ನವದೆಹಲಿ: ‘ನ್ಯಾಯಮೂರ್ತಿಗಳು ಚುನಾವಣೆಗೆ ನಿಲ್ಲುವುದಿಲ್ಲ. ಹೀಗಾಗಿ ಸಾರ್ವಜನಿಕರ ವಿಮರ್ಶೆಯನ್ನೂ ಎದುರಿಸುವುದಿಲ್ಲ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ. ಆ ಮೂಲಕ ನ್ಯಾಯಾಂಗ ವ್ಯವಸ್ಥೆ ಮೇಲಿನ ವಾಗ್ದಾಳಿ ಮುಂದುವರಿಸಿದ್ದಾರೆ.
ದೆಹಲಿ ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜನ ನೋಡುತ್ತಿದ್ದಾರೆ. ನೀವು ಹೇಗೆ ಕೆಲಸ ನಿರ್ವಹಿಸುತ್ತೀರಿ? ಏನು ಮಾಡುತ್ತಿದ್ದೀರಿ? ನಿಮ್ಮ ತೀರ್ಪು ಹೇಗಿದೆ? ಇವೆಲ್ಲವನ್ನೂ ಗಮನಿಸುತ್ತಾರೆ. ಇವುಗಳ ಆಧಾರದಲ್ಲಿ ಅಭಿಪ್ರಾಯ ರೂಪಿಸುತ್ತಾರೆ. ಸಾಮಾಜಿಕ ಜಾಲತಾಣಗಳ ಈ ಕಾಲಘಟ್ಟದಲ್ಲಿ ಯಾರು ಏನನ್ನೂ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ’ ಎಂದಿದ್ದಾರೆ.
‘ನ್ಯಾಯಮೂರ್ತಿಗಳನ್ನು ಟೀಕಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು (ಸಿಜೆಐ) ನಮಗೆ ಸೂಚಿಸಿದ್ದಾರೆ. ಅವರ ಸಲಹೆ ಸ್ವೀಕರಿಸಿದ್ದೇವೆ. ಆದರೆ ಜನರು ಸಾಮೂಹಿಕವಾಗಿ ಟೀಕೆ ನಡೆಸಿದರೆ ನಾವೇನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
‘ಪ್ರತಿಯೊಬ್ಬ ನಾಗರಿಕರೂ ಸರ್ಕಾರವನ್ನು ಪ್ರಶ್ನಿಸುತ್ತಾರೆ. ಪ್ರಶ್ನಿಸಲೇಬೇಕು. ಸಾರ್ವಜನಿಕರು ಚುನಾಯಿತ ಸರ್ಕಾರವನ್ನು ಪ್ರಶ್ನಿಸದೆ ಇನ್ಯಾರನ್ನು ಪ್ರಶ್ನಿಸಲು ಸಾಧ್ಯ. ನಾವು ಜನಪ್ರತಿನಿಧಿಗಳು. ಹೀಗಾಗಿ ಅವರ ಪ್ರಶ್ನೆಗಳನ್ನು ಎದುರಿಸುತ್ತೇವೆ. ಈಗ ನಾನು ಕಾನೂನು ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜನರು ನಮಗೆ ಅಧಿಕಾರ ನೀಡದೆ ಹೋದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತೇವೆ. ಆಗ ನಾವೂ ಆಡಳಿತಾರೂಢ ಸರ್ಕಾರವನ್ನು ಪ್ರಶ್ನಿಸುತ್ತೇವೆ’ ಎಂದಿದ್ದಾರೆ.
‘ನ್ಯಾಯಾಧೀಶರಾಗಿದ್ದವರು ನಾಳೆ ನ್ಯಾಯಮೂರ್ತಿಯಾಗಬಹುದು. ಅದಕ್ಕಾಗಿ ಅವರು ಚುನಾವಣೆಗೆ ನಿಲ್ಲಬೇಕೆಂದಿಲ್ಲ. ನ್ಯಾಯಮೂರ್ತಿಗಳು ಜನರಿಂದ ಚುನಾಯಿತರಾಗುವುದಿಲ್ಲ. ಹೀಗಾಗಿ ಜನರು ಅವರನ್ನು ಬದಲಾಯಿಸಲೂ ಆಗುವುದಿಲ್ಲ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.