ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ‌ ಸಂಪುಟ ವಿಸ್ತರಣೆ: ಸಂಜೆ‌ ನಡ್ಡಾ–ಬೊಮ್ಮಾಯಿ ಭೇಟಿ

Last Updated 2 ಆಗಸ್ಟ್ 2021, 5:26 IST
ಅಕ್ಷರ ಗಾತ್ರ

ನವದೆಹಲಿ: ಸಚಿವ‌ ಸಂಪುಟ ವಿಸ್ತರಣೆ ಸಂಬಂಧ‌ ಚರ್ಚಿಸಲು ಭಾನುವಾರ ರಾತ್ರಿಯೇ ಇಲ್ಲಿಗೆ ದೌಡಾಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೋಮವಾರ ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.

ಭಾನುವಾರ ರಾತ್ರಿ 9ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೊಶಿ ಅವರೊಂದಿಗೆ ಬೆಂಗಳೂರಿನಿಂದ ಇಲ್ಲಿಗೆ ಬಂದಿರುವ ಬೊಮ್ಮಾಯಿ, ತಡರಾತ್ರಿವರೆಗೆ ದೆಹಲಿಯ ಅಜ್ಞಾತ‌ ಸ್ಥಳದಲ್ಲಿದ್ದು, ಹಲವು ಸುತ್ತಿನ ಮಾತುಕತೆ‌ ನಡೆಸಿದ್ದಾರೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರೂ ಸಮಾಲೋಚನೆಯಲ್ಲಿ ಪಾಲ್ಗೊಂಡು, ಬೊಮ್ಮಾಯಿ ಅವರು ಸಿದ್ಧಪಡಿಸಿ ತಂದಿದ್ದ ಪಟ್ಟಿಯನ್ನು ಪರಾಮರ್ಶಿಸಿದರು ಎಂದು ತಿಳಿದುಬಂದಿದೆ.

ಪ್ರವಾಹ ಪರಿಸ್ಥಿತಿ ಹಾಗೂ ಕೊರೊನಾ ಮೂರನೇ ಅಲೆಯ ಆತಂಕದ‌ ಹಿನ್ನೆಲೆಯಲ್ಲಿ ಶೀಘ್ರವೇ ಸಂಪುಟ ವಿಸ್ತರಣೆಗೆ ವರಿಷ್ಠರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾತ್ರಿ ಸಿದ್ಧವಾಗಿರುವ ಪಟ್ಟಿಯನ್ನು ಜೆ.ಪಿ. ನಡ್ಡಾ ಅವಲೋಕಿಸಿದ ಬಳಿಕ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ.

ಶಾಸಕರಾದ ಅರವಿಂದ ಬೆಲ್ಲದ್, ಸುನಿಲ್ ವಲ್ಯಾಪುರೆ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಮತ್ತಿತರರು ರಾಷ್ಟ್ರ ರಾಜಧಾನಿಗೆ ಬಂದಿದ್ದು, ಸಚಿವ‌ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ, ಕಲಬುರ್ಗಿಯ ಶಶಿಲ್ ನಮೋಶಿ ಅವರೂ ಸಚಿವ ಸ್ಥಾನ ನೀಡುವಂತೆ ವರಿಷ್ಠರ ದುಂಬಾಲು ಬಿದ್ದಿದ್ದಾರೆ.

ಪರಿಷತ್ ಸದಸ್ಯರಿಗೂ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಸಂಪುಟದ ಘನತೆಯನ್ನು ಹೆಚ್ಚಿಸಬೇಕು. ಈ ಮೊದಲು ಬಹುತೇಕ ಮುಖ್ಯಮಂತ್ರಿಗಳೂ ಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಆದ್ಯತೆ ನೀಡಿದ ಮಾದರಿಯಲ್ಲೇ ಈಗಲೂ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬೊಮ್ಮಾಯಿ ಸಂಜೆಯ ವೇಳೆಗೆ ವರಿಷ್ಠರೊಂದಿಗಿನ ಸಮಾಲೋಚನೆ‌ ಪೂರ್ಣಗೊಳಿಸಿ, ಸಂಪುಟ ಸೇರಲಿರುವವರ ಪಟ್ಟಿಯೊಂದಿಗೆ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT