ಮಂಗಳವಾರ, ಅಕ್ಟೋಬರ್ 26, 2021
21 °C

ಉ.ಪ್ರ: ಕಾರು ಹರಿಸಿ ಇಬ್ಬರು ರೈತರ ಹತ್ಯೆ, ಕೇಂದ್ರ ಮಂತ್ರಿ ಮಗನ ವಿರುದ್ಧ ಆರೋಪ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Twitter/Swati Maliwal

ನವದೆಹಲಿ: ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ಇಬ್ಬರು ರೈತರನ್ನು ಹತ್ಯೆ ಮಾಡಿದ ಆರೋಪ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ವಿರುದ್ಧ ಕೇಳಿಬಂದಿದೆ. ಉತ್ತರ ಪ್ರದೇಶದ ಲಖಿಮ್‌ಪುರ ಖೇರಿ ಎಂಬಲ್ಲಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ರೈತರು ಮೃತಪಟ್ಟಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಭಾರಿ ಆಕ್ರೋಷಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ 'ಇಂಡಿಯಾ ಟುಡೇ' ವರದಿ ಮಾಡಿದೆ.

ಟಿಕುನಿಯಾ ಎಂಬಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಹಿನ್ನೆಲೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆಗೆ ಇಳಿದಿದ್ದರು. ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಬಂಬೀರಪುರ ಗ್ರಾಮಕ್ಕೆ ಹೋಗಬೇಕಾಗಿತ್ತು. ಹಿಂಸಾಚಾರದ ಕಾರಣ ಆ ಭೇಟಿ ರದ್ದು ಮಾಡಿದ್ದಾರೆ.

ಸ್ಥಳೀಯರ ಪ್ರಕಾರ ಉಪಮುಖ್ಯಮಂತ್ರಿಗಳು ಆಗಮಿಸುವಾಗ ಕಪ್ಪು ಬಾವುಟ ಪ್ರದರ್ಶಿಸಲು ಪ್ರತಿಭಟನಾಕಾರರು ಯೋಜನೆ ರೂಪಿಸಿದ್ದರು. ಉಪಮುಖ್ಯಮಂತ್ರಿಯನ್ನು ಕರೆತರಲು ಹೋಗುತ್ತಿದ್ದ ವೇಳೆ ಆಶಿಶ್‌ ಮಿಶ್ರಾ ಅವರ ಕಾರಿಗೆ ಎದುರಾಗಿ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದರು ಎನ್ನಲಾಗಿದೆ.

'ಕೇಂದ್ರ ಸಚಿವರ ಮಗ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ್ದಾರೆ' ಎಂದು ಭಾರತೀಯ ಕಿಸಾನ್‌ ಯೂನಿಯನ್‌(ಬಿಕೆಯು) ಆರೋಪಿಸಿದೆ. 'ಘಟನೆಯಲ್ಲಿ ಇಬ್ಬರಲ್ಲ, ಮೂವರು ರೈತರು ಮೃತಪಟ್ಟಿದ್ದಾರೆ' ಎಂದು ಬಿಕೆಯು ತಿಳಿಸಿದೆ.

ಘಟನೆಯ ವಿವರವನ್ನಿರಿತ ರೈತರು ಟಿಕುನಿಯಾ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದಾರೆ. ಆಕ್ರೋಷಿತ ರೈತರು ಮೂರು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

ತಕ್ಷಣ ಲಖಿಮ್‌ಪುರ ಖೇರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಿಎಂ ಯೋಗಿ ಆದಿತ್ಯನಾಥ ಅವರು ಎಡಿಜಿ ಪ್ರಶಾಂತ್‌ ಕುಮಾರ್‌ಗೆ ಆದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು