ಬುಧವಾರ, ಅಕ್ಟೋಬರ್ 27, 2021
21 °C
ದೇಶದಾದ್ಯಂತ ಪ್ರತಿಭಟನೆಗೆ ಸಜ್ಜಾದ ಕಾಂಗ್ರೆಸ್‌, ಪ್ರಧಾನಿ ಮೌನ ಪ್ರಶ್ನಿಸಿದ ಎಎಪಿ

ಲಖಿಂಪುರ–ಖೇರಿ ಹಿಂಸೆ: ಸಚಿವರ ತಲೆದಂಡ, ಮಗನ ಸೆರೆಗೆ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ, ಲಖಿಂಪುರ–ಖೇರಿಯಲ್ಲಿ ಹಿಂಸಾಚಾರಕ್ಕೆ ಕಾರಣ ಎಂಬ ಆರೋಪ ಹೊತ್ತಿರುವ ಆಶಿಶ್‌ ಮಿಶ್ರಾ ಅವರನ್ನು ಬಂಧಿಸಬೇಕು ಮತ್ತು ಅಜಯ್‌ ಅವರನ್ನು ವಜಾ ಮಾಡಬೇಕು ಎಂಬ ಆಗ್ರಹ ಸೋಮವಾರ ಬಲವಾಗಿ ಕೇಳಿ ಬಂದಿದೆ.

ಅಜಯ್‌ ಅವರನ್ನು ತಕ್ಷಣವೇ ವಜಾ ಮಾಡಬೇಕು ಮತ್ತು ಆಶಿಶ್‌ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಮೃತ ರೈತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ಕೊಡಬೇಕು, ಲಖಿಂಪುರ–ಖೇರಿಗೆ ಹೋಗುತ್ತಿದ್ದಾಗ ಬಂಧನಕ್ಕೆ ಒಳಗಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಲಖಿಂಪುರ–ಖೇರಿ ಹಿಂಸಾಚಾರದ ಬಗ್ಗೆ ಪ್ರಧಾನಿಯ ಮೌನವನ್ನು ಎಎಪಿ ಪ್ರಶ್ನಿಸಿದೆ. ಅಜಯ್‌ ಮಿಶ್ರಾ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಿ, ನಿಷ್ಪಕ್ಷಪಾತ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿಯನ್ನು ಎಎಪಿ ಒತ್ತಾಯಿಸಿದೆ. 

‘ಬಹಳ ಸ್ಪಷ್ಟವಾಗಿ ಇದು ಹಾಥರಸ್‌ ಮಾದರಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಲಖಿಂಪುರ–ಖೇರಿ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸುತ್ತಿವೆ’ ಎಂದು ಎಎಪಿ ವಕ್ತಾರ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ದೇಶದಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ದೆಹಲಿಯಲ್ಲಿರುವ ಉತ್ತರ ಪ್ರದೇಶ ಭವನದ ಮುಂದೆ ಕಾಂಗ್ರೆಸ್‌ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. 

ನ್ಯಾಯಕ್ಕಾಗಿ ರೈತರು ನಡೆಸುತ್ತಿರುವ ಅಹಿಂಸಾತ್ಮಕ ಹೋರಾಟವು ಗೆಲ್ಲುವಂತೆ ಮಾಡುವುದಾಗಿ ಕಾಂಗ್ರೆಸ್‌ ಪಕ್ಷವು ಶಪಥ ಮಾಡಿದೆ. ವಿರೋಧ ಪಕ್ಷಗಳ ನಾಯಕರು ಲಖಿಂಪುರ–ಖೇರಿಗೆ ಪ್ರವೇಶಿಸುವುದನ್ನು ತಡೆದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಕೂಡ ಸೇರಿಕೊಂಡಿದೆ. 

‘ಪ್ರಿಯಾಂಕಾ, ನೀನು ಹಿಮ್ಮೆಟ್ಟುವುದಿಲ್ಲ ಎಂಬುದು ನನಗೆ ಗೊತ್ತು. ನಿನ್ನ ಧೈರ್ಯಕ್ಕೆ ಅವರು ಹೆದರುತ್ತಾರೆ. ನ್ಯಾಯಕ್ಕಾಗಿ ದೇಶದ ಅನ್ನದಾತರು ನಡೆಸುತ್ತಿರುವ ಅಹಿಂಸಾತ್ಮಕ ಹೋರಾಟಕ್ಕೆ ಗೆಲುವು ದೊರೆಯುವಂತೆ ನೋಡಿಕೊಳ್ಳೋಣ’ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ‘ನೋ ಫಿಯರ್‌’ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ. ‘ರೈತರನ್ನು ದಮನ ಮಾಡುವ, ಮುಗಿಸುವ ಪ್ರಯತ್ನದಲ್ಲಿ ಬಿಜೆಪಿ ಸರ್ಕಾರ ತೊಡಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಲಖಿಂಪುರ–ಖೇರಿ ಪ್ರವೇಶಿಸಲು ರಾಜಕಾರಣಿಗಳಿಗೆ ಸರ್ಕಾರ ಅವಕಾಶ ಕೊಟ್ಟಿಲ್ಲ. ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಮತ್ತು ಪಂಜಾಬ್‌ ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ರಂಧಾವ ಅವರನ್ನು ಕರೆತಂದ ವಿಮಾನಗಳಿಗೆ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಯಿತು. ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಹೆಲಿಕಾಪ್ಟರ್‌ಗೂ ಅನುಮತಿ ದೊರೆಯಲಿಲ್ಲ.

ಲಖಿಂಪುರ–ಖೇರಿಯಲ್ಲಿ ಇಂತಹ ಹಿಂಸಾಚಾರ ನಡೆದರೂ ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಮೌನವಾಗಿದ್ದಾರೆ ಎಂದು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಪ್ರಶ್ನಿಸಿದ್ದಾರೆ. 

‘ಉತ್ತರ ಪ್ರದೇಶಕ್ಕೆ ಹೋಗಲು ಪಾಸ್‌ಪೋರ್ಟ್‌ ಅಥವಾ ವೀಸಾ ಬೇಕಾಗಿದೆಯೇ? ಉತ್ತರ ಪ್ರದೇಶದಲ್ಲಿ ಜನರ ಹಕ್ಕುಗಳನ್ನು ರದ್ದು ಮಾಡಲಾಗಿದೆಯೇ’ ಎಂದು ಅವರು ಕೇಳಿದ್ದಾರೆ. 

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಸಚಿವ ಮಿಶ್ರಾ ಅವರು ಹಿಂಸಿಸುವುದಾಗಿ ಬೆದರಿಸಿದ್ದಾರೆ. ಅವರ ಮಗ ಕ್ರೂರವಾಗಿ ಕೊಲೆ ನಡೆಸಿರುವುದು ಕಾಕತಾಳೀಯ ಏನಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ. 

ತಮ್ಮ ಪ್ರಕ್ಷದ ಪ್ರಧಾನ ಕಾರ್ಯದರ್ಶಿ ಎಸ್‌.ಸಿ. ಮಿಶ್ರಾ ಅವರು ಲಖಿಂಪುರ–ಖೇರಿಗೆ ಹೋಗುವುದನ್ನು ತಡೆಯಲಾಗಿದೆ. ಅವರನ್ನು ಭಾನುವಾರ ರಾತ್ರಿಯಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ. ಇದನ್ನು ಖಂಡಿಸುವುದಾಗಿ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. 

ರೈತರ ಮೇಲೆ ಸಚಿವರ ಆಕ್ರೋಶ

ಪ್ರತಿಭಟನೆ ನಡೆಸುತ್ತಿದ್ದ ರೈತರು ಬಿಜೆಪಿಯ ಮೂವರು ಕಾರ್ಯಕರ್ತರು ಮತ್ತು ವಾಹನದ ಚಾಲಕನನ್ನು ಹೊಡೆದು ಕೊಂದಿದ್ದಾರೆ. ಹಾಗಾಗಿ ರೈತರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಸಚಿವ ಅಜಯ್‌ ಮಿಶ್ರಾ ಒತ್ತಾಯಿಸಿದ್ದಾರೆ. 

‘ಜನರ ಗುಂಪಿನಲ್ಲಿ ಭಯೋತ್ಪಾದಕರೂ ಇದ್ದಿರಬೇಕು ಎಂಬ ಅನುಮಾನ ಇದೆ. ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಮತ್ತು ಖಡ್ಗದಿಂದ ಹಲ್ಲೆ ನಡೆಸಲಾಗಿದೆ. ಅವರನ್ನು ಹೊಡೆದೇ ಕೊಲ್ಲಲಾಗಿದೆ’ ಎಂದು ಮಿಶ್ರಾ ಆರೋಪಿಸಿದ್ದಾರೆ. 

‘ನನ್ನ ಮಗ ಸ್ಥಳದಲ್ಲಿ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ ಆತನನ್ನೂ ಕೊಂದು ಹಾಕುತ್ತಿದ್ದರು’ ಎಂದು ಮಿಶ್ರಾ ಹೇಳಿದ್ದಾರೆ.

ಸಚಿವ ಮಿಶ್ರಾ ಪ್ರಚೋದನೆ?

ಲಖಿಂಪುರ–ಖೇರಿ ಜಿಲ್ಲೆಯಲ್ಲಿ ಅಜಯ್‌ ಮಿಶ್ರಾ ಅವರನ್ನು ‘ಮಹಾರಾಜ’ ಎಂದೇ ಸಂಬೋಧಿಸುತ್ತಾರೆ. ಅವರ ವಿರುದ್ಧ ಹಲವು ಅಪರಾಧ ಪ್ರಕರಣಗಳು ಹಿಂದೆ ದಾಖಲಾಗಿದ್ದವು. 

ಲಖಿಂಪುರ–ಖೇರಿ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ ಅವರನ್ನು ಇತ್ತೀಚಿನ ಪುನರ್‌ ರಚನೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿತ್ತು. ತಮಗೆ ಕಪ್ಪು ಬಾವುಟ ತೋರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವರು ಹೇಳಿದ್ದು ರೈತರನ್ನು ಕೆರಳಿಸಿತ್ತು. 

‘ನನ್ನ ನಿಜವಾದ ತಾಕತ್ತು ತೋರಿದರೆ ಈ ರೈತರು ಗ್ರಾಮ ಬಿಡಿ, ಜಿಲ್ಲೆಯನ್ನೇ ಬಿಟ್ಟು ಓಡಬೇಕಾಗುತ್ತದೆ’ ಎಂದು ಮಿಶ್ರಾ ಅವರು ಕೆಲ ದಿನಗಳ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದರು. 

‘ನಾನು ವಾಹನದಿಂದ ಕೆಳಗೆ ಇಳಿದರೆ ಅವರಿಗೆ (ರೈತರಿಗೆ) ಓಡುವುದಕ್ಕೂ ಸಮಯ ಸಿಗದು... ಇಲ್ಲಿರುವ ಜನರಿಗೆ ನನ್ನ ಹಿನ್ನೆಲೆ ತಿಳಿದಿದೆ’ ಎಂದೂ ಹೇಳಿದ್ದರು.

2003ರಲ್ಲಿ ಕೊಲೆ ಪ್ರಕರಣವೊಂದರಲ್ಲಿಯೂ ಅವರ ಹೆಸರು ಕೇಳಿ ಬಂದಿತ್ತು. ಮತ್ತೆ ಅವರು ಖುಲಾಸೆಗೊಂಡಿದ್ದರು.  

ಯಾರೂ ಹೊಣೆ ಹೊರಲ್ಲ: ಸುಪ್ರೀಂ ಕೋರ್ಟ್‌

ಲಖಿಂಪುರ–ಖೇರಿಯಲ್ಲಿ ನಡೆದಂತಹ ಘಟನೆಗಳು ನಡೆದಾಗ ಅದರ ಹೊಣೆಯನ್ನು ಯಾರೂ ಹೊತ್ತುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ರೈತರ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿರುವುದು ದುರದೃಷ್ಟಕರ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದ್ದಕ್ಕೆ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಸಿ.ಟಿ.ರವಿಕುಮಾರ್‌ ಅವರ ಪೀಠವು ಹೀಗೆ ಪ್ರತಿಕ್ರಿಯೆ ಕೊಟ್ಟಿತು. 

ಜಂತರ್‌ ಮಂತರ್‌ನಲ್ಲಿ ಸತ್ಯಾಗ್ರಹಕ್ಕೆ ಅವಕಾಶ ಕೊಡಬೇಕು ಎಂದು ಕೋರಿ ರೈತ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. 

ರೈತರ ಆಕ್ರೋಶ

ಲಖಿಂಪುರ–ಖೇರಿ ಘಟನೆಯನ್ನು ಖಂಡಿಸಿ ದೆಹಲಿಯ ಸಿಂಘು ಗಡಿಯಲ್ಲಿ ರೈತರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕಪ್ಪು ಬಾವುಟ ಪ್ರದರ್ಶಿಸಲಾಯಿತು. 

ಉತ್ತರ ಪ್ರದೇಶದ ಫಿಲಿಭಿತ್‌, ಬಾಗ್‌ಪತ್‌, ಮುಜಫ್ಫರ್‌ನಗರ ಮತ್ತು ಇತರ ಸ್ಥಳಗಳಲ್ಲಿ ರೈತರು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಖನೌದಲ್ಲಿಯೂ ಹಲವು ವಾಹನಗಳನ್ನು ಜಖಂಗೊಳಿಸಲಾಗಿದೆ. 

***

ರೈತರ ಮೇಲೆ ನಡೆಸಿದ ಅಮಾನವೀಯ ಹಲ್ಲೆಯ ಸಂತ್ರಸ್ತರನ್ನು ರಾಜಕೀಯ ನಾಯಕರು ಭೇಟಿಯಾಗುವುದನ್ನು ತಡೆಯುವ ಹಕ್ಕು ಸರ್ಕಾರಕ್ಕೆ ಇಲ್ಲ

-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

***

 

ರೈತರ ಹತ್ಯೆಗೆ ಕಾರಣವಾದ ಲಖಿಂಪುರ–ಖೇರಿಯಲ್ಲಿ ನಡೆದ ಘಟನೆಗಳು ಯಾವುದೇ ನಾಗರಿಕ ಸಮಾಜದಲ್ಲಿ ಕ್ಷಮಾರ್ಹವಲ್ಲ. ಪ್ರತಿಭಟನೆನಿರತ ರೈತರು ನಮ್ಮ ಸೋದರರು

-ವರುಣ್‌ ಗಾಂಧಿ, ಬಿಜೆಪಿ ಸಂಸದ

***

ಈ ದೇಶದಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವ ಅಲ್ಲ, ನಿರಂಕುಶಾಧಿಪತ್ಯ. ಬಿಜೆಪಿ ಭರವಸೆ ಕೊಟ್ಟದ್ದು ರಾಮ ರಾಜ್ಯವಾದರೆ, ಇಲ್ಲಿ ಈಗ ಇರುವುದು ಹತ್ಯಾರಾಜ್ಯ

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ನಿರಂಕುಶಾಧಿಕಾರಿ ಮಾತ್ರ ಹೀಗೆ ಮಾಡಬಹುದು. ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಿಜೆಪಿ ಬಯಸಿದೆಯೇ? ನಾಗರಿಕ ಹಕ್ಕುಗಳ ಉಲ್ಲಂಘನೆಯು ಸಂವಿಧಾನ ವಿರೋಧಿ

-ಅಶೋಕ್‌ ಗೆಹ್ಲೋಟ್‌, ರಾಜಸ್ಥಾನ ಮುಖ್ಯಮಂತ್ರಿ

***

ಹಿಂಸಾಚಾರದಲ್ಲಿ ಭಾಗಿಯಾದವರು ರೈತರಲ್ಲ. ಅವರೆಲ್ಲರೂ ವಿವಿದ ರಾಜಕೀಯ ಪಕ್ಷಗಳಿಗೆ ಸೇರಿದವರು. ಎಡಪಂಥೀಯ ವಿಧಾನದಲ್ಲಿ ಘಟನೆ ನಡೆದಿದೆ

-ಭಾರತೀಯ ಕಿಸಾನ್‌ ಸಂಘ, ಆರ್‌ಎಸ್ಎಸ್‌ನ ಅಂಗಸಂಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು