ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಮಹಾರಾಷ್ಟ್ರ ಸರ್ಕಾರ

Last Updated 23 ನವೆಂಬರ್ 2022, 13:46 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕಕ್ಕೆ ಸೇರಬೇಕೆಂದು ಬಯಸಿರುವ ಮಹಾರಾಷ್ಟ್ರದ ಜತ್ ತಾಲ್ಲೂಕಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ, ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ‘ಮಹಾ ವಿಕಾಸ ಅಘಾಡಿ’ಯು ಬೊಮ್ಮಾಯಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಬುಧವಾರ ಹೇಳಿವೆ.

ಮೀರಜ್‌ ಉಪ ವಿಭಾಗದ ಸಾಂಗ್ಲಿ ಜಿಲ್ಲೆಯಲ್ಲಿರುವ ಜತ್‌ ತಾಲ್ಲೂಕಿನ ಕೆಲ ಗ್ರಾಮಗಳು ದಶಕದ ಹಿಂದೆ ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕಕ್ಕೆ ಸೇರಿಸಬೇಕೆಂದು ನಿರ್ಣಯಗಳನ್ನು ಅಂಗೀಕರಿಸಿದ್ದವು.

ಮರಾಠಿ ಮಾತನಾಡುವವರು ಹೆಚ್ಚಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಸೇರಿದಂತೆ ಗಡಿಯಲ್ಲಿರುವ 814 ಗ್ರಾಮಗಳು ತನಗೆ ಸೇರಬೇಕೆಂದು ಮಹಾರಾಷ್ಟು ಪ್ರತಿಪಾದಿಸುತ್ತಿದೆ. ಸದ್ಯ ಉಭಯ ರಾಜ್ಯಗಳ ಈ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ.

ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಕೀಲರ ಜತೆ ಸಮನ್ವಯ ಸಾದಿಸಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನಿಯೋಜಿಸಿದ್ದ ಬೆನ್ನಲ್ಲೇ ಬೊಮ್ಮಾಯಿ ಅವರು ಮಂಗಳವಾರ ಪ್ರತಿಕ್ರಿಯಿಸಿದ್ದರು.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ‘ಈ ಸಂಬಂಧ ಯಾವುದೇ ಹೊಸ ನಿರ್ಣಯವಾಗಿಲ್ಲ. ಆದರೆ 2012ರಲ್ಲಿ ಒಂದು ನಿರ್ಣಯವಿತ್ತು. ನಾವು ಈ ಹಿಂದೆ ಅಧಿಕಾರಕ್ಕೆ ಬಂದಾಗ ಕರ್ನಾಟಕ ಸರ್ಕಾರದ ಜತೆ ಮಾತುಕತೆ ನಡೆಸಿ ಎರಡೂ ಕಡೆಯ ನೀರಿನ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದೆವು’ ಎಂದು ತಿಳಿಸಿದ್ದಾರೆ.

‘ಗಡಿಯಲ್ಲಿರುವ ಮರಾಠಿ ಮಾತನಾಡುವ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಲು ಮಹಾರಾಷ್ಟ್ರ ಪ್ರಯತ್ನಗಳನ್ನು ಮುಂದುವರೆಸಿದೆ. ಆದರೆ ರಾಜ್ಯದ ಯಾವುದೇ ಗ್ರಾಮ ಕರ್ನಾಟಕಕ್ಕೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಕರ್ನಾಟಕದ ಮುಖ್ಯಮಂತ್ರಿಯವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದು ಮಹಾರಾಷ್ಟ್ರದ ಸಚಿವ ಶಂಭುರಾಜ್‌ ದೇಸಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಕರ್ನಾಟಕ ಸೇರುವುದಾಗಿ 40 ಗ್ರಾಮಗಳು ನಿರ್ಣಯಿಸಿದ್ದವು ಎಂದು ಕರ್ನಾಟಕದ ಸಿ.ಎಂ ಹೇಳಿರುವುದರಲ್ಲಿ ಸತ್ಯಾಂಶವಿಲ್ಲ’ ಎಂದಿರುವ ಸಾಂಗ್ಲಿಯ ಬಿಜೆಪಿ ಸಂಸದ ಸಂಜಯಕಾಕಾ ಪಾಟೀಲ್‌, ‘ಈ ಸಂಬಂಧ ಆಗಿದ್ದ 18ರಿಂದ 19 ನಿರ್ಣಯಗಳು ರಾಜಕೀಯ ಪ್ರೇರಿತವಾಗಿದ್ದವು’ ಎಂದು ಹೇಳಿದ್ದಾರೆ.

ಶಿವಸೇನಾದ ಮುಖ್ಯ ವಕ್ತಾರ ಸಂಜಯ್ ರಾವುತ್, ‘ಮಹಾರಾಷ್ಟ್ರವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಆರೋಪಿಸಿದ್ದಾರೆ. ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಅಂಬಾದಾಸ್ ದಾನ್ವೆ ಅವರು, ‘ಕರ್ನಾಟಕಕ್ಕೆ ಒಂದು ಇಂಚು ಭೂಮಿಯನ್ನೂ ನೀಡುವುದಿಲ್ಲ’ ಎಂದಿದ್ದಾರೆ.

ಎನ್‌ಸಿಪಿಯ ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಅವರು, ‘ಕರ್ನಾಟಕ ಮುಖ್ಯಮಂತ್ರಿ ಹೇಳುತ್ತಿರುವುದು 2016ರ ವಿಷಯವಾಗಿದ್ದು, ಅದು ಹಳೆಯದ್ದಾಗಿದೆ. ಆಗ ಜಲಸಂಪನ್ಮೂಲ ಸಚಿವನಾಗಿದ್ದ ನಾನೇ ಖುದ್ದಾಗಿ ಬೆಂಗಳೂರಿಗೆ ಹೋಗಿ ನೀರಿನ ಸಮಸ್ಯೆ ಕುರಿತು ಚರ್ಚಿಸಿದ್ದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT