ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ತಪ್ಪಿಸಲು ಹುಡುಗಿಯರೇ ಎಚ್ಚರ ವಹಿಸಬೇಕು: ಜೆಎನ್‌ಯು ಸುತ್ತೋಲೆ

Last Updated 28 ಡಿಸೆಂಬರ್ 2021, 12:47 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಆಪ್ತ ಸಮಾಲೋಚನಾ ಸೆಷನ್ ಅನ್ನು ದೆಹಲಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು) ಆರಂಭಿಸಿದ್ದು, ಇದಕ್ಕೆ ಸಂಬಂಧಿಸಿ ಹೊರಡಿಸಲಾದ ಅಧಿಸೂಚನೆಯಲ್ಲಿ 'ಸ್ತ್ರೀದ್ವೇಷಿ' ಅಂಶವಿರುವುದಾಗಿ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ.

ಜೆಎನ್‌ಯುನ ಆಂತರಿಕ ದೂರುಗಳ ಸಮೀತಿ(ಐಸಿಸಿ) ಸುತ್ತೋಲೆಯನ್ನು ಹೊರಡಿಸಿದ್ದು, ಇದರಲ್ಲಿ 'ಸಾಮಾನ್ಯವಾಗಿ ಹುಡುಗರು ಗೆರೆ ದಾಟುತ್ತಾರೆ. ಆದರೆ ತಮ್ಮ ಮತ್ತು ಹುಡುಗರ ನಡುವೆ ಬಿಗುವಿನ ಗೆರೆ ಎಳೆದುಕೊಳ್ಳುವುದನ್ನು ಹುಡುಗಿಯರು ತಿಳಿದಿರಬೇಕು' ಎಂದಿದೆ.

ಜನವರಿ 17ರಂದು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಮಾರ್ಗದರ್ಶನದ ಸೆಷನ್‌ ಅನ್ನು ನಡೆಸುವುದಾಗಿ ಐಸಿಸಿ ಸೂಚನೆ ಹೊರಡಿಸಿತ್ತು. ಇಂತಹ ಸೆಷನ್‌ ಅನ್ನು ತಿಂಗಳಿಗೆ ಒಂದು ಬಾರಿ ಆಯೋಜನೆ ಮಾಡುವುದಾಗಿಯೂ ತಿಳಿಸಿದೆ.

'ಆಪ್ತ ಸಮಾಲೋಚನಾ ಸೆಷನ್‌ ಏಕೆ ಬೇಕು?' ಎಂಬ ವಿಷಯದಡಿ ಲೈಂಗಿಕ ದೌರ್ಜನ್ಯವನ್ನು ತಪ್ಪಿಸಲು ಹುಡುಗಿಯರ ನಡವಳಿಕೆ ಹೇಗಿರಬೇಕು ಎಂಬುದನ್ನು ತಿಳಿಸಲಾಗಿದೆ.

'ಆತ್ಮೀಯ ಸ್ನೇಹಿತರಿಂದಲೇ ಲೈಂಗಿಕ ದೌರ್ಜನ್ಯ ಸಂಭವಿಸುತ್ತಿರುವ ಹೆಚ್ಚಿನ ಪ್ರಕರಣಗಳು ಐಸಿಸಿಯ ಗಮನಕ್ಕೆ ಬಂದಿವೆ. ಸಾಮಾನ್ಯವಾಗಿ ಹುಡುಗರು ಸ್ನೇಹದ ತೆಳುವಾದ ಗೆರೆಯನ್ನು ದಾಟುತ್ತಾರೆ (ಕೆಲವು ಸಂದರ್ಭ ಗಮನಕ್ಕೆ ಬಂದು, ಕೆಲವು ಸಂದರ್ಭ ಗಮನಕ್ಕೆ ಬಾರದೆ). ಗೇಲಿ ಮಾಡುತ್ತಾರೆ ಮತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಾರೆ. ಇಂತಹ ದೌರ್ಜನ್ಯಗಳನ್ನು ತಪ್ಪಿಸಲು ಹುಡುಗಿಯರಿಗೆ ಸ್ನೇಹದ ನಡುವೆ ಸ್ಪಷ್ಟ ಗೆರೆ ಎಳೆದುಕೊಳ್ಳುವುದಕ್ಕೆ ಗೊತ್ತಿರಬೇಕು' ಎಂದು ಐಸಿಸಿ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ.

'ಯುವಕ ಮತ್ತು ಯುವತಿಯರು ಆತ್ಮೀಯ ಸ್ನೇಹಿತರಾಗಿರುವ ಕಡೆಗಳಲ್ಲಿ ಸಾಕಷ್ಟು ಲೈಂಗಿಕ ದೌರ್ಜನ್ಯದ ದೂರುಗಳು ಬರುತ್ತವೆ. ಅವರು ಪರಸ್ಪರ ಸ್ಪರ್ಶಿಸುತ್ತಾರೆ ಮತ್ತು ತಬ್ಬಿಕೊಳ್ಳುತ್ತಾರೆ. ಯಾವಾಗ ಯುವತಿಗೆ ಇಂತಹದ್ದೆಲ್ಲ ಸರಿಯೆಂದೆನಿಸುವುದಿಲ್ಲವೋ ಆಗಲೇ ಯುವಕರಿಗೆ ಸ್ಪಷ್ಟಪಡಿಸಬೇಕು. ಹಾಗೆ ತಿಳಿ ಹೇಳಿಯೂ ಯುವಕರು ತಮ್ಮ ಕೃತ್ಯವನ್ನು ಮುಂದುವರಿಸಿದರೆ ಕ್ರಮ ಕೈಗೊಳ್ಳಲು ಐಸಿಸಿ ಇದೆ' ಎಂದು ಐಸಿಸಿ ಅಧಿಕಾರಿ ಪೂನಂ ಕುಮಾರಿ 'ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.

'ಹುಡುಗರು ಮತ್ತು ಹುಡುಗಿಯರು ತಮ್ಮ ನಡುವೆ ಗೆರೆ ಎಳೆದುಕೊಳ್ಳುವುದು ತುಂಬ ಮುಖ್ಯ. ವಿಷಯ ಹೊರಗೆ ಹೋಗುವುದಕ್ಕೆ ಮೊದಲು ತಮಗೆ ಇಷ್ಟವಾಗದಂತೆ ನಡೆದುಕೊಂಡ ಹುಡುಗರಿಗೆ ಹೇಳಬೇಕು. (ಸ್ಪರ್ಶಿಸಿದ್ದರ ಅಥವಾ ತಬ್ಬಿಕೊಂಡಿದ್ದರ ಬಗ್ಗೆ). ಇಂತಹ ವಿಷಯಗಳನ್ನು ಬಹಳ ಸ್ಪಷ್ಟವಾಗಿ ಹೇಳಿ ಇತ್ಯರ್ಥಗೊಳಿಸಿಕೊಳ್ಳಬೇಕು. ಹಾಗಾಗದಿದ್ದರೆ, ಒಬ್ಬ ವ್ಯಕ್ತಿಗೆ ತಮಗೆ ಯಾವುದು ಇಷ್ಟ ಅಥವಾ ಯಾವುದು ಇಷ್ಟವಿಲ್ಲ ಎಂಬುದು ಹೇಗೆ ತಿಳಿಯಬೇಕು? ಇಂತಹ ಸಣ್ಣ ಸಣ್ಣ ವಿಚಾರಗಳನ್ನು ನೀತಿ ಮತ್ತು ನಿಯಮಗಳ ಜೊತೆಗೆ ಐಸಿಸಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ' ಎಂದು ಕುಮಾರಿ ಹೇಳಿದ್ದಾರೆ.

'ಸ್ನೇಹಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದಿರಲು ಹುಡುಗಿಯರು ಸೂಕ್ತ ಗೆರೆ ಎಳೆದುಕೊಳ್ಳಬೇಕು- ಎನ್ನುವ ಮೂಲಕ ಐಸಿಸಿ ಸಂತ್ರಸ್ತೆಯರನ್ನೇ ಹೊಣೆಯಾಗಿಸುತ್ತಿದೆ' ಎಂದು ಜೆಎನ್‌ಯು ವಿದ್ಯಾರ್ಥಿಗಳ ನಾಯಕಿ ಆಯಿಷೀ ಘೋಷ್‌ ವಿಶ್ವವಿದ್ಯಾಲಯದ ಸುತ್ತೋಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT