ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಸತ್‌ ಭವನ ಕಟ್ಟಡ ನಿರ್ಮಾಣದ ಔಚಿತ್ಯವೇನು?: ಮೋದಿ ವಿರುದ್ಧ ಹರಿಹಾಯ್ದ ಕಮಲ್‌

Last Updated 13 ಡಿಸೆಂಬರ್ 2020, 11:34 IST
ಅಕ್ಷರ ಗಾತ್ರ

ಚೆನ್ನೈ: ‘ಕೊರೊನಾದಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದ ಜನರ ಬದುಕು ದುಸ್ತರವಾಗಿದೆ. ದೇಶದ ಬಹುಪಾಲು ಮಂದಿ ಹಸಿವಿನಿಂದ ನರಳುತ್ತಿದ್ದಾರೆ. ಇಂತಹ ಸಮಯದಲ್ಲಿ ಸುಮಾರು ₹1,000 ಕೋಟಿ ವೆಚ್ಚದಲ್ಲಿ ನೂತನ ಸಂಸತ್‌ ಭವನದ ಕಟ್ಟಡ ನಿರ್ಮಿಸುವ ಅಗತ್ಯವಾದರೂ ಏನಿದೆ? ಇದರ ಹಿಂದಿನ ಉದ್ದೇಶವಾದರೂ ಏನು?’ ಎಂದು ತಮಿಳು ನಟ ಕಮಲ್‌ ಹಾಸನ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

‘ಮಕ್ಕಳ್‌ ನೀದಿ ಮೈಯಂ’ (ಎಂಎನ್‌ಎಂ) ಪಕ್ಷದ ಸ್ಥಾಪಕರೂ ಆಗಿರುವ ಕಮಲ್‌, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪ್ರಚಾರ ಆರಂಭಿಸಿದರು. ಇದಕ್ಕೂ ಮುನ್ನ ಅವರು ಟ್ವೀಟ್‌ ಮೂಲಕ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಹೊಸ ಕಟ್ಟಡದ ಉದ್ದೇಶಿತ ನಿರ್ಮಾಣವನ್ನು ಶತಮಾನಗಳಷ್ಟು ಹಳೆಯದಾದ ಚೀನಾ ಮಹಾಗೋಡೆಗೆ ಹೋಲಿಸಿರುವ ಅವರು ‘ಚೀನಾ ಮಹಾಗೋಡೆ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿನ ಆಡಳಿತಗಾರರು ಈ ಗೋಡೆಯು ಜನರನ್ನು ಕಾಪಾಡಲಿದೆ ಎಂದು ಬಣ್ಣಿಸಿದ್ದರು. ವಾಸ್ತವದಲ್ಲಿ ಹಾಗಾಗಲೇ ಇಲ್ಲ. ಗೋಡೆ ನಿರ್ಮಾಣದಿಂದ ಸಾವಿರಾರು ಮಂದಿಯ ಬದುಕು ನಾಶವಾಯಿತು’ ಎಂದು ತಿಳಿಸಿದ್ದಾರೆ.

‘ಹೊಸ ಕಟ್ಟಡ ಕಟ್ಟುವ ಮೂಲಕ ನೀವು ಯಾರನ್ನು ಕಾಪಾಡಲು ಹೊರಟಿದ್ದೀರಿ. ನಿಮ್ಮ ಈ ನಡೆಯ ಹಿಂದಿನ ರಹಸ್ಯವಾದರೂ ಏನು ಎಂಬುದನ್ನು ಈ ನಾಡಿನ ಜನರಿಗೆ ತಿಳಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಮದುರೈಯಲ್ಲಿ ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಕಮಲ್‌ ‘ ಸ್ಥಳೀಯ ಆಡಳಿತಗಾರರು ನಗರ ವ್ಯಾಪ್ತಿಯ ಪ್ರಚಾರಕ್ಕೆ ಅಂತಿಮ ಕ್ಷಣದಲ್ಲಿ ಅನುಮತಿ ನಿರಾಕರಿಸಿದರು. ಹೀಗಿದ್ದರೂ ನಾವು ಪಟ್ಟುಹಿಡಿದು ಪ್ರಚಾರ ನಡೆಸಿದ್ದೇವೆ. ತಮಿಳುನಾಡು ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈಗಿನ ಸರ್ಕಾರದ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಪಕ್ಷವು ಜನರ ಧ್ವನಿಯಾಗಿ ಕೆಲಸ ಮಾಡಲಿದೆ’ ಎಂದಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ 2021ರ ಏಪ್ರಿಲ್‌–ಮೇ ತಿಂಗಳಲ್ಲಿ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT