ಭಾನುವಾರ, ಜುಲೈ 3, 2022
27 °C
ಬಜೆಟ್‌ ಮೇಲಿನ ಚರ್ಚೆ ವೇಳೆ ಕೇಂದ್ರದ ವಿರುದ್ಧ ವಾಗ್ದಾಳಿ

2014ರ ನಂತರ ದೇಶದಲ್ಲಿ ‘ಅಮೃತ ಕಾಲ‘ ಬದಲಾಗಿ ‘ರಾಹುಕಾಲ‘ ಇದೆ: ಸಿಬಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ‘ಅಮೃತ ಕಾಲ’ ಇಲ್ಲ; ಬದಲಾಗಿ ‘ರಾಹು ಕಾಲ’ದ ಅನುಭವವಾಗುತ್ತಿದೆ’ ಎಂದು ಕಾಂಗ್ರೆಸ್‌ ಸಂಸದ ಕಪಿಲ್‌ ಸಿಬಲ್ ಬುಧವಾರ ಆರೋಪಿಸಿದರು.

ರಾಜ್ಯಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕೇಂದ್ರ ಮಂಡಿಸಿದ ಬಜೆಟ್‌ನಲ್ಲಿ ದೂರದೃಷ್ಟಿ ಹಾಗೂ ದೀರ್ಘಾವಧಿ ಯೋಜನೆಗಳ ಕೊರತೆ ಕಾಣುತ್ತದೆ’ ಎಂದು ಟೀಕಿಸಿದರು.

‘ಈ ಬಾರಿಯ ಬಜೆಟ್‌ನಲ್ಲಿ ಡಿಜಿಟಲ್, ಹಸಿರು, ಮೇಕ್‌ ಇನ್‌ ಇಂಡಿಯಾ, ಬಂಡವಾಳ ವೆಚ್ಚ, ತೆರಿಗೆ ಆದಾಯದಂತಹ ಪದಗಳೇ ಕೇಳಿಬಂದವು. ನಿರುದ್ಯೋಗ, ಬಡತನ, ಆಹಾರ ಭದ್ರತೆ, ಔಪಚಾರಿಕ ವಲಯ, ವಲಸೆ ಕಾರ್ಮಿಕರು, ದಿನಗೂಲಿಗಳು, ಎಲ್ಲರಿಗೂ ಆರೋಗ್ಯ, ಸಾಮಾಜಿಕ ಭದ್ರತೆ, ಮಹಿಳೆ ಹಾಗೂ ಯುವಕರು ಎಂಬಂಥ ಪದಗಳೇ ಈ ಸಲದ ಬಜೆಟ್‌ ದಾಖಲೆಗಳಲ್ಲಿ ಕಂಡುಬರಲಿಲ್ಲ’ ಎಂದು ಸಿಬಲ್‌ ವಾಗ್ದಾಳಿ ನಡೆಸಿದರು.

‘ಮೋದಿ ನೇತೃತ್ವದ ಸರ್ಕಾರ ಬಡವರು, ತುಳಿತಕ್ಕೆ ಒಳಗಾದವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ, 2014ರಿಂದ ನಮಗೆ ರಾಹು ಕಾಲದ ಅನುಭವವಾಗುತ್ತಿದೆ. ಹಾಗಾಗಿ, ನೀವು ಯಾವ ಅಮೃತ ಕಾಲದ ಬಗ್ಗೆ ಮಾತನಾಡುತ್ತಿದ್ದೀರಿ’ ಎಂದು ಅವರು ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷ ತುಕ್ಡೆ–ತುಕ್ಡೆ ಗ್ಯಾಂಗ್‌ನ ನಾಯಕ’ ಎಂಬ ಮೋದಿ ಅವರ ಟೀಕೆಯನ್ನು ಪ್ರಸ್ತಾಪಿಸಿದ ಸಿಬಲ್‌, ‘ನಾಗರಿಕತೆ, ದೇಶದ ಇತಿಹಾಸ, ಸಂವಿಧಾನ ಹಾಗೂ ಭ್ರಾತೃತ್ವಕ್ಕೆ ಯಾರು ಭಂಗ ತರುತ್ತಿದ್ದಾರೋ ಅವರೇ ಈ ಗ್ಯಾಂಗ್‌ನ ನಾಯಕರು’ ಎಂದು ಹರಿಹಾಯ್ದರು.

‘ಈ ಬಜೆಟ್‌ ಯಾರಿಗಾಗಿ? ಎಲ್ಲ ವಿಮಾನನಿಲ್ದಾಣಗಳು ಹಾಗೂ ಬಂದರುಗಳನ್ನು ಖರೀದಿಸುವ ಶಕ್ತಿ ಹೊಂದಿದ, ಮೇಲ್ಸ್ತರದ ಶೇ 1–2ರಷ್ಟು ಜನರಿಗಾಗಿಯೇ’ ಎಂದರು.

ಹಣಕಾಸು ಸಚಿವರನ್ನು ಉದ್ದೇಶಿಸಿ ಟೀಕೆ ಮುಂದುವರಿಸಿದ ಅವರು, ‘ನೀವು ಆಕಾಶವನ್ನು ನೋಡುತ್ತಿದ್ದೀರಿ. ನೀವು ನೋಡಬೇಕಾಗಿರುವುದು ನೆಲವನ್ನು’ ಎಂದು ವಾಗ್ದಾಳಿ ನಡೆಸಿದರು.

ಸಂಸದರಾದ ಟಿಎಂಸಿಯ ಡೋಲಾ ಸೇನ್‌, ಸಿಪಿಎಂನ ಎಳಮರಮ್ ಕರೀಂ ಸಹ ಮಾತನಾಡಿ, ಈ ಸಲದ ಬಜೆಟ್‌ ಜನ ವಿರೋಧಿ ಎಂದು ಟೀಕಿಸಿದರು.

ವಿರೋಧ ಪಕ್ಷಗಳ ದಾಳಿಗೆ  ಉತ್ತರಿಸಿದ ಬಿಜೆಪಿಯ ಸಂಸದ ಸುಶೀಲ್‌ಕುಮಾರ್‌ ಮೋದಿ, ‘ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರಂತೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ ಬದಲಾಗಿ ಜವಾಹರಲಾಲ್‌ ನೆಹರೂ ವಿ.ವಿಯಲ್ಲಿ ಪದವಿ ಪಡೆದಿದ್ದಾರೆ’ ಎಂದರು.

‘ಜಗತ್ತಿನ ಆರ್ಥಿಕತೆಯೇ ಸಂಕಷ್ಟದಲ್ಲಿ ಇದೆ. ಇಂಥ ಸಂದರ್ಭದಲ್ಲಿ ಚಿದಂಬರಂ ಅವರು ಮಂಡಿಸಬಹುದಾಗಿದ್ದಕ್ಕಿಂತ 100 ಪಟ್ಟು ಉತ್ತಮ ಬಜೆಟ್‌ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ’ ಎಂದು ತಿರುಗೇಟು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು