ಗುರುವಾರ , ಸೆಪ್ಟೆಂಬರ್ 23, 2021
22 °C
’ಪ್ರಯಾಣ ಈಗಷ್ಟೇ ಆರಂಭ, ಎಲ್ಲರ ಜೊತೆಗೂಡಿ ಕೆಲಸ‘

‘ಜಿತೇಗಾ ಪಂಜಾಬ್‌’ ಸಾಧಿಸುವ ಗುರಿ: ನವಜೋತ್‌ ಸಿಂಗ್‌ ಸಿಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ‘ಪ್ರಯಾಣ ಈಗಷ್ಟೇ ಆರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕುಟುಂಬದ ಪ್ರತಿಯೊಬ್ಬರ ಜೊತೆಗೂಡಿ ಕಾರ್ಯನಿರ್ವಹಿಸುತ್ತೇನೆ’ ಎಂದು ಪಂಜಾಬ್‌ ರಾಜ್ಯ ಘಟಕದ ಕಾಂಗ್ರೆಸ್‌ ನೂತನ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಹೇಳಿದರು.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ತಕರಾರಿನ ನಡುವೆಯೂ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಸಿಧು ಅವರನ್ನು ನೇಮಿಸಿದೆ. ಹಾಲಿ ಅಧ್ಯಕ್ಷ ಸುನಿಲ್‌ ಜಾಖರ್‌ ಸ್ಥಾನದಲ್ಲಿ ಸಿಧು ಅಧಿಕಾರ ವಹಿಸಿಕೊಂಡಿದ್ದಾರೆ.

‘ಅಧ್ಯಕ್ಷರಾಗಿ ತಮ್ಮನ್ನು ನೇಮಿಸಿದ್ದಕ್ಕೆ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿದ ಅವರು, ‘ಜಿತೇಗಾ ಪಂಜಾಬ್‌’ ಗುರಿ ಸಾಧಿಸಲು ಪಕ್ಷದ ಎಲ್ಲರ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದು, ಪಕ್ಷವನ್ನು ಬಲಪಡಿಸಲಾಗುವುದು’ಎಂದು ಭರವಸೆ ನೀಡಿದರು.

ಈ ಕುರಿತಂತೆ ಟ್ವೀಟ್‌ ಮಾಡಿರುವ ಸಿಧು, ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಜೊತೆಗೆ ತಮ್ಮ ತಂದೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

‘ಅಭ್ಯುದಯ, ಹಕ್ಕು ಮತ್ತು ಸ್ವಾತಂತ್ರ್ಯವನ್ನು ಎಲ್ಲರೊಂದಿಗೆ ಹಂಚಿಕೆ ಮಾಡಿಕೊಳ್ಳಬೇಕು. ನನ್ನ ತಂದೆಯೂ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು’ ಎಂದು ಸಿಧು ಟ್ವೀಟ್‌ನಲ್ಲಿ ಸ್ಮರಿಸಿದ್ದಾರೆ. ಸಿಧು ನೇಮಕದ ಹಿಂದೆಯೇ ಅಮೃತಸರ, ಪಟಿಯಾಲದಲ್ಲಿ ಬೆಂಬಲಿಗರು ದೊಡ್ಡ ಪ್ರಮಾಣದಲ್ಲಿ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ನಾಲ್ವರು ಕಾರ್ಯಾಧ್ಯಕ್ಷರು: ಪಂಜಾಬ್‌ನಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸಿಧು ಅವರೊಂದಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ಹೈಕಮಾಂಡ್‌ ನೇಮಕ ಮಾಡಿದೆ.

ಸಿಧು ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಉತ್ಸಾಹದೊಂದಿಗೆ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಬಹುದು ಎಂಬುದು ಹೈಕಮಾಂಡ್‌ನ ಆಶಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು