೆಟ್‌ ಪರೀಕ್ಷಕರು ಮಧ್ಯ ಪ್ರವೇಶಿಸಿ ಅವರಿಬ್ಬರ ನಡುವಿನ ವಾಗ್ವಾದವನ್ನು ನಿಲ್ಲಿಸಿದರು.

‘ನಾನು ರೈಲು ಹತ್ತಿದ ತಕ್ಷಣ ಶೌಚಾಲಯಕ್ಕೆ ಹೋಗುವ ಆತುರದಲ್ಲಿದ್ದೆ. ಈ ಅವಸರದಲ್ಲಿ ಕುರ್ತಾ ಮತ್ತು ಪೈಜಾಮಾ ತೆಗೆದು ಟವೆಲ್‌ ಅನ್ನು ಸೊಂಟಕ್ಕೆ ಸುತ್ತುವ ಬದಲು, ಭುಜದ ಮೇಲೆ ಹಾಕಿ ಶೌಚಾಲಯದತ್ತ ತೆರಳಿದೆ’ ಎಂದು ಮಂಡಲ್‌ ವರದಿಗಾರರಿಗೆ ತಿಳಿಸಿದರು.

‘ಹೊಟ್ಟೆ ಕೆಟ್ಟಿದ್ದರಿಂದ ನಾನು ಒಳ ಉಡುಪಿನಲ್ಲೇ ಹೋದೆ. ಟವೆಲ್‌ ಅನ್ನು ಸೊಂಟಕ್ಕೆ ಸುತ್ತಿಕೊಳ್ಳಬೇಕಿತ್ತು. ಆದರೆ ಅದಕ್ಕೆ ಸಮಯ ಸಿಗಲಿಲ್ಲ. ಈ ವೇಳೆ ಪ್ರಯಾಣಿಕರೊಬ್ಬರು ನನ್ನನ್ನು ತಡೆದು, ನಗ್ನವಾಗಿ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು’ ಎಂದು ಅವರು ಹೇಳಿದರು.

‘ನನ್ನನ್ನು ಹೀಗೆ ತಡೆಯಲು ನೀವು ಯಾರು ಎಂದು ಪ್ರಶ್ನಿಸಿದಾಗ, ಅವರು ನಾನು ಸಾರ್ವಜನಿಕ ಎಂದು ಉತ್ತರಿಸಿದರು. ಇದಕ್ಕೆ ನಾನು ಒಬ್ಬ ಶಾಸಕನೊಂದಿಗೆ ಯಾರು ಹೀಗೆ ವರ್ತಿಸುತ್ತಾರೆ ಎಂದು ಕೇಳಿದೆ. ಅಷ್ಟರೊಳಗೆ ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಆಗ ಅವರು ನನ್ನ ಕೈ ಹಿಡಿದು, ತಳ್ಳಿದರು. ಇದರಿಂದ ನನಗೆ ಮುಜುಗರವಾಯಿತು. ಬಳಿಕ ನಾನು ಅವರಲ್ಲಿ ಕ್ಷಮೆಯಾಚಿಸಿದೆ’ ಎಂದು ಅವರು ತಿಳಿಸಿದರು.

‘ಆ ಬೋಗಿಯಲ್ಲಿ ಮಹಿಳಾ ಪ್ರಯಾಣಿಕರು ಕೂಡ ಇರಲಿಲ್ಲ’ ಎಂದು ಅವರು ಹೇಳಿದರು. ಘಟನೆ ಬಳಿಕ ಪೊಲೀಸರು ಅವರನ್ನು ಬೇರೆ ಬೋಗಿಗೆ ಸ್ಥಳಾಂತರಿಸಿದ್ದರು.

ಗೋಪಾಲ್‌ ಮಂಡಲ್‌ ಅವರು ರೈಲಿನಲ್ಲಿ ಬಿಳಿ ಬಣ್ಣದ ಒಳಉಡುಪಿನಲ್ಲಿ  ತಿರುಗಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು