ಶನಿವಾರ, ನವೆಂಬರ್ 28, 2020
17 °C

ಗಡಿ ವಿವಾದ: ಕರ್ನಾಟಕದ ಜೊತೆ ಚರ್ಚಿಸಲು ರಾಜ್ಯಪಾಲರಿಗೆ ಶಿವಸೇನೆ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ‘ದೌರ್ಜನ್ಯ’ ಎಸಗಲಾಗುತ್ತಿದೆ ಎಂಬ ಕುರಿತು ಕರ್ನಾಟಕದ ರಾಜ್ಯಪಾಲರ ಜೊತೆಗೆ ಕಟುಶಬ್ದಗಳಲ್ಲಿ ಚರ್ಚಿಸಬೇಕು’ ಎಂದು ಶಿವಸೇನೆ ಮಹಾರಾಷ್ಟ್ರದ ರಾಜ್ಯಪಾಲರಿಗೆ ಆಗ್ರಹಪಡಿಸಿದೆ.

ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶಿವಸೇನೆ, ‘ಸೂರ್ಯ –ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಭಾಗ’ ಎಂಬ ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೇಳಿಕೆ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿದೆ.

‘ಬೆಳಗಾವಿ, ಇತರೆ ಗಡಿ ಪ್ರದೇಶ ಕುರಿತಂತೆ ಕರ್ನಾಟಕ –ಮಹಾರಾಷ್ಟ್ರ ನಡುವಣ ವಿವಾದ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಆಗಸದಲ್ಲಿ ಸೂರ್ಯ, ಚಂದ್ರ ಇದೆಯೋ ಎಂಬುದನ್ನು ನೋಡಿ ಕೋರ್ಟ್ ಆದೇಶಿಸುವುದಿಲ್ಲ’ ಎಂದು ಶಿವಸೇನೆ ಹೇಳಿದೆ.  

ಮರಾಠಿ ಭಾಷಿಕರ ಮೇಲೆ ಈ ಭಾಗದಲ್ಲಿ ಕಳೆದ 60 ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ಕರ್ನಾಟಕ ಇದನ್ನು ನಿಭಾಯಿಸುತ್ತಿರುವ ಕ್ರಮ ಈ ಜನರಲ್ಲಿ ಆಕ್ರೋಶ ಮೂಡಿಸಿದೆ ಎಂದು ಶಿವಸೇನೆ ಸಂಪಾದಕೀಯದಲ್ಲಿ ಆರೋಪಿಸಿದೆ.

ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರನ್ನು ಬೆಂಬಲಿಸಿ ಮಹಾರಾಷ್ಟ್ರದ ಸಚಿವರು ರಾಜ್ಯೋತ್ಸವ ದಿನವಾಗಿದ್ದ ಭಾನುವಾರ ಕಪ್ಪುಪಟ್ಟಿಯನ್ನು ಧರಿಸಿ ಕರಾಳ ದಿನ ಆಚರಣೆಯನ್ನು ಬೆಂಬಲಿಸಿದ್ದರು.

ಮಹಾರಾಷ್ಟ್ರ ರಾಜ್ಯಪಾಲರು ಈ ಕುರಿತು ಕರ್ನಾಟಕ ರಾಜ್ಯಪಾಲರ ಜೊತೆಗೆ ಚರ್ಚಿಸಬೇಕು. ಕನಿಷ್ಠ ಬೆಳಗಾವಿಯ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಲು ಸಮಯಾವಕಾಶ ನಿಗದಿಪಡಿಸಲಾದರೂ ನೆರವು ನೀಡಬೇಕು ಎಂದು ಒತ್ತಾಯಿಸಿದೆ.

ಕರ್ನಾಟಕದ ಲಕ್ಷಾಂತರ ಜನರು ಮಹಾರಾಷ್ಟ್ರದಲ್ಲಿ ಉದ್ಯಮ, ವ್ಯಾಪಾರ ನಡೆಸುತ್ತಾ ಸಂತೋಷದಿಂದ ಜೀವಿಸುತ್ತಿದ್ದಾರೆ ಎಂಬುದನ್ನು ಲಕ್ಷ್ಮಣ ಸವದಿ ಅವರಂಥ ಸಚಿವರು ಮರೆಯಬಾರದು ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು