ಮಂಗಳವಾರ, ಅಕ್ಟೋಬರ್ 26, 2021
21 °C

ಲಖಿಂಪುರ ಪ್ರಕರಣ: ಆರೋಪಿಗಳ ಬಂಧನವಾಗಿದೆಯೇ–ಉ.ಪ್ರ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಕ್ಟೋಬರ್‌ 3ರ ಲಖಿಂಪುರ–ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ಹಾಗೂ ಆರೋಪಿಗಳ ಕುರಿತು ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತು.

ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ರೈತರ ಪ್ರತಿಭಟನೆಯು ಹಿಂಸಾರೂಪ ಪಡೆದಿದ್ದು ಹಾಗೂ ಎಂಟು ಜನರು ಸಾವಿಗೀಡಾದ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್‌ ಗುರುವಾರ ವಿಚಾರ ಆರಂಭಿಸಿದೆ. ಆರೋಪಿಗಳ ಬಂಧನ ಆಗಿದೆಯೇ ಎಂದು ಕೋರ್ಟ್‌ ಪ್ರಶ್ನಿಸಿತು.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವು ವಿಚಾರ ನಡೆಸಿತು.

ಪ್ರಕರಣದ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ ಉತ್ತರ ಪ್ರದೇಶ ಸರ್ಕಾರ, ಪ್ರಕರಣ ಸಂಬಂಧ ವಾಸ್ತವ ಸ್ಥಿತಿ ವರದಿ ಸಲ್ಲಿಸುವುದಾಗಿ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರಕ್ಕೆ ನಿಗದಿ ಪಡಿಸಿದೆ.

ಆರೋಪಿಗಳನ್ನು ಸರ್ಕಾರವು ರಕ್ಷಿಸುತ್ತಿರುವುದಾಗಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿವೆ. ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಮುಖಂಡರು ಲಖಿಂಪುರಕ್ಕೆ ಭೇಟಿ ನೀಡಿದ್ದು, ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ವಾಪಸ್‌ ಆಗುತ್ತಿದ್ದ ರೈತರ ಗುಂಪಿನ ಮೇಲೆ ಹಿಂದಿನಿಂದ ಜೀಪ್‌ ಹರಿದಿತ್ತು. ಘಟನೆಯಲ್ಲಿ ನಾಲ್ಕು ಮಂದಿ ರೈತರು ಸಾವಿಗೀಡಾದರು. ಅನಂತರದ ಹಿಂಸಾಚಾರದಲ್ಲಿ ನಾಲ್ಕು ಜನ ಮೃತಪಟ್ಟರು.

ಪ್ರಕರಣದ ತನಿಖೆಗೆ ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್‌ ಕುಮಾರ್‌ ಶ್ರೀವಾಸ್ತವ ಅವರ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿ ಉತ್ತರ ಪ್ರದೇಶ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ. ಆಯೋಗಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ: ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣ: ತನಿಖೆಗೆ ಏಕಸದಸ್ಯ ಆಯೋಗ ರಚನೆ

ರೈತರ ಮೇಲೆ ಹರಿದ ಕಾರಿನಲ್ಲಿ ಕೇಂದ್ರದ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ ಇದ್ದರು ಎಂದು ರೈತರು ಆರೋಪಿಸಿದ್ದಾರೆ. ಆದರೆ, ಹಿಂಸಾಚಾರಕ್ಕೂ ತಮ್ಮ ಮಗನಿಗೂ ಯಾವುದೇ ಸಂಬಂಧವಿಲ್ಲ, ಘಟನೆಯ ಸ್ಥಳದಲ್ಲಿ ಆತ ಇರಲಿಲ್ಲ ಎಂದು ಅಜಯ್‌ ಮಿಶ್ರಾ ಹೇಳಿದ್ದಾರೆ. ಪ್ರತಿಭಟನಾ ನಿರತ ರೈತರೊಂದಿಗೆ ದುಷ್ಕರ್ಮಿಗಳು ಸೇರಿಕೊಂಡು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಈ ದುರದೃಷ್ಟಕರ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮ್ರಿಶಾ ಹಾಗೂ ಇತರರ ವಿರುದ್ಧ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆದರೆ, ಈವರೆಗೂ ಯಾರನ್ನೂ ಬಂಧಿಸಿಲ್ಲ.

ಲಖಿಂಪುರ–ಖೇರಿ ಹಿಂಸಾಚಾರದ ಸಂಬಂಧ ಸಿಬಿಐ ಒಳಗೊಂಡ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಕೈಗೊಳ್ಳುವಂತೆ ಕೋರಿ ಇಬ್ಬರು ವಕೀಲರು ಸುಪ್ರೀಂ ಕೋರ್ಟ್‌ಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ. ಆ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್‌) ಪರಿಗಣಿಸಬೇಕಿತ್ತು, ಆದರೆ, ಕೆಲವು ಸಂವಹನ ದೋಷದ ಕಾರಣದಿಂದಾಗಿ ಅದು ಸ್ವಯಂ ಪ್ರೇರಿತ ಪ್ರಕರಣವಾಗಿ ದಾಖಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು