ಶನಿವಾರ, ಸೆಪ್ಟೆಂಬರ್ 25, 2021
23 °C

ದೇಶದ ಕೋವಿಡ್‌ ಪ್ರಕರಣಗಳಲ್ಲಿ ಕೇರಳದ್ದೇ ಅರ್ಧ ಪಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ಏಳು ದಿನಗಳಲ್ಲಿ ದೇಶದಲ್ಲಿ ದಾಖಲಾಗಿರುವ ಕೋವಿಡ್‌–19 ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಕೇರಳದಿಂದ ವರದಿಯಾಗಿವೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಹೇಳಿದೆ.

ಕಳೆದ ಎರಡು ವಾರಗಳಿಂದ ಕೇರಳದ 11 ಜಿಲ್ಲೆಗಳು ಹಾಗೂ ತಮಿಳು ನಾಡಿನ ಏಳು ಜಿಲ್ಲೆಗಳು ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳ 37 ಜಿಲ್ಲೆಗಳಲ್ಲಿ ನಿತ್ಯ ದಾಖಲಾಗುತ್ತಿರುವ ಕೋವಿಡ್‌–19 ಪ್ರಕರಣಗಳು ಏರುಗತಿಯಲ್ಲಿವೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದರು.

ಹನ್ನೊಂದು ರಾಜ್ಯಗಳ 44 ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದ ಕೋವಿಡ್‌–19 ದೃಢಪಟ್ಟ ಪ್ರಮಾಣ ಶೇ.10ಕ್ಕಿಂತಲೂ ಅಧಿಕ ಮಟ್ಟದಲ್ಲಿರುವುದಾಗಿ ಅಧಿಕಾರಿಗಳು ಹೇಳಿದರು.

ಭಾರತದಾದ್ಯಂತ ಕಳೆದ 7 ದಿನಗಳಲ್ಲಿ ವರದಿಯಾಗಿರುವ ಕೋವಿಡ್‌–19 ಪ್ರಕರಣಗಳ ಪೈಕಿ ಕೇರಳದಿಂದಲೇ ಶೇ.51.51ರಷ್ಟು ಪ್ರಕರಣಗಳಿವೆ.

ಇದನ್ನೂ ಓದಿ: ಕೋವ್ಯಾಕ್ಸಿನ್‌: ಭಾರತ್‌ ಬಯೋಟೆಕ್‌ ಅಂಕ್ಲೇಶ್ವರ ಘಟಕಕ್ಕೆ ಕೇಂದ್ರದ ಅನುಮತಿ

ಕೇಂದ್ರ ಸರ್ಕಾರದ ಪ್ರಕಾರ, ಹಿಮಾಚಲ ಪ್ರದೇಶ, ಪಂಜಾಬ್‌, ಗುಜರಾತ್‌, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಕೋವಿಡ್‌ ಪ್ರಸರಣ ವೇಗವು (ಆರ್‌ ಸಂಖ್ಯೆ) 1ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ, 'ಆರ್‌ ಸಂಖ್ಯೆ' ಹೆಚ್ಚಳವು ಕಳವಳಕಾರಿಯಾಗಿದೆ. ಮಹಾರಾಷ್ಟ್ರದಲ್ಲಿ 34 ಪ್ರಕರಣಗಳು ಸೇರಿ, ದೇಶದಲ್ಲಿ ಆಗಸ್ಟ್‌ 9ರವರೆಗೂ 86 ಸಂಗ್ರಹ ಮಾದರಿಗಳಲ್ಲಿ 'ಡೆಲ್ಟಾ ಪ್ಲಸ್‌' ಸಾರ್ಸ್‌–ಕೋವ್‌–2 ವೈರಸ್‌ ಪತ್ತೆಯಾಗಿರುವುದಾಗಿ ಸರ್ಕಾರ ಹೇಳಿದೆ.

ಮಂಗಳವಾರ ಬೆಳಿಗ್ಗೆ 24 ಗಂಟೆಗಳ ಅಂತರದಲ್ಲಿ ದೇಶದಾದ್ಯಂತ ಕೋವಿಡ್‌–19 ದೃಢಪಟ್ಟ 28,204 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,19,98,158ಕ್ಕೆ ಏರಿಕೆಯಾಗಿದೆ. 147 ದಿನಗಳಲ್ಲೇ ಅತಿ ಕಡಿಮೆ ಪ್ರಕರಣಗಳು ಇಂದು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 139 ದಿನಗಳ ಕನಿಷ್ಠವಾದ 3,88,508 ಪ್ರಕರಣಗಳಿಗೆ ಇಳಿಕೆಯಾಗಿದೆ.

24 ಗಂಟೆಗಳಲ್ಲಿ ಸೋಂಕಿನಿಂದ 373 ಮಂದಿ ಸಾವಿಗೀಡಾಗಿದ್ದು, ಈವರೆಗೂ ಒಟ್ಟು 4,28,682 ಮಂದಿ ಮೃತಪಟ್ಟಿದ್ದಾರೆ.

ಸೋಂಕು ಹರಡುವ ವೇಗ ಗುರುತಿಸುವ ಆರ್‌ ಸಂಖ್ಯೆ

ಕೊರೊನಾ ಸೋಂಕು ಹರಡುವ ವೇಗವನ್ನು ಆರ್‌ ಸಂಖ್ಯೆಯಲ್ಲಿ (ರಿಪ್ರೊಡಕ್ಷನ್ ನಂಬರ್) ಗುರುತಿಸಲಾಗುತ್ತದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಎಷ್ಟು ಜನರಿಗೆ ವೈರಸ್‌ ಸೋಂಕು ಹರಡುತ್ತದೆ ಎಂಬುದನ್ನು ಆರ್‌ ಸಂಖ್ಯೆ ಸೂಚಿಸುತ್ತದೆ. ಈ ಸಂಖ್ಯೆ 1ಕ್ಕಿಂತಲೂ ಕಡಿಮೆ ಇದ್ದರೆ, ಸೋಂಕು ನಿಧಾನವಾಗಿ ಹರಡುತ್ತಿದೆ ಎಂದು ಅರ್ಥ. ಈ ಸಂಖ್ಯೆ 1 ಮತ್ತು ಅದಕ್ಕಿಂತಲೂ ಹೆಚ್ಚು ಇದ್ದರೆ, ಸೋಂಕು ವೇಗವಾಗಿ ಹರಡುತ್ತಿದೆ ಎಂದು ಅರ್ಥ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು