ರಾಜ್ಯದ ಗೋಹತ್ಯೆ ನಿಷೇಧದಿಂದ ಗೋವಾಕ್ಕೆ ದನದ ಮಾಂಸದ ಕೊರತೆ: ಸಿಎಂ ಸಾವಂತ್

ಪಣಜಿ: ’ಕರ್ನಾಟಕದಲ್ಲಿ ಗೋಹತ್ಯೆಗೆ ನಿಷೇಧ ಹೇರಿ ಕಠಿಣ ಕಾನೂನು ರೂಪಿಸಿರುವುದರಿಂದ ಗೋವಾದಲ್ಲಿ ದನದ ಮಾಂಸಕ್ಕೆ ಕೊರತೆಯಾಗಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
‘ಸದ್ಯಕ್ಕೆ ಮಾಂಸಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಗೋವಾ ರಾಜ್ಯಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕದಿಂದಲೇ ದನದ ಮಾಂಸ ಪೂರೈಕೆಯಾಗುತ್ತಿತ್ತು. ಆದರೆ, ಕರ್ನಾಟಕ ದಿಢೀರನೆ ಕಾನೂನು ರೂಪಿಸಿ ಗೋಹತ್ಯೆಗೆ ನಿಷೇಧ ಹೇರಿದ್ದರಿಂದ ಸಮಸ್ಯೆಯಾಗಿದೆ’ ಎಂದು ತಿಳಿಸಿದ್ದಾರೆ.
‘ಗೋಮಾತೆಯನ್ನು ನಾನು ಪೂಜಿಸುತ್ತೇನೆ. ಆದರೆ, ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಯೂ ಸಹ ನನ್ನ ಜವಾಬ್ದಾರಿಯಾಗಿದೆ. ಅಲ್ಪಸಂಖ್ಯಾತರಿಗೆ ದನದ ಮಾಂಸ ನಿತ್ಯದ ಆಹಾರವಾಗಿದೆ. ಆಹಾರ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.
‘ಮಾಂಸಕ್ಕಾಗಿ ಇತರ ರಾಜ್ಯಗಳಿಂದ ಜಾನುವಾರುಗಳನ್ನು ತರುವ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪಶು ಸಂಗೋಪನಾ ಇಲಾಖೆಗೂ ನಿರ್ದೇಶನ ನೀಡಿದ್ದೇನೆ. ಗೋವಾದಲ್ಲಿರುವ ಶೇಕಡ 30ರಷ್ಟು ಅಲ್ಪಸಂಖ್ಯಾತರಿಗೆ ದನದ ಮಾಂಸ ಸಕಾಲಕ್ಕೆ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಗೋವಾದಲ್ಲಿ ಪ್ರತಿದಿನ 25 ಟನ್‌ಗಳಿಗೂ ಹೆಚ್ಚು ದನದ ಮಾಂಸವನ್ನು ಸೇವಿಸಲಾಗುತ್ತದೆ. ಇದರಲ್ಲಿ ಬೆಳಗಾವಿ ಜಿಲ್ಲೆಯಿಂದಲೇ ಅತಿ ಹೆಚ್ಚು ದನದ ಮಾಂಸ ಪೂರೈಕೆಯಾಗುತ್ತದೆ. ರೆಸ್ಟೊರೆಂಟ್‌ಗಳಲ್ಲಿಯೂ ದನದ ಮಾಂಸವನ್ನು ನೀಡಲಾಗುತ್ತದೆ.
ಕ್ರಿಸ್‌ಮಸ್ ಮತ್ತು ಇತರ ಹಬ್ಬಗಳ ಮುನ್ನವೇ ದನದ ಮಾಂಸದ ಕೊರತೆಯಾಗಿರುವುದು ಕ್ರೈಸ್ತ ಸಮುದಾಯದ ಅಸಮಾಧಾನಕ್ಕೆ ಕೊರತೆಯಾಗಿದೆ. ಗೋವಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 26ರಷ್ಟು ಕ್ರೈಸ್ತ ಸಮುದಾಯವರಿದ್ದಾರೆ. ಮುಸ್ಲಿಮರು ಸೇರಿದಂತೆ ಶೇಕಡ 30ಕ್ಕೂ ಹೆಚ್ಚು ಜನ ಮಂದಿ ಅಲ್ಪಸಂಖ್ಯಾತರಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.