ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೇರಿಕೆ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ನಡೆದ ಹೋರಾಟದಲ್ಲಿ ‘ಕುವೆಂಪು’!

Last Updated 14 ಅಕ್ಟೋಬರ್ 2022, 9:11 IST
ಅಕ್ಷರ ಗಾತ್ರ

ಕೊಲ್ಕತ್ತ: ಹಿಂದಿ ಹೇರಿಕೆ ವಿರುದ್ಧ ಕೋಲ್ಕತ್ತದಲ್ಲಿ ಬಂಗಾಳಿ ಭಾಷಿಕರು ಇತ್ತೀಚೆಗೆ ನಡೆಸಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕುವೆಂಪು ಅವರ ಚಿತ್ರ, ಅವರ ಘೋಷಣೆಗಳನ್ನು ಪ್ರದರ್ಶಿಸಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಂಗ್ಲಿಷ್‌ನ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಮೂಲಕ ಭಾರತದ ಹಿಂದಿಯೇತರ ನಾಗರಿಕರ ಮೇಲೆ ಹಿಂದಿಯನ್ನು ‘ಆಕ್ರಮಣಕಾರಿಯಾಗಿ‘ ಹೇರಲಾಗುತ್ತಿದೆ ಎಂದು ಆರೋಪಿಸಿ ನೂರಾರು ಜನರು ಬುಧವಾರ ಕೋಲ್ಕತ್ತದಲ್ಲಿ ಮೆರವಣಿಗೆ ನಡೆಸಿದರು. ಹಿಂದಿ ಹೇರಿಕೆಯು ದೇಶವನ್ನು ಮತ್ತು ವೈವಿಧ್ಯತೆಯಲ್ಲಿ ಏಕತೆಯ ತತ್ವವನ್ನು ನಾಶ ಮಾಡುವ ಪಿತೂರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾಳಿ ಸಂಘಟನೆ ‘ಬಾಂಗ್ಲಾ ಪೊಕ್ಕೋ’ ಕೋಲ್ಕತ್ತದ ಸಾಂಸ್ಕೃತಿಕ ಕೇಂದ್ರವಾದ ‘ರವೀಂದ್ರ ಸದನ್‌’ನಿಂದ ದಕ್ಷಿಣ ಕೋಲ್ಕತ್ತದ ಹಜ್ರಾ ಕ್ರಾಸಿಂಗ್‌ವರೆಗೆ ಮೆರವಣಿಗೆ ನಡೆಸಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿತು.

ಹಿಂದಿ ಹೇರಿಕೆ ಖಂಡಿಸುವ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ಇದರಲ್ಲಿ ರಾಷ್ಟ್ರಕವಿ ಕುವೆಂಪು, ಪೆರಿಯಾರ್‌, ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ಅಣ್ಣಾದೊರೈ, ಕರುಣಾನಿಧಿ ಅವರ ಚಿತ್ರ, ಕೆಲ ಘೋಷಣೆಗಳನ್ನು ಪ್ರದರ್ಶಿಸಲಾಯಿತು. ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೊ, ಫೋಟೊಗಳನ್ನು ‘ಬಾಂಗ್ಲಾ ಪೊಕ್ಕೋ’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗರಗ್‌ ಚಟರ್ಜಿ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಗರಗ್‌ ಚಟರ್ಜಿ ಅವರ ಟ್ವೀಟ್‌ ಅನ್ನು ಕನ್ನಡ ಮತ್ತು ತಮಿಳು ಹೋರಾಟಗಾರರು ಭಾರಿ ಸಂಖ್ಯೆಯಲ್ಲಿ ರೀಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿರುವ ಜೆಡಿಎಸ್‌ ವಕ್ತಾರ ಪ್ರತಾಪ್‌ ಕಣಗಾಲ್‌ ಎಂಬುವವರು, ‘ಕೇಂದ್ರ ಸರ್ಕಾರದ ಪ್ರಾಯೋಜಿತ ಹಿಂದಿ ಹೇರಿಕೆಯ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಂತರ ಈಗ ಪಶ್ಚಿಮ ಬಂಗಾಳವೂ ಸೇರಿಕೊಂಡಿದೆ. ‌ಈ ಅನ್ಯಾಯದ ವಿರುದ್ಧ ಹೋರಾಡಲು ಮುಂದಾಗಿರುವ ಬಾಂಗ್ಲಾ ಪೊಕ್ಕೊವನ್ನು ನೋಡುತ್ತಿದ್ದರೆ ಹೃದಯ ತುಂಬಿ ಬಂದಿದೆ. ಹಿಂದಿಯೇತರ ರಾಜ್ಯಗಳ ಒಗ್ಗಟ್ಟಿನ ಹೋರಾಟದಿಂದ ಮಾತ್ರ ಹಿಂದಿ ಹೇರಿಕೆಯಿಂದ ಮುಕ್ತಿ ಸಾಧ್ಯ’ ಎಂದು ಬರೆದುಕೊಂಡಿದ್ದಾರೆ.

ಇದೇ ಟ್ವೀಟ್‌ ಅನ್ನು ತಮಿಳುನಾಡಿನ ಹಲವು ಭಾಷಾ ಹೋರಾಟಗಾರರೂ ರೀಟ್ವೀಟ್‌ ಮಾಡಿದ್ದಾರೆ.

ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾದ ಎಲ್ಲಾ 22 ಭಾಷೆಗಳಿಗೆ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಹಿಂದಿ ಮಾತನಾಡುವ ರಾಜ್ಯಗಳಲ್ಲಿನ ಐಐಟಿಗಳಂತಹ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಹಿಂದಿಯಾಗಿರಬೇಕು. ಇತರ ರಾಜ್ಯಗಳಲ್ಲಿ ಅವುಗಳ ಸ್ಥಳೀಯ ಭಾಷೆಯೇ ಬೋಧನಾ ಮಾಧ್ಯಮವಾಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸದೀಯ ಸಮಿತಿಯು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಹಿಂದಿಯು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದಾಗಿರಬೇಕು ಎಂದು ಅಧಿಕೃತ ಭಾಷೆಯ ಸಂಸತ್ತಿನ ಸಮಿತಿಯು ಶಿಫಾರಸು ಮಾಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT