ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಎಲ್ಲರಿಗೂ ಉಚಿತ ಲಸಿಕೆ: ಚುನಾವಣಾ ‘ಗಿಮಿಕ್‌’ ಎಂದ ಪ್ರತಿಪಕ್ಷಗಳು

ಕೇರಳ ಮುಖ್ಯಮಂತ್ರಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್‌, ಬಿಜೆಪಿ
Last Updated 13 ಡಿಸೆಂಬರ್ 2020, 13:04 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯದ ಎಲ್ಲಾ ಜನರಿಗೂ ಕೋವಿಡ್‌–19 ಲಸಿಕೆಯನ್ನು ಉಚಿತವಾಗಿ ವಿತರಿಸುವುದಾಗಿ ಹೇಳಿದ್ದು, ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಸ್ಥಳೀಯ ಸಂಸ್ಥೆಗಳ ಮೂರನೇ ಹಾಗೂ ಕೊನೆಯ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಪಿಣರಾಯಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ದೂರಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ, ರಾಜ್ಯ ಚುನಾವಣಾ ಆಯೋಗಕ್ಕೆ ಭಾನುವಾರ ದೂರು ನೀಡಿವೆ.

‘ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಮುಖ್ಯಮಂತ್ರಿಯವರು ಈ ರೀತಿ ಹೇಳಿಕೆ ನೀಡಿದ್ದಾರೆ. ರಾಜ್ಯಗಳಿಗೆ ಲಸಿಕೆ ಒದಗಿಸುವ ಕುರಿತು ಕೇಂದ್ರ ಸರ್ಕಾರವು ಇನ್ನೂ ಯಾವುದೇ ನಿರ್ಣಯಗಳನ್ನು ಕೈಗೊಂಡಿಲ್ಲ. ಹೀಗಿರುವಾಗ ಮುಖ್ಯಮಂತ್ರಿಯವರು ಇಂತಹ ಹೇಳಿಕೆ ನೀಡಿದ್ದಾದರೂ ಹೇಗೆ’ ಎಂದು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ನ (ಯುಡಿಎಫ್‌) ಮುಖಂಡ ಮಲಿಕ್‌ ಮೊಹಮ್ಮದ್‌ ಹಾಸನ್‌ ಪ್ರಶ್ನಿಸಿದ್ದಾರೆ.

‘ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಈ ಸಂಬಂಧ ಹೇಳಿಕೆ ನೀಡುವುದಕ್ಕೆ ಇದು ಸೂಕ್ತ ಸಮಯವಲ್ಲ. ಲಸಿಕೆ ವಿತರಿಸಲು ಸರ್ಕಾರ ಸೂಕ್ತ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಪಡಿತರ ಚೀಟಿ ಹೊಂದಿರುವವರಿಗೆಲ್ಲಾ ಕ್ರಿಸ್‌ಮಸ್‌ ಕಿಟ್‌ ಅನ್ನು ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿಯವರು ಈ ಹಿಂದೆ ಘೋಷಿಸಿದ್ದರು. ಅದು ಕೂಡ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ’ ಎಂದು ಹಾಸನ್‌ ತಿಳಿಸಿದ್ದಾರೆ.

‘ಉಚಿತ ಲಸಿಕೆ ನೀಡುವುದಾಗಿ ಮುಖ್ಯಮಂತ್ರಿಯವರು ಹೇಳಿರುವುದು ಕೇವಲ ಚುನಾವಣಾ ‘ಗಿಮಿಕ್‌’. ಕೇಂದ್ರ ಸರ್ಕಾರದಿಂದ ಮಾತ್ರ ಉಚಿತ ಲಸಿಕೆ ನೀಡಲು ಸಾಧ್ಯ’ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ಕೆ.ಸುರೇಂದ್ರನ್‌ ಹೇಳಿದ್ದಾರೆ.

‘ಕೋವಿಡ್‌ಗೆ ಕಡಿವಾಣ ಹಾಕಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಲಸಿಕೆಯನ್ನು ಉಚಿತವಾಗಿ ನೀಡುವುದು ಇದರ ಒಂದು ಭಾಗವಷ್ಟೇ’ ಎಂದು ಸಿಪಿಎಂ ಹಂಗಾಮಿ ಕಾರ್ಯದರ್ಶಿ ಎ.ವಿಜಯರಾಘವನ್‌ ಅವರು ಮುಖ್ಯಮಂತ್ರಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಣ್ಣೂರು, ಮಲಪ್ಪುರಂ, ಕೊಯಿಕ್ಕೋಡ್‌ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಸೋಮವಾರ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಕಣ್ಣೂರಿನಲ್ಲಿ ಮಾತನಾಡಿದ್ದ ಪಿಣರಾಯಿ ಅವರು ಎಲ್ಲರಿಗೂ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT